ಅನುಪಮದ ಉಪಕಾರ
ಪಶ್ಚಿಮ ಬಂಗಾಳದ ಫುಲಿಯಾದಲ್ಲಿರುವ ಕೃಷಿ ತರಬೇತಿ ಕೇಂದ್ರ ಬತ್ತದ ತಳಿಗಳ ಸಂರಕ್ಷಣಾ ಕಾರ್ಯ ಕೈಗೆತ್ತಿಕೊಂಡಿದೆ...

ಪಶ್ಚಿಮ ಬಂಗಾಳದ ಫುಲಿಯಾದಲ್ಲಿರುವ ಕೃಷಿ ತರಬೇತಿ ಕೇಂದ್ರ ಬತ್ತದ ತಳಿಗಳ ಸಂರಕ್ಷಣಾ ಕಾರ್ಯ ಕೈಗೆತ್ತಿಕೊಂಡಿದೆ. ಸಾಮಾನ್ಯವಾಗಿ ಸರ್ಕಾರದ ಅಧೀನದಲ್ಲಿರುವ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು ಅನುಷ್ಠಾನಗೊಳಿಸಲು ಹಿಂದೇಟು ಹಾಕುವ ಕೆಲಸವದು. 2001ರಲ್ಲಿ ಆರಂಭವಾದ ಈ ಕೇಂದ್ರದಲ್ಲಿ 300ಕ್ಕೂ ಹೆಚ್ಚು ದೇಸೀ ಬತ್ತದ ತಳಿಗಳ ಸಂಗ್ರಹವಿದೆ. ಯಾವುದೋ ಯೋಜನೆಯ ಭಾಗವಾಗಿ ಅಥವಾ ಅನುದಾನದ ಆಧಾರದ ಮೇಲೆ ಈ ಕೆಲಸ ಮಾಡದೆ ನೈಜ ಕಾಳಜಿಯಿಂದ ಇದರಲ್ಲಿ ತೊಡಗಿಸಿಕೊಂಡಿದೆ. ನಿರಂತರವಾಗಿ ಈ ಸಂರಕ್ಷಣಾ ಕೆಲಸದಲ್ಲಿ ತೊಡಗಿಸಿಕೊಂಡಿರುವುದನ್ನು ಮನಗಂಡ ಸರ್ಕಾರವು 2006ರಲ್ಲಿ ಜೀವ ವೈವಿಧ್ಯ ಸಂರಕ್ಷಣಾ ಕೇಂದ್ರವೆಂದು ಘೋಷಣೆ ಮಾಡಿದೆ.
2009ರಲ್ಲಿ ರಾಜ್ಯಕ್ಕೆ ಅಪ್ಪಳಿಸಿದ ಐಲಾ ಚಂಡಮಾರುತವು ಕೇಂದ್ರದ ದೇಸೀ ಬತ್ತ ಸಂರಕ್ಷಣೆಯ ಮಹತ್ವ ಎತ್ತಿ ಹಿಡಿಯಿತು. ರಾಜ್ಯದ ಸುಂದರಬನ ಪ್ರಾಂತ್ಯದಲ್ಲಿ ಹೆಚ್ಚಿನ ಅನಾಹುತ ಮಾಡಿದ ಚಂಡಮಾರುತವು ಬಹುತೇಕ ಬತ್ತ ಬೆಳೆಯುವ ಪ್ರದೇಶವನ್ನು ಉಪ್ಪು ನೀರಿನಿಂದ ತುಂಬಿಸಿತು. ಆಗ ರೈತರು ಉಪ್ಪು ನಿರೋಧಕ ದೇಸೀ ಬತ್ತದ ತಳಿಗಳ ಹುಡುಕಾಟ ನಡೆಸಿದರು. ಹಲವು ವರ್ಷಗಳ ಹಿಂದೆ ಈ ಭಾಗದ ರೈತರು ಉಪ್ಪು ನಿರೋಧಕ ದೇಸೀ ಬತ್ತದ ತಳಿಗಳನ್ನು ವ್ಯಾಪಕವಾಗಿ ಬೆಳೆಯುತ್ತಿದ್ದರು. ಆದರೆ, ಈ ನಡುವೆ ಆಧುನಿಕ ತಳಿಗಳ ಪ್ರವೇಶವಾಯಿತು. ಆರಂಭದ ವರ್ಷಗಳಲ್ಲಿ ಉತ್ತಮ ಇಳುವರಿಯೂ ದೊರಕಿತು. ಇದಕ್ಕೆ ಮಾರು ಹೋದ ರೈತರು ಹಿಂದೆ ಬೆಳೆಯುತ್ತಿದ್ದ ಸುಮಾರು 150 ದೇಸೀ ತಳಿಗಳನ್ನು ಕೈಬಿಟ್ಟರು. ಕೇವಲ ನಾಲ್ಕೈದು ಆಧುನಿಕ ತಳಿಗಳ ಮೇಲೆ ಅವಲಂಬಿತರಾದರು. ಸುಮಾರು 25 ವರ್ಷ ಹೀಗೆ ನಡೆಯಿತು. ಆದರೆ, ಐಲಾ ಚಂಡಮಾರುತ ಆಧುನಿಕ ತಳಿಗಳ ನಿಜ ಬಣ್ಣ ಬಯಲು ಮಾಡಿತು. ನೈಸರ್ಗಿಕ ವಿಕೋಪಗಳನ್ನು ಅವು ತಡೆದುಕೊಳ್ಳುವುದಿಲ್ಲ ಎಂಬುದು ರೈತರಿಗೆ ಮನವರಿಕೆಯಾಯಿತು.
ಪ್ರತಿಫಲ
ಆ ಸಂದರ್ಭದಲ್ಲಿ ಉಪ್ಪು ನಿರೋಧಕ ದೇಸೀ ತಳಿಗಳನ್ನು ಸಂರಕ್ಷಿಸುತ್ತಿದ್ದ ಫುಲಿಯಾ ಕೃಷಿ ತರಬೇತಿ ಕೇಂದ್ರವು ರೈತರ ನೆರವಿಗೆ ಬಂದು ದೇಸೀ ತಳಿಗಳ ಬಿತ್ತನೆ ಬೀಜ ವಿತರಿಸಿತು. 2010ರಲ್ಲಿ 56 ರೈತರಿಗೆ 50 ತಳಿಗಳನ್ನು, 2012ರಲ್ಲಿ 121 ರೈತರಿಗೆ 74 ತಳಿಗಳನ್ನು ಹಾಗೂ 2013ರಲ್ಲಿ 80 ರೈತರಿಗೆ 126 ತಳಿ ವಿತರಿಸಿದೆ. ಇಲ್ಲಿಂದ ಬೀಜ ಪಡೆದ ರೈತರು ತಾವೂ ಬೆಳೆದು ತಮ್ಮ ನೆರೆಹೊರೆಯ ರೈತರಿಗೂ ಹಂಚುತ್ತಿದ್ದಾರೆ. ಇಂದು ನೂರಾರು ಎಕರೆ ಬತ್ತದ ತಾಕುಗಳಲ್ಲಿ ದೇಸೀ ತಳಿಗಳು ಬೆಳೆಯಲ್ಪಡುತ್ತಿವೆ. ಇದು ಕೇಂದ್ರದ ಶ್ರಮಕ್ಕೆ ಸಿಕ್ಕ ಪ್ರತಿಫಲ.
ಮತ್ತೊಂದು ಹೆಗ್ಗಳಿಕೆ
ದೇಸೀ ತಳಿಗಳು ಹಾಗೂ ಆಧುನಿಕ ತಳಿಗಳ ಇಳವರಿ ಹೋಲಿಕೆ ಮಾಡಿರುವುದು ಕೇಂದ್ರದ ಮತ್ತೊಂದು ಹೆಗ್ಗಳಿಕೆ. ದೇಸೀ ತಳಿ ಎಂದಾಕ್ಷಣ ಇಳವರಿ ಕಡಿಮೆ, ದೀರ್ಘಾವಧಿ, ಹೆಚ್ಚು ಮೇವು ಕೊಡುತ್ತವೆ ಎಂಬ ಋಣಾತ್ಮಕ ಅಂಶಗಳನ್ನೇ ಹೇಳಲಾಗುತ್ತದೆ. ಆದರೆ, ಅದು ಸುಳ್ಳು ಎಂಬುದನ್ನು ಕೇಂದ್ರದ ಸತತ ಪ್ರಯೋಗಗಳು ಸಾರಿ ಹೇಳುತ್ತವೆ. ಬಹುರೂಪಿ, ಕೇಸಬ್ಸಾಲ್, ಜುಲಿ, ಅಸಿತ್ಕಲ್ಮ, ಕೇರಲಸುಂದರಿ ಎಂಬ ದೇಸೀ ತಳಿಗಳನ್ನು ಎಂಟಿಯು- 7029 ಮತ್ತು ಕೆಆರ್‌ಎಚ್- 2 ಅಧಿಕ ಇಳವರಿ ತಳಿಗಳೊಂದಿಗೆ ಹೋಲಿಕೆ ಮಾಡಿದ್ದು ಹೆಕ್ಟೇರ್ ಒಂದಕ್ಕೆ ಸರಾಸರಿ ನಾಲ್ಕರಿಂದ ಐದು ಟನ್ ಇಳವರಿ ಬಂದಿದೆ. ಅಂದರೆ ಹೈಬ್ರಿಡ್ ತಳಿಗಳಷ್ಟೇ ಇಳವರಿಯನ್ನು ದೇಸೀ ತಳಿಗಳೂ ನೀಡಿವೆ. ಕೇಂದ್ರದ ಈ ಪ್ರಯೋಗವು ದೇಸೀ ತಳಿಗಳ ಮೇಲೆ ರೈತರು ಹೆಚ್ಚು ನಂಬಿಕೆ ಇಡುವಲ್ಲಿ ತುಂಬಾ ಸಹಕಾರಿಯಾಗಿದೆ ಎನ್ನುತ್ತಾರೆ ಡಾ. ಅನುಪಮ್.
ವಿಶೇಷ ಕಾಳಜಿ
ಈ ಕೆಲಸದ ಹಿಂದಿರುವ ಶಕ್ತಿ ಕೇಂದ್ರದ ವಿಜ್ಞಾನಿ ಡಾ. ಅನುಪಮ್ ಪೌಲ್. ಅವರ ವಿಶೇಷ ಕಾಳಜಿ ಹಾಗೂ ವೈಯಕ್ತಿಕ ಆಸಕ್ತಿ ಈ ಯಶಸ್ಸಿಗೆ ಕಾರಣ. ಕೇಂದ್ರದಲ್ಲಿ ಸಹಾಯಕ ನಿರ್ದೇಶಕರಾಗಿರುವ ಇವರು ತಳಿ ಹುಡುಕಾಟ, ಸಂವರ್ಧನೆ, ಸಂಶೋಧನೆ ಹಾಗೂ ರೈತರಿಗೆ ವಿತರಿಸುವ ಎಲ್ಲಾ ಹಂತಗಳಲ್ಲೂ ಅಪಾರ ಶ್ರಮ ವಹಿಸಿದ್ದಾರೆ. ರಾಜ್ಯ ಹಾಗೂ ದೇಶದ ಹಲವು ಭಾಗಗಳಲ್ಲಿ ಓಡಾಟ, ರೈತರು ಹಾಗೂ ಇತರ ಸಂಸ್ಥೆಗಳೊಂದಿಗೆ ನಿರಂತರ ಒಡನಾಟ ಇವರ ಕೆಲಸದ ವೈಖರಿ.
-ಮಲ್ಲಿಕಾರ್ಜುನ ಹೊಸಪಾಳ್ಯ
krushikaimara@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


