ಪರಿಸರ ಪಡೆ

ಇದೇನು ಪರಿಸರ ಸಂರಕ್ಷಣೆಗೂ ಸೈನ್ಯವಾ ಎಂಬ ಅಚ್ಚರಿಯೇ? ಹೌದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂಥದ್ದೊಂದು ಸಂಘಟನೆ ಹಸಿರ ಸೇವೆಗೆಂದೇ ಇದೆ. ಭೂ ತಾಯಿಯ ಋಣವನ್ನು ಸ್ವಲ್ಪ ಮಟ್ಟಿಗಾದರೂ ತೀರಿಸುವ ಸಲುವಾಗಿ ಮೈಸೂರಿನ ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ (ಎಂಬಿಸಿಟಿ) ಹಾಗೂ ಅದರ ಸೋದರ ಸಂಸ್ಥೆಗಳಾದ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ), ಕಾನ್ಫಿಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ (ಸಿಆರ್‌ಇಡಿಎಐ- ಕ್ರೆಡಾಯ್) ಮತ್ತು ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (ಐಜಿಬಿಸಿ) ಒಡಗೂಡಿ 'ಹಸಿರು ಸೈನ್ಯ' ರಚಿಸಿಕೊಂಡಿವೆ. ಈ ಎಲ್ಲ ಸಂಘಟನೆಗಳು ಸೇರಿ ವಿಶ್ವ ಪರಿಸರ ಮಾಸ ಹಮ್ಮಿಕೊಂಡು ತಿಂಗಳು ಪೂರ್ಣ ಹಸಿರಿಗೆ ಉತ್ತೇಜನ ನೀಡುವ ಕಾರ್ಯಕ್ರಮ ನಡೆಸುವುದು ವಿಶೇಷ.
ಸಾರ್ವಜನಿಕರ ಸ್ಪಂದನೆ
ಸಮಾಜದ ಎಲ್ಲ ವರ್ಗದ ಮತ್ತು ಎಲ್ಲ ವಯೋವಾನದವರಿಗೆ ಪರಿಸರ ಸಂರಕ್ಷಣೆಯ ಬಗ್ಗೆ ತಿಳಿಹೇಳುವುದೇ ಇದರ ಉದ್ದೇಶ ಅಂತಾರೆ ಐಜಿಬಿಸಿ ಅಧ್ಯಕ್ಷ ಎಂ.ಜಿ. ಸೋಮಶೇಖರ್. 'ವಿಶ್ವದ ಮೇಲೆ ಸ್ಥಳೀಯ ಕಾರ್ಯದ ಪರಿಣಾಮ' ಧ್ಯೇಯ ವಾಕ್ಯದೊಂದಿಗೆ ನಡೆಸಿದ ಪರಿಸರ ಪುನಶ್ಚೇತನ ಕಾರ್ಯಕ್ರಮಗಳಲ್ಲಿ ಸಾವಿರಾರು ನಾಗರಿಕರು ಭಾಗವಹಿಸಿ, ಹಸಿರು ಉಳಿಸುವ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.
ರಚನಾತ್ಮಕ ಕಾರ್ಯಕ್ರಮ
ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ, ಭಿತ್ತಿಪತ್ರ ರಚನಾ ಸ್ಪರ್ಧೆ, ಕಾಲೇಜು ವಿದ್ಯಾರ್ಥಿಗಳಿಗೆ ವಾಕ್ಚಾತುರ್ಯ, ಪ್ರಶ್ನೋತ್ತರ ಸ್ಪರ್ಧೆ, ಉದ್ಯಮಿಗಳಿಗೆ ಜೈವಿಕ ಇಂಧನ, ಜೈವಿಕ ಉತ್ಪನ್ನಗಳ ಬಗ್ಗೆ ತರಬೇತಿ, ಕಿರುಚಿತ್ರ ತಯಾರಿಕೆ ಸ್ಪರ್ಧೆ ನಡೆಸಲಾಯಿತು. ಎಲ್ಲ ಸ್ಪರ್ಧೆಗಳು ಪ್ರಕೃತಿ, ಬೆಳಕು, ಗಾಳಿ- ನೀರು, ಮೈಸೂರು ಪರಿಸರ ಅಭಿವೃದ್ಧಿ, ಸುಸ್ಥಿರ ಅಭಿವೃದ್ಧಿ ಸತ್ಯವೇ, ಮಿಥ್ಯವೇ ಹೀಗೆ ಪರಿಸರ ಮತ್ತು ಹಸಿರು ಆಚರಣೆಗೆ ಸಂಬಂಧಿಸಿದ್ದವು.
ಬೀದಿ ನಾಟಕ
ಪರಿಸರ ಸಂರಕ್ಷಣೆ ಮತ್ತು ನೀರಿನ ಮಿತ ಬಳಕೆಯ ಬಗ್ಗೆ ಬೀದಿ ನಾಟಕಗಳನ್ನು ಪ್ರದರ್ಶಿಸಲಾಯಿತು. ಪದ್ಮಶ್ರೀ ಡಾ. ಶರತ್ ಕಾಳೆ 'ಕಸದಿಂದ ರಸ' ಕುರಿತು ಮಾತನಾಡಿದರು. ಹಸಿರು ಕ್ರಾಂತಿಯ ಹಲವು ಕಾರ್ಯಕ್ರಮ ನಡೆಸಿ, ಜನಜೀವನ ಮಾರ್ಪಡಿಸಿರುವ ತಿಂಬಕ್ತುವಿನ ಬಬ್ಲು ಗಂಗೂಲಿ ಪರಿಸರ ಕುರಿತು ಅನಿಸಿಕೆ ಹಂಚಿಕೊಂಡರು. ಪುಣೆಯ ಸತೀಶ್ ಮಗರ್, ಭೂಮಾಲೀಕರು ಹಾಗೂ ರೈತರ ಪಾಲುದಾರಿಕೆಯಿಂದ ನಿರ್ಮಿಸಿದ ಅತಿ ದೊಡ್ಡ ಮಗರ್‌ಪಟ್ಟಾ ನಗರದ ಬಗ್ಗೆ ಮಾಹಿತಿ ತಿಳಿಸಿದರು.
ಹಸಿರು ಮನೆ
ಗೃಹಿಣಿಯರಿಗಾಗಿ 'ಹಸಿರು ಸಂಜೆ' ಕಾರ್ಯಕ್ರಮವನ್ನು ನಡೆಸಲಾಯಿತು. ನಿಮ್ಮ ಸುಂದರ ಮನೆಯನ್ನು ಹಸಿರು ಮನೆಯಾಗಿ ಪರಿವರ್ತಿಸಿ ಎಂದು ಅವರಿಗೆ ಮನವರಿಕೆ ಮಾಡಿಕೊಡಲಾಯಿತು. ಕಟ್ಟಡಗಳ ಲೀಡ್ (ಎಲ್‌ಇಇಡಿ) ರೇಟಿಂಗ್ ಬಗ್ಗೆ ಕಾರ್ಯಾಗಾರ ನಡೆಯಿತು. ಮೂರು ದಿನಗಳ ಮೈ ಗ್ರೀನ್ ವಸ್ತು ಪ್ರದರ್ಶನವೂ ನಡೆಯಿತು. ಹಸಿರು ಉತ್ಪನ್ನಗಳ ಬಗ್ಗೆ, ಅವುಗಳ ಮೌಲ್ಯ ಮತ್ತು ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು. ಬಿಎಐನ ಮಹಿಳಾ ಘಟಕದ ಸ್ಫೂರ್ತಿ ಎಲ್ಲಾ ಕಾರ್ಯಕ್ರಮಗಳಿಗೂ ಸಾಥ್ ನೀಡಿ, ಯಶಸ್ಸಿಗೆ ಕಾರಣವಾಯಿತು. ಈ ಸಂಘಟನೆಗಳು 'ಹಸಿರು ಸೈನ್ಯ'ದ ಮೂಲಕ ಪರಿಸರ ಉಳಿಸುವ ಕಾಯಕವನ್ನು ಮುಂದುವರಿಸಲಿವೆ.
= ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


