ಎಳ್ಳೆಲ್ಲೂ ನೋಡಲಿ...

ಎಳ್ಳುಂಡೆ, ಎಳ್ಳಿನ ಹೋಳಿಗೆ, ಎಳ್ಳು ಹಚ್ಚಿ ಸುಟ್ಟಿರುವ ಸಜ್ಜೆ ರೊಟ್ಟಿ, ಎಳ್ಳು ತುಂಬಿದ ಎಣ್ಣಗಾಯಿ ಪಲ್ಯ, ಎಳ್ಳಿನ ಖಾದ್ಯ ಎಂದರೆ ಯಾರಿಗೆ ತಾನೆ ಬಾಯಲ್ಲಿ ನೀರೂರದು! ರುಚಿಪ್ರಿಯರಿಗಷ್ಟೆ ಎಳ್ಳು ಖುಷಿಕೊಡುತ್ತೆ ಎನ್ನಬೇಡಿ. ಎಳ್ಳು ಬೆಳೆಯುವ ಬಿಸಿಲೂರಿನ ಬಡ ರೈತ ಕುಟುಂಬಗಳಲ್ಲೂ ಸಂತಸದ ಕನಸು ಬಿತ್ತಿದೆ. ಮೂರು ವರ್ಷ ಇವರು ಅನುಭವಿಸಿದ ಬರದ ಸಂಕಷ್ಟಗಳಿಗೆ ಹೊಲದಲ್ಲಿ ನಳ ನಳಿಸುತ್ತಿರುವ ಎಳ್ಳು ನೀರು ಬಿಡಲಿದೆ.
ಎಳ್ಳಿನ ಧಮಾಕ
ಈ ಸಲದ ಮುಂಗಾರು ಹಂಗಾಮಿಗೆ ನೂರಾರು ಎಕರೆ ಖುಷ್ಕಿ ಭೂಮಿಯಲ್ಲಿ ಬಿತ್ತನೆ ಮಾಡಿರುವ ಎಳ್ಳು ಭರ್ಜರಿಯಾಗಿ ಬೆಳೆದಿದೆ. ಹಚ್ಚ ಹಸಿರಿನ ಹೊಲದಲ್ಲಿ ಎಳ್ಳಿನ ಕಾರುಬಾರು ಜೋರಾಗಿದೆ. ಮಳೆಯಾಶ್ರೀತ ಎಳ್ಳಿನ ಫಸಲಿನ ಗಟ್ಟಿತನ ನೋಡಿದರೆ ತಿಂಗಳೊಪ್ಪತ್ತಿನಲ್ಲಿ ಭರ್ಜರಿ ಎಳ್ಳಿನ ಧಮಾಕ ಸದ್ದು ಮಾಡುವುದಂತೂ ಖರೆ.
ಎಳ್ಳಿನ ಕಣಜ
ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಬಯಲುಸೀಮೆಯ ಎಳ್ಳಿನ ಕಣಜವೆಂದೆ ಪ್ರಸಿದ್ಧಿ. ಉತ್ತಮ ಮಳೆ ಬಂದು ಫಸಲು ಚೆನ್ನಾಗಿ ಬಂದ ಋತುವಿನಲ್ಲಿ ಇಲ್ಲಿಂದ ನೂರಕ್ಕೂ ಅಧಿಕ ಲೋಡ್ ಎಳ್ಳು ರಾಜ್ಯದ ಮಾರುಕಟ್ಟೆಗೆ ಪೂರೈಕೆಯಾಗಿರುವ ಇತಿಹಾಸವಿದೆ. ಆ ದಿನಗಳು ಮತ್ತೆ ಮರುಕಳಿಸುವಂತಿದೆ ಈಗಿನ ಫಸಲು. ಇನ್ನೂ ಪಕ್ಕದ ಆನೆಕಲ್ಲು ತಾಂಡ, ಹೊಸಕೇರಿ, ಮಾದೂರು, ಪಿಲ್ಲೋಬನಹಳ್ಳಿ, ನಾಣ್ಯಾಪುರ ಈ ಕಣಜದ ಸಹವರ್ತಿಗಳು. ತಾಲೂಕಿನ ಪೂರ್ವ ದಿಕ್ಕಿನ ಕುರುಚಲುಕಾಡು, ಸಣ್ಣ ಪ್ರಮಾಣದ ಗುಡ್ಡದ ತಪ್ಪಲಿನ ಅಂಚು ಹೊಂದಿರುವ ಈ ಪ್ರದೇಶದ ಮಣ್ಣ ಎಳ್ಳು ಬೆಳೆಗೆ ಸೂಕ್ತ. ಈ ಕಾರಕ್ಕೆ ಹಲವು ದಶಕದಿಂದಲೂ ಮಳೆಯಾಶ್ರೀತವಾಗಿ ಇಲ್ಲಿನ ರೈತ ಕುಟುಂಬಗಳು ನೂರಾರು ಎಕರೆ ಪ್ರದೇಶದಲ್ಲಿ ಎಳ್ಳು ಬೆಳೆಯುತ್ತಿದ್ದಾರೆ.
ಬದುಕಿಗೆ ಆಸರೆ
ಒಂದು ರೀತಿಯಲ್ಲಿ ಎಳ್ಳು ಇವರ ಆರ್ಥಿಕ ಆಸರೆಯೂ ಹೌದು. ಮಕ್ಕಳ ಶಿಕ್ಷಣ, ಆರೋಗ್ಯ, ಮದುವೆ, ಶುಭ ಕಾರ್ಯ, ಬಂಗಾರ, ಬೈಕ್ ಖರೀದಿ... ಖರ್ಚು-ವೆಚ್ಚ ನಿರ್ಧಾರವಾಗುವುದೆಲ್ಲ ಆ ವರ್ಷ ಸಿಗುವ ಎಳ್ಳಿನ ಫಸಲಿನ ಮೇಲೆಯೇಯ. ಹೀಗಾಗಿ ಈ ಸೀಮೆಯ ಹತ್ತೂರಿನ ಆರ್ಥಿಕ ವಾಹಿವಾಟಿನಲ್ಲಿ ಎಳ್ಳು ಪ್ರಮುಖ ಪಾತ್ರ ವಹಿಸುತ್ತದೆ.
ಉತ್ತಮ ಧಾರಣೆ
ಎಳ್ಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಸದ್ಯ ಕ್ವಿಂಟಲ್ಗೆ ಎಂಟೂವರೆ ಸಾವಿರದಿಂದ ಹತ್ತು ಸಾವಿರವರೆಗೂ ಬೆಲೆ ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಎಳ್ಳು 120 ರು.ಗೆ ಹೆಚ್ಚಿದೆ. ಕರಿ, ಕೆಂಪು, ಬಿಳಿ ಎಂಬ ಮೂರು ತಳಿಯ ಎಳ್ಳು ಇದೆ. ಈ ಭಾಗದಲ್ಲಿ ಹೆಚ್ಚಾಗಿ ಕೆಂಪು, ಸಣ್ಣೆಳ್ಳು ಬಿತ್ತನೆ ಮಾಡುತ್ತಾರೆ. ಒಂದು ಎಕರೆಗೆ ಕಮ್ಮಿ ಎಂದರೆ ಐದಾರು ಕ್ವಿಂಟಲ್ ಫಸಲು ಬರುತ್ತದೆ. ಎಕರೆಗೆ 30ರಿಂದ 40 ಸಾವಿರ ರುಪಾಯಿ ಮೌಲ್ಯದ ಎಳ್ಳನ್ನು ರೈತರು ಬೆಳೆಯುತ್ತಾರೆ.
ಮಳೆಯಾಧಾರಿತವಾಗಿರುವುದರಿಂದ ಖರ್ಚು ಕಡಿಮೆ. ಬಿತ್ತಿದ ನಾಲ್ಕೂವರೆ ತಿಂಗಳಿಗೆಲ್ಲ ಫಸಲು ಕೈಗೆ ಬರುತ್ತದೆ. ಆದರೆ ಕಾಲ-ಕಾಲಕ್ಕೆ ಮಳೆ ಬಿಳಬೇಕಷ್ಟೆ. ಶಾಶ್ವತ ನೀರಾವರಿ ಯೋಜನೆಗಳಿಲ್ಲದ ದಶಮಾಪುರ ಪ್ರಾಂತ್ಯದ ಸುತ್ತಲಿನ ಹಳ್ಳಿಗಳಿಗೆ ಎಳ್ಳು ಲಾಭದಾಯಕ ಬೆಳೆಯೂ ಹೌದು.
-ಹುಳ್ಳಿ ಪ್ರಕಾಶ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


