ಕೃಷಿ-ಪರಿಸರ

ಹೋಗತಾಳೆ

ಹೋಗತಾಳೆ
Published On :

ಫಕ್ಕನೆ ನೋಡಿದರೆ ಇವು ಅಡಕೆ ಮರಗಳೇ. ಅದರೆ, ಬಳಿ ಬಂದು ದಿಟ್ಟಿಸಿ ನೋಡಿದರೆ ಇದೊಂದು ತಾಳೆ ಮರಗಳ ಸಮೂಹ ಎಂದು ತಿಳಿಯುತ್ತದೆ. ತನ್ನ ಒಡಲಲ್ಲಿ ಅಂದಾಜು ಲಕ್ಷ ತಾಳೆ ಗಿಡ ಪೋಷಿಸುತ್ತಿರುವ ಇದು 13 ಕಿಮೀ ಉದ್ದ, 5 ಕಿಮೀ ಅಗಲ ಹರಡಿ, ಬರೋಬ್ಬರಿ 750 ಎಕರೆ ವ್ಯಾಪಿಸಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ತಾಳೆ ಕಾಡು ಕಂಡುಬರುತ್ತದೆ. ಇದು ಚಿಲಕನಹಟ್ಟಿ- ಮಗೆಮಾವಿನಹಳ್ಳಿಯಿಂದ ಹಿಡಿದು ತಿಮ್ಮಲಾಪುರ, ಒಂಟಿಗೋಳು ತಾಂಡದವರೆಗೂ ಹರಡಿಕೊಂಡಿದೆ. ಅಲ್ಲದೆ, ಈ ಭಾಗದ ಹೊಲಗಳಲ್ಲಿ ಈ ತಾಳೆ ಮರಗಳು ಸರ್ವೇ ಸಾಮಾನ್ಯ.
ಆದರೆ, ಈ ತಾಳೆ ಕಾಡಿಗೆ ಇಂದು ಕಂಟಕ ಬಂದೊದಗಿದೆ. ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವ ಈ ಕಾಡಿನಿಂದಾಗಿ, ಪ್ರಾಕೃತಿಕ ಸಂಪತ್ತು, ಜೀವ ವೈವಿಧ್ಯಕ್ಕೆ ಅಗಾಧ ಹೊಡೆತ ನೀಡುವ ಜತೆಗೆ ತಾಪಮಾನದ ಏರಿಕೆಗೆ ಪರೋಕ್ಷ ಕಾರಣವಾಗಿದೆ.
ಶ್ರೀಮಂತ ಇತಿಹಾಸ
ಇದರ ನಂಟು ವಿಜಯನಗರ ಸಾಮ್ರಾಜ್ಯದೊಂದಿಗೆ ಬೆಸೆದಿದೆ. ತಾಳೆ ಗಿಡಗಳಲ್ಲಿ ಅಸಂಖ್ಯಾತ ಗಿಣಿಗಳು ಆವಾಸವಾಗಿವೆ. ವಿಜಯನಗರ ಕಾಲದಲ್ಲಿ ಇಲ್ಲಿಂದ ಗಿಣಿ ಹಿಡಿದುಕೊಂಡು ಹೋಗಿ, ತರಬೇತಿ ಕೊಟ್ಟು, ಹಂಪೆಯ ಸೂಲೆ ಬಜಾರ್‌ನಲ್ಲಿ ಮಾರುತ್ತಿದ್ದರಂತೆ. ತೆಲುಗು ಭಾಷೆಯಲ್ಲಿ ಚಿಲಕ ಅಂದರೆ ಗಿಳಿ ಎಂದರ್ಥ. ಈ ತಾಳೆ ಕಾಡಿನ ಸಮೀಪವಿರುವ ಗ್ರಾಮವೊಂದಕ್ಕೆ ಚಿಲಕನಹಟ್ಟಿ ಎಂದು ಕರೆದಿರುವುದು ಇದಕ್ಕೆ ಸಾಕ್ಷಿ.
ಬರವಣಿಗೆ ಬಳಕೆ
ಇಲ್ಲಿನ ತಾಳೆ ಗರಿ ಬಳಸಿ ಬರವಣಿಗೆ ಮಾಡುತ್ತಿದ್ದರು ಎನ್ನುತ್ತದೆ ಇತಿಹಾಸ. ಈ ಹಿಂದೆ ಈ ಭಾಗದಲ್ಲಿ ಬರ ಬಂದಾಗಲೆಲ್ಲಾ ಈ ತಾಳೆಯ ಹಿಟ್ಟಿನಿಂದ ಅನೇಕರು ಹೊಟ್ಟೆ ತುಂಬಿಸಿಕೊಂಡಿದ್ದಾರೆ. ಇನ್ನು ಇಂದಿಗೂ ಈ ಕಾಡಿನಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಗಿಳಿಗಳಿದ್ದು, ಇವುಗಳೊಂದಿಗೆ ಕರಡಿ, ಕಾಡು ಹಂದಿ, ಚಿರತೆ, ಮೊಲ ಇತ್ಯಾದಿ ಅಸಂಖ್ಯಾತ ವನ್ಯಜೀವಿಗಳಿವೆ.
ಉಪಯುಕ್ತ
ತಾಳೆ ಹತ್ತು- ಹಲವು ದೃಷ್ಟಿಯಿಂದ ಉಪಯುಕ್ತ. ತಾಳೆ ಮರ ಗಟ್ಟಿಮುಟ್ಟಾಗಿದ್ದು, ಮನೆಗೆ ಮುಟ್ಟಾಗಿ, ಇದರ ಗರಿಗಳು ಮನೆಯ ಚಪ್ಪರಕ್ಕೆ, ತಾಳೆ ಕೊಬ್ಬರಿ ತಿನ್ನಲು, ತಾಳೆ ಹಣ್ಣು ದೃಷ್ಟಿ ಗೊಂಬೆಗಳ ತಯಾರಿಕೆಗೆ, ಪಟಾಕಿ, ಗರ್ನಲಗಳ ರಚನೆಗೆ, ಕೃಷಿ ಪರಿಕರಗಳು... ಹೀಗೆ ಹಲವು ವಸ್ತುಗಳ ತಯಾರಿಕೆಗೆ ಬಳಸುತ್ತಾರೆ.
ಸ್ವಾರ್ಥಕ್ಕೆ ಬಲಿ
ಕೆಲವರ ಸ್ವಾರ್ಥ, ಲಾಲಸೆ, ಮೋಜಿಗೆ ತಾಳೆ ಮರಗಳು ಧರೆಗುರುಳುತ್ತಿವೆ. ತಾಳೆ ಕಾಡಿಗೆ ಬೆಂಕಿ ಇಡುವ, ಬೇಸಿಗೆಯ ಕಾಳ್ಗಿಚ್ಚು, ಕಳ್ಳ- ಕಾಕರ ಕಾಟದಿಂದ ನಾಶವಾಗುತ್ತಿದೆ. ತಾಳೆ ಮರಗಳಿಗಾಗಿ ಇರುವ ಏಕೈಕ ಸಂರಕ್ಷಿತ ಅರಣ್ಯ ಪ್ರದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಅರಣ್ಯ ಇಂದು ಕಡಿದಿಟ್ಟ ಅರಣ್ಯವಾಗುತ್ತಿದೆ. ಪರಿಣಾಮ ದಶಕಗಳ ಕೆಳಗಿದ್ದ ಕಾಡು ಇಂದಿಲ್ಲ. ಈ ಕಾಡು ಮುಂದಿನ ದಿನಗಳಲ್ಲಿ ಇರುತ್ತೆ ಎನ್ನುವ ನಂಬಿಕೆ ಇಲ್ಲ. ತಾಳೆ ಒಂದಿಂಚು ಬೆಳೆಯಲು ಸುಮಾರು ಎರಡು ವರ್ಷ ತೆಗೆದುಕೊಳ್ಳುತ್ತದೆ. ದುರಾದೃಷ್ಟವೆಂದರೆ ಕೆಲವು ಜನರ ಅವ್ಯಾಹತ ದಾಳಿಯಿಂದಾಗಿ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ದೊಡ್ಡ- ದೊಡ್ಡ ಮರಗಳು ಧರೆಗುರುಳುತ್ತಿವೆ. ಈಗಾಗಿ ಇಲ್ಲಿ ಶುದ್ಧ ಗಾಳಿ, ಕಾಲ- ಕಾಲಕ್ಕೆ ಮಳೆ ಅಪರೂಪವಾಗುತ್ತಿದೆ.
ಅರಣ್ಯ ಇಲಾಖೆ ಶ್ರಮ ನಿರರ್ಥಕ
ತಾಳೆ ಮರಗಳ ಉಳುವಿಗಾಗಿ ಸರಕಾರ ಕಾದಿಟ್ಟ ಅರಣ್ಯ ಪ್ರದೇಶವೆಂದು ಘೋಷಿಸಿ, ಸಂರಕ್ಷಣೆಗೆ ಅವಿರತ ಶ್ರಮಿಸುತ್ತಿದೆ. ಆದರೆ, ಸ್ಥಳೀಯರಿಂದ ನಿರೀಕ್ಷಿತ ಮಟ್ಟದ ಸಹಕಾರ, ಬೆಂಬಲ ಸಿಗುತ್ತಿಲ್ಲ. ಆದ್ದರಿಂದ ತಾಳೆ ಕಾಡಿನ ಸಂರಕ್ಷಣೆ ಮತ್ತು ಬೆಳವಣಿಗೆ ಪ್ರಮುಖ ಸವಾಲಾಗಿದೆ. ಆದರೂ ಅರಣ್ಯ ಇಲಾಖೆ ಲಭ್ಯವಿರುವ ಸಿಬ್ಬಂದಿಯಿಂದ ಸಂರಕ್ಷಿಸಲು ಶಕ್ತಿಮೀರಿ ಪ್ರಯತ್ನ ಮಾಡಿದೆ.
ಕಳೆದ 30 ವರ್ಷಗಳಲ್ಲಿ ಹೊಸದಾಗಿ 24 ಸಾವಿರ ತಾಳೆ ಬೀಜ ಬಿತ್ತನೆ ಮಾಡಿದೆ. ಅರಣ್ಯದ ಸುತ್ತ ದೊಡ್ಡ- ದೊಡ್ಡ ಕಂದಕ ನಿರ್ಮಿಸಿದೆ. ಆ ಮೂಲಕ ಅಕ್ರಮವಾಗಿ ಜನ, ಜಾನುವಾರು ಪ್ರವೇಶಿಸದಂತೆ ನೋಡಿಕೊಳ್ಳಲಾಗುತ್ತಿದೆ. ಅರಣ್ಯದ ಮಧ್ಯೆ ಸಾವಿರಾರು ಸಂಖ್ಯೆಯಲ್ಲಿ ಕೃಷಿ ಹೊಂಡ, ಇಂಗು ಗುಂಡಿ, ಚೆಕ್ ಡ್ಯಾಂ ನಿರ್ಮಿಸಿ, ನೀರು ಸಂಗ್ರಹಕ್ಕೆ ವ್ಯವಸ್ಥೆ ರೂಪಿಸಲಾಗಿದೆ. ಇದರಿಂದ ತಾಳೆ ಮರ- ಗಿಡಗಳ ಏಳಿಗೆಗೆ ಸಹಕಾರಿಯಾಗಿದೆ. ಚೆರ್ರಿ, ಸಿಹಿ ಹುಣಸೆ, ಸೀತಾಫಲ ಇತ್ಯಾದಿ ಫಲ ನೀಡುವ ಗಿಡ ಹಾಕಲಾಗಿದೆ. ಇವು ವನ್ಯಜೀವಿಗಳು ನೆಲೆಸಲು ಅನುಕೂಲವಾಗಿದೆ.
ಸಂರಕ್ಷಿತ ವೃಕ್ಷವಾಗಲಿ
ಜಗತ್ತಿನಲ್ಲಿ ಪಶ್ಚಿಮ ಘಟ್ಟಗಳು, ಅಂಡಮಾನ್ ನಿಕೋಬಾರ್, ಶ್ರೀಲಂಕಾ ದ್ವೀಪಗಳಲ್ಲಿ ಮಾತ್ರ ತಾಳೆಮರ ಹೆಚ್ಚಿರುವುದು ಕಂಡುಬರುತ್ತಿದೆ.
ಇನ್ನಾದರೂ ತಾಳೆ ಮರವನ್ನು ಸಂರಕ್ಷಿತ ವೃಕ್ಷವೆಂದು ಘೋಷಿಸಬೇಕಿದೆ. ಸರಕಾರದ ಜತೆಗೆ ಸ್ಥಳೀಯರೂ ಕೈಜೋಡಿಸಿ ಈ ತಾಳೆ ಅರಣ್ಯವನ್ನು ರಕ್ಷಿಸಬೇಕಿದೆ.


= ಸ್ವರೂಪಾನಂದ. ಎಂ.               
 ಕೊಟ್ಟೂರು


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.