ಎಲೆಮರೆ ಸಾಧಕ

ತುಂಡು ಜಮೀನು ಇದ್ದವರು ಏನು ಬೆಳೀಬೇಕು ಸ್ವಾಮಿ, ಅದರಲ್ಲಿ ಎಷ್ಟು ಲಾಭ ದಕ್ಕೀತು...
- ಇದು ಚಿಕ್ಕ ಹಿಡುವಳಿದಾರರ ಪ್ರಶ್ನೆ. ಇಂಥದ್ದೊಂದು ಸವಾಲಿಗೆ ಜವಾಬು ಇಲ್ಲುಂಟು.
ಸಿಪ್ರಿಯನ್ ರೊಡ್ರಿಗಸ್ ಅವರಿಗೆ ಇರುವುದು ಕೇವಲ 80 ಸೆಂಟ್ಸ್ ಒಣಭೂಮಿ. ಇದರಲ್ಲಿ ಅಡಕೆ, ತೆಂಗು, ಬಾಳೆ, ಪಪ್ಪಾಯಿ, ಕರಿಮೆಣಸು, ಮಂಗಳೂರು ಮಲ್ಲಿಗೆಗಳಲ್ಲದೆ 20 ಸೆಂಟ್ ಸ್ಥಳದಲ್ಲಿ ವೀಳ್ಯದೆಲೆಯ ಕೃಷಿಯನ್ನೂ ಮಾಡಿದ್ದಾರೆ.
ಇದಕ್ಕೆ ಕಾಳುಮೆಣಸಿನ ಬಳ್ಳಿಯ ಹಾಗೆ ಪರಿಹಾರವಿಲ್ಲದ ರೋಗದ ಬಾಧೆಯಿದೆ. ದೇವರ ದಯೆಯಿಂದ ಅದು ಬರದಿದ್ದರೆ ವೀಳ್ಯದೆಲೆ ಅತ್ಯಧಿಕ ಆದಾಯ ತರುವ ಬೆಳೆಯೆಂಬುದು ಖಂಡಿತ ಎಂದು ಅದರಲ್ಲಿ ತಮಗಿರುವ 25 ವರ್ಷಗಳ ಅನುಭವ ಬಿಚ್ಚಿಡುತ್ತಾರೆ ಅವರು.
ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಇಜ್ಜಾಳ ಎಂಬಲ್ಲಿದೆ ಸಿಪ್ರಿಯನ್ ಮಾಡಿದ ವೀಳ್ಯದೆಲೆಯ ಸಂಪನ್ನ ಕೃಷಿಯಿದೆ. ಸದ್ಯಕ್ಕೆ ಸಿಪ್ರಿಯನ್ 500 ಬಳ್ಳಿ ಸಾಕುತ್ತಿದ್ದಾರೆ.
ಹೀಗಿದೆ ವೀಳ್ಯದೆಲೆ ಕೃಷಿ
ಎರಡು ಸಾಲುಗಳಲ್ಲಿ ಬಳ್ಳಿ ನೆಡುವಂತೆ ಏರು ಮಡಿ ಸಿದ್ಧಗೊಳಿಸಿದ್ದಾರೆ. ಎರಡೂ ಬದಿಗಳಲ್ಲಿ ನೀರು ಹರಿದು ಹೋಗಲು ಚರಂಡಿಯಿದೆ. ಸಾಲುಗಳ ಮಧ್ಯೆ 2 ಅಡಿ ಅಂತರವಿದೆ. ಜೂನ್ ತಿಂಗಳಲ್ಲಿ ಎರಡು ಅಡಿ ಉದ್ದದ ಕೋಲು ತಳಿಯ ಆರೋಗ್ಯಕರ ಬಳ್ಳಿ ನಾಟಿ ಮಾಡಿ ಆಧಾರಕ್ಕೆ ಗೂಟ ಹಾಕಿದ್ದಾರೆ. ಒಣಗಿದ ಸೆಗಣಿ ಗೊಬ್ಬರ ಬುಡಕ್ಕಿರಿಸಿದ್ದಾರೆ. ಜೀವ ಹಿಡಿಯುವ ತನಕ ಬಳ್ಳಿಗೆ ಬಿಸಿಲು ತಾಗದಂತೆ ಹಸುರೆಲೆಗಳಿಂದ ಮುಚ್ಚಿದ್ದಾರೆ.
ಗೊಬ್ಬರಕ್ಕೆ ಬರವಿಲ್ಲ
ಬೇಸಗೆಯಲ್ಲಿ ಕಸ, ಕಡ್ಡಿ, ಒಣಗಿದ ಹುಲ್ಲನ್ನು ಮಣ್ಣುಸಹಿತ ಹಾರೆಯಿಂದ ಕೆತ್ತಿ ರಾಶಿ ಹಾಕಿ ಬೆಂಕಿ ಹಚ್ಚಿ ತಯಾರಿಸಿದ 2 ಲಾರಿ ಲೋಡು ಪ್ರಮಾಣದ ಸುಡುಮಣ್ಣು ಸಿಪ್ರಿಯನ್ ಅವರಲ್ಲಿದೆ. ಇದನ್ನೇ ಯಥೇಚ್ಛವಾಗಿ ವೀಳ್ಯದೆಲೆ ಬಳ್ಳಿಗಳ ಬುಡಕ್ಕೆ ಹಾಕುತ್ತಾರೆ. ತಿಂಗಳಿಗೊಮ್ಮೆ ಸೆಗಣಿ ಗೊಬ್ಬರವನ್ನು ಬಳ್ಳಿಗಳಿಗೆ ಪೂರೈಸಲು ತಪ್ಪುವುದಿಲ್ಲ. ಮೂರು ದನಗಳಿರುವ ಕಾರಣ ಗೊಬ್ಬರಕ್ಕೆ ಬರವಿಲ್ಲ. ಬಳ್ಳಿಗೆ ಎರಡು ತಿಂಗಳಾದಾಗ ಬುಡಕ್ಕೆ ಎತ್ತರವಾದ ಮರಗಳ ಕೊಂಬೆಗಳನ್ನು ಆಧಾರವಾಗಿ ಕೊಡಬೇಕಾಗುತ್ತದೆ.
ಕೀಟನಾಶಕ ಅಗತ್ಯವಿಲ್ಲ
ರಸಗೊಬ್ಬರ ಹಾಕದೆ ವೀಳ್ಯದೆಲೆ ಸಮೃದ್ಧವಾಗುವುದಿಲ್ಲ ಎಂಬುದು ಸಿಪ್ರಿಯನ್ ಅನುಭವ. ಆದರೆ, ಯಾವುದೇ ಕೀಟನಾಶಕದ ಅಗತ್ಯವಿಲ್ಲ. ಪ್ರತಿ ಬುಡಕ್ಕೆ 5ಛ0 ಗ್ರಾಂ ಪ್ರಮಾಣದಲ್ಲಿ ಡಿಎಪಿ ರಸಗೊಬ್ಬರವನ್ನು ತಿಂಗಳಿಗೊಮ್ಮೆ ಹಾಕಬೇಕಾಗುತ್ತದೆ. ಹಾಗೆಯೇ ಕಟ್ಟಿಗೆಯ ಬೂದಿಯೂ ಅದಕ್ಕೆ ಯೋಗ್ಯ ರಂಜಕ ನೀಡುತ್ತದಂತೆ. ಬೇಸಗೆಯಲ್ಲಿ ಧಾರಾಳವಾಗಿ ನೀರು ಪೂರೈಸಿದರೆ ಎಲೆಗಳು ಅಗಲವಾಗಿ ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತವೆ.
ಬೆಳ್ತಂಗಡಿ ಸಂತೆಯಲ್ಲಿ ಮಾರಾಟ
ಆರಂಭದಲ್ಲಿ ಸಿಗುತ್ತಿದ್ದ ಎಲೆ 24 ಸೂಡಿ(80 ಎಲೆಗಳಿಗೆ ಒಂದು ಸೂಡಿ) ಮಾತ್ರ ಇದ್ದರೆ ಈಗ ಎರಡು ವರ್ಷಗಳ ಬೆಳವಣಿಗೆಯಲ್ಲಿ ಅದರ ಹತ್ತು ಪಟ್ಟು ಹೆಚ್ಚು ಸಿಗುತ್ತದೆ. ಸೋಮವಾರದಂದು ಬೆಳ್ತಂಗಡಿಯ ಸಂತೆಗೆ ಎಲೆ ಒಯ್ಯುತ್ತಾರೆ. ಒಂದು ಸೂಡಿಗೆ 5ರಿಂದ 30 ತನಕ ಬೆಲೆಯಾಗುವುದುಂಟು. ವೀಳ್ಯದೆಲೆ ಕೊಯಿದು ಎಣಿಕೆ ಮಾಡಲು ಇಬ್ಬರು ಕೂಲಿಗಳು ಒಂದು ದಿನ ಬೇಕಾಗುತ್ತದೆ. ಇದನ್ನು ಬಿಟ್ಟರೆ ಎಲ್ಲ ಕೆಲಸವನ್ನೂ ಸಿಪ್ರಿಯನ್ ಮತ್ತು ಅವರ ಮಡದಿ ಲಿಲ್ಲಿ ಮಾಡುತ್ತಾರೆ. ಈ ಸಾಧಕನಿಗೆ ಆಟಿಡೊಂಜಿ ಕೂಟ ಸಮಾರಂಭದಲ್ಲಿ ಕೃಷಿ ಸಾಧನೆಗಾಗಿ ಸನ್ಮಾನಿಸಿದ್ದಾರೆ. (ಮೊ. 9741975152)
= ಪ.ರಾಮಕೃಷ್ಣ ಶಾಸ್ತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


