ತಾಪದೂರಿನ ಕೂಪ
ಮನ್ ಬಾವಿ ಹೆಸರು ಕೇಳಿದ್ದೀರಾ? ರಾಯಚೂರು ಜಿಲ್ಲೆಯಲ್ಲಿ ಸಾವಿರ ಸಂಖ್ಯೆಯಲ್ಲಿ ಕಾಣಸಿಗುವ ಈ ...

ಮನ್ ಬಾವಿ ಹೆಸರು ಕೇಳಿದ್ದೀರಾ? ರಾಯಚೂರು ಜಿಲ್ಲೆಯಲ್ಲಿ ಸಾವಿರ ಸಂಖ್ಯೆಯಲ್ಲಿ ಕಾಣಸಿಗುವ ಈ ಬಾವಿಗಳು ನಿರ್ಮಾಣವಾಗದೆ ಹೋಗಿದ್ದರೆ ಜಿಲ್ಲೆಯ ಇತಿಹಾಸದಲ್ಲಿ ಕುಡಿವ ನೀರಿಲ್ಲದೆ ಸತ್ತವರ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿರುತ್ತಿತ್ತು.
ಗಿರಕಿ ಬಾವಿ, ಮನ್ನಾಸಾಬನ ಬಾವಿ ಎಂದೇ ಹೆಸರುವಾಸಿಯಾಗಿರುವ ಈ ಬಾವಿಗಳ ಹಿನ್ನೆಲೆ ಹೀಗಿದೆ; 1928ರಿಂದ 1934ರ ಅವಧಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಭೀಕರ ಬರಗಾಲ. ಕುಡಿವ ನೀರಿಗೆ ಜಿಲ್ಲಾದ್ಯಂತ ಹಾಹಾಕಾರ. ಆಗ ನಿಜಾಮ ಸರ್ಕಾರದ ಭೌಗೋಳಿಕ ಸಮೀಕ್ಷೆಯ ನಿರ್ದೇಶಕ ಮತ್ತು ಬಾವಿ ಕೊರತೆ ವಿಭಾಗದ ವಿಶೇಷಾಧಿಕಾರಿಯಾಗಿದ್ದ ಕ್ಯಾಪ್ಟನ್ ಲಿಯೋನಾರ್ಡ್ ಮನ್ ಜಿಲ್ಲೆಯಲ್ಲಿ 1,500ಕ್ಕಿಂತಲೂ ಹೆಚ್ಚು ಬಾವಿಗಳನ್ನು ತೋಡಿಸಿದರು!
ಆಸ್ಟ್ರೇಲಿಯಾದಿಂದ ಬಂದಿದ್ದ ಲಿಯೋನಾರ್ಡ್ ಮನ್ ನಿಜಾಮ ಸರ್ಕಾರದಲ್ಲಿ ಗಣಿ ಎಂಜಿನಿಯರ್ ಆಗಿದ್ದರು. ಇವರನ್ನು ಅಕ್ಟೋಬರ್ 1935ರವರೆಗೂ ಭೌಗೋಳಿಕ ಸಮೀಕ್ಷೆಯ ನಿರ್ದೇಶಕ ಮತ್ತು ಬಾವಿ ಕೊರತೆ ವಿಭಾಗದ ವಿಶೇಷಾಧಿಕಾರಿಯಾಗಿ ನೇಮಿಸಲಾಗಿತ್ತು. ಎರವಲು ಸೇವೆಯ ಮೇಲೆ ರಾಯಚೂರು ಜಿಲ್ಲೆಗೆ ನಿಯುಕ್ತಿಗೊಂಡಿದ್ದ ಈ ಅಧಿಕಾರಿ, ಬಾವಿ ತೋಡಿಸಿ ನೀರಿನ ಬವಣೆಗೆ ವಿರಾಮ ನೀಡಿದರು. ನೀರಿನಿಂದ ಬರುವ ನಾರು ಹುಣ್ಣು ಸೋಂಕು ತಡೆಯುವಲ್ಲಿಯೂ ಈ ಬಾವಿಗಳ ನೀರು ಉಪಯುಕ್ತವಾಗಿತ್ತು.
ವಿವಿಧ ಕೋನಗಳಲ್ಲಿ
ರಾಯಚೂರು ಜಿಲ್ಲೆಯಲ್ಲಿ ಮನ್ ಬಾವಿಗಳ ರಚನೆಯೇ ವಿಶಿಷ್ಟವಾದುದು. ತ್ರಿಕೋನದಿಂದ ಹಿಡಿದು ದಶಕೋನಾಕಾರದ ಬಾವಿಗಳು ಇಲ್ಲಿ ನಿರ್ಮಾಣಗೊಂಡಿವೆ. ಪ್ರಯಾಣಿಕರಿಗೆ ಅನುಕೂಲವಾಗಲೆಂದು ಅರಣ್ಯ ಭೂಮಿ ಮತ್ತು ರಸ್ತೆ ಬದಿಗಳಲ್ಲಿ ಬಾವಿ ತೋಡಲಾಗಿದೆ. ಕುಡಿವ ನೀರು ಯಾವಾಗಲೂ ಸುಲಭವಾಗಿ ಸಿಗಬೇಕು ಎನ್ನುವ ಉದ್ದೇಶದಿಂದ ಬಾವಿಯ ದಂಡೆಗೆ ಸರಪಳಿ ಜೋಡಿಸಿದ ಬಕೆಟ್‌ಅನ್ನು ಯಾವಾಗಲೂ ಇಟ್ಟಿರುತ್ತಿದ್ದರು.
ಈ ವಿಶಿಷ್ಟ ಬಾವಿಗಳಿಂದಾಗಿಯೇ ಮನ್ ಹೆಸರು ಜಿಲ್ಲೆಯಲ್ಲಿ ಮನೆ ಮಾತಾಯಿತು. ಹಾಗಾಗಿಯೇ ಮನ್‌ಗೆ 'ಸಾವಿರ ಬಾವಿಗಳ ಸರದಾರ' ಎಂದು ಬಿರುದು ನೀಡಿ ಗೌರವಿಸಲಾಗಿತ್ತು. ತಮಗೆ ನೀರು ಒದಗಿಸಿದ ಪುಣ್ಯಾತ್ಮ ಎಂದು ಮಕ್ಕಳಿಗೆ ಮನ್ನಾಸಾಬ್ ಎಂದು ಹೆಸರಿಟ್ಟು ಈತನ ಸ್ಮರಣೆ ಮಾಡುವ ಜನ ಇನ್ನೂ ಇದ್ದಾರೆ.
ಇಂದಿಗೂ ಸಿಹಿ ನೀರು ಸಿಗುತ್ತೆ!
ಮನ್ ಬಾವಿಗಳ ನಿರ್ಮಾಣ ವೆಚ್ಚ ಬಹಳ ಕಡಿಮೆ. ಸ್ಥಳೀಯವಾಗಿ ದೊರಕುವ ಸಂಪನ್ಮೂಲ ಬಳಸಿ, ಈ ಬಾವಿಗಳನ್ನು ನಿರ್ಮಿಸಲಾಗಿದೆ. ಒಂದು ಬಾವಿಗೆ 4ರಿಂದ 8ರವರೆಗೆ ಗಿರಕಿ ಕೂಡಿಸಿ, ನೀರನ್ನು ಸೇದಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಈತ ತೋಡಿಸಿದ ಯಾವ ಬಾವಿಗಳೂ ವಿಫಲವಾಗಿಲ್ಲ. ಎಲ್ಲ ಬಾವಿಗಳು ಇಂದಿಗೂ ಸಿಹಿ ನೀರು ಹೊಂದಿರುವುದು ವಿಶೇಷ. ಮನ್ ತೋಡಿಸಿದ ಬಾವಿಗಳ ಮೇಲೆಲ್ಲಾ ಎಚ್‌ಇಎಚ್ ನಿಜಾಮ್ಸ್ ಡಬ್ಲ್ಯುಎಸ್‌ಡಿ ಎಂದು ಬರೆದು ನಂಬರ್ ಹಾಕಲಾಗಿದೆ. ಲಿಂಗಸೂರು ತಾಲೂಕಿನ ಮುದಗಲ್ ಕಂದಾಯ ಹೋಬಳಿಯ ಆಶೀಹಾಳ ತಾಂಡಾದ ಮುಂದೆ ಮನ್ ನಿರ್ಮಿಸಿದ ಅಷ್ಟಕೋನಾಕಾರದ ಬಾವಿ ಮನ್ ದೂರದೃಷ್ಟಿಯ ತಾಂತ್ರಿಕ ನೈಪುಣ್ಯಕ್ಕೆ ಕೈಗನ್ನಡಿ.
ಇಷ್ಟೆಲ್ಲ ವೈಶಿಷ್ಟ್ಯಗಳಿರುವ ಬಾವಿಗಳು ನಿರ್ಲಕ್ಷ್ಯಕ್ಕೆ ತುತ್ತಾಗಿವೆ. ಔದ್ಯೋಗಿಕ ಕ್ರಾಂತಿಯಿಂದ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಕೊಳವೆ ಬಾವಿಗಳ ಸಂಖ್ಯೆ ಹೆಚ್ಚಾಗಿವೆ. ಈ ಬಾವಿಗಳನ್ನು ನಿರ್ಲಕ್ಷಿಸಿ, ಬಾವಿಯಲ್ಲಿ ಕಸ- ಕಡ್ಡಿ, ಮಣ್ಣು ಹಾಕಿ ಮುಚ್ಚುವ ಕಾರ್ಯ ನಡೆದಿದೆ. ಲಿಂಗಸೂರು ಪೊಲೀಸ್ ಠಾಣೆ ಮುಂದಿನ ಟಿಎಂಸಿ ಕಾಂಪ್ಲೆಕ್ಸ್ ಒಳ ಭಾಗದಲ್ಲಿ ಇದ್ದ ಮನ್ ಬಾವಿ ನೆಲಸಮಗೊಂಡಿದೆ. ಮಿಕ್ಕ ಬಾವಿಗಳು ಮಣ್ಣು ಪಾಲಾಗುವ ಮುಂಚೆ ಐತಿಹಾಸಿಕ ಬಾವಿಗಳ ರಕ್ಷಣೆಗೆ ಸಂಬಂಧಪಟ್ಟವರು ಗಮನ ಹರಿಸಬೇಕಿದೆ.
- ಶರಣಪ್ಪ ಆನೆಹೊಸೂರು, ಸ್ಥಳೀಯರು
- ಪ್ರವೀಣರಾಜು ಸೊನ್ನದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


