ಬಟಾಟೆ ಭರಾಟೆ

ಕರಾವಳಿಯಲ್ಲಿನ ಕೃಷಿ ಎಂದರೆ ನೆನಪಿಗೆ ಬರುವುದು ಇಲ್ಲಿನ ತೆಂಗು- ಅಡಕೆ ತೋಟ, ಬತ್ತದ ಗದ್ದೆಗಳು, ತೊಂಡೆ, ಬೆಂಡೆ, ಹಾಗಲು, ಹೀರೆ, ಸೌತೆ, ಬದನೆಯಂಥ ತರಕಾರಿಗಳು. ಆದರೆ, ಇದಕ್ಕೆಲ್ಲ ಅಪವಾದವೆನಿಸುವಂತೆ ಬಯಲುಸೀಮೆಯಲ್ಲಿ ಬೆಳೆಯುವ ಬಟಾಟೆ ಬೆಳೆದು ಯಶಸ್ಸು ಕಂಡರೆ ಅದು ನಿಜಕ್ಕೂ ಅಚ್ಚರಿಯಲ್ಲವೇ?
ಹೌದು, ಬೆಂಗಳೂರಿನ ಕಾಸ್ಮೆಟಿಕ್ ಕಂಪನಿಯಲ್ಲಿ ಸಹಾಯಕ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತ, ಜತೆಗೆ ಹುಟ್ಟೂರಾದ ಕಾರವಾರದ ಮಾಜಾಳಿಯ ಸಮೀಪದ ನಿವಾಸಿ ಪ್ರಶಾಂತ ಸಾಳುಂಕೆ ಈ ಯಶಸ್ವಿ ಪ್ರಯತ್ನ ನಡೆಸಿದ ಯುವಕ.
ಗೆಳೆಯನ ಪ್ರೇರಣೆ
ಇವರ ಗೆಳೆಯ ಬೆಂಗಳೂರಿನ ಸಮೀಪದವರು. ಅವರು ತಮಗಿರುವ ಜಮೀನನ್ನು ಸಮರ್ಪಕವಾಗಿ ಬಳಸಿ ಉತ್ತಮ ಆದಾಯ ಪಡೆಯುವುದನ್ನು ತಿಳಿದು, ಊರಲ್ಲಿರುವ ಪಾಳುಬಿದ್ದ ಭೂಮಿಯನ್ನು ಯಾಕೆ ಉಪಯೋಗಿಸಬಾರದು ಎಂದು ಯೋಚಿಸಿದರು. ಅದರಂತೆ ತಮ್ಮ ಗೆಳೆಯರೊಂದಿಗೆ ಚರ್ಚಿಸಿ ಹೊಸ ಪ್ರಯೋಗಕ್ಕೆ ಮುಂದಾಗಿ ಬಟಾಟೆ ನೆಡುವ ನಿರ್ಧಾರಕ್ಕೆ ಬಂದರು. ತಮ್ಮ ಗೆಳೆಯರ ಸಲಹೆ ಮತ್ತು ಮಾಹಿತಿ ಪಡೆದು ಬಟಾಟೆ ಬೆಳೆಯುವ ಪ್ರದೇಶಕ್ಕೆ ಭೇಟಿ ಕೊಟ್ಟು ಅಧಿಕ ತೇವಾಂಶವಿರುವ ಪ್ರದೇಶದಲ್ಲೂ ಬೆಳೆಯಬಹುದಾದ ಎಫ್‌ಕೆ ಎಂಬ ತಳಿಯ 150 ಕೆ.ಜಿ. ಬಟಾಟೆ ತಂದರು.
ಕೃಷಿ ಮಾಡಿದ್ದು ಹೀಗೆ...
ಗೋವಾಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಮಾಜಾಳಿ ಗ್ರಾಮದ ಮೂಡಗೇರಿ ಬಳಿಯ ಗಿಡ- ಗಂಟಿ, ಕಸಗಳಿಂದ ತುಂಬಿದ್ದ ತಮ್ಮ ಒಂದೂವರೆ ಎಕರೆ ಭೂಮಿಯನ್ನು ಇವರು ಹದಗೊಳಿಸಿದರು. 2 ಅಡಿ ಅಗಲ ಮತ್ತು 40 ಅಡಿ ಉದ್ದದ 100 ಮಡಿ ಮಾಡಿ ಅದಕ್ಕೆ ಕೋಳಿ ಪಿಟ್ಟಿ ಮತ್ತು ಕುರಿಹಿಕ್ಕೆ ಹಾಕಿ ಭೂಮಿಯನ್ನು ಫಲವತ್ತು ಮಾಡಿದರು. ನಂತರ 1 ಅಡಿ ಅಂತರದಲ್ಲಿ ಬಟಾಟೆಯನ್ನು ನೆಲದೊಳಗಿಟ್ಟು ಮುಚ್ಚಿ, ಮೂರು ದಿನಕ್ಕೊಮ್ಮೆ ನೀರು ದೊರೆಯುವಂತೆ ಹನಿ ನೀರಾವರಿ ಪೈಪ್ ಅಳವಡಿಸಿದ್ದಾರೆ. ಆದರೆ, ಗಿಡ ನೆಟ್ಟು ಒಂದೂವರೆ ತಿಂಗಳಿನಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡಿದ್ದು, ನಂತರ ಅದನ್ನು ರಾಸಾಯನಿಕಗಳ ಸಿಂಪಡಣೆಯಿಂದ ತಕ್ಕಮಟ್ಟಿಗೆ ಹತೋಟಿಗೆ ತರಲಾಗಿತ್ತು. ಹೀಗೆ ಬಟಾಟೆ ಗಿಡ ರೋಗಕ್ಕೆ ತುತ್ತಾಗಿದ್ದನ್ನು ಕಂಡು ತಕ್ಷಣ ಕಾರ್ಯಪ್ರವೃತ್ತರಾದ ಸಾಳುಂಕೆ 7 ಅಡಿ ಅಂತರದಲ್ಲಿ ಹೈಬ್ರಿಡ್ ಪಪ್ಪಾಯಿ ನೆಟ್ಟರು. ಈಗ ಪಪ್ಪಾಯಿ ಗಿಡ ಹುಲುಸಾಗಿ ಬೆಳೆದಿದೆ.
ಇಳುವರಿ
ಇವರು ನಿರೀಕ್ಷಿಸಿದ ಮಟ್ಟದಲ್ಲಿ ಇಳುವರಿ ಬರದಿದ್ದರೂ ಬಂಡವಾಳದ ಹಣಕ್ಕೆ ಮೋಸವಾಗಿಲ್ಲವಂತೆ. ಸುಮಾರು 2.5 ಟನ್ ಇಳುವರಿ ಬಂದಿದ್ದು, ಕ್ವಿಂಟಲ್‌ಗೆ ರು. 700 ಬೆಲೆ ದೊರೆತಿದೆಯಂತೆ. ಮುಂದೆ ಇದೇ ಜಾಗದಲ್ಲಿ ಬೆಳೆಯುತ್ತಿರುವ ಪಪ್ಪಾಯಿ ಗಿಡದಿಂದ ಉತ್ತಮ ಆದಾಯ ಬರಬಹುದೆಂಬ ನಿರೀಕ್ಷೆ ಇವರದ್ದಾಗಿದೆ.
ಪ್ರಶಾಂತ್ ಹೇಳುವಂತೆ ಸ್ವಂತ ತಾವೇ ನಿಂತು ಕೃಷಿ ಮಾಡಿಸಿದರೆ ಬಟಾಟೆ ಕೃಷಿಯಲ್ಲಿ ಅಧಿಕ ಇಳುವರಿ, ಹೆಚ್ಚು ಲಾಭ ದೊರೆಯುತ್ತಿತ್ತು ಎಂಬುದು ಇವರ ಅಭಿಪ್ರಾಯ. ಬೆಂಗಳೂರಲ್ಲಿ ತಮ್ಮ ಕೆಲಸದ ಒತ್ತಡ ಜಾಸ್ತಿ ಇದ್ದುದರಿಂದ ಕಾರ್ಮಿಕರ ಮೇಲೆ ಹೆಚ್ಚಿನ ಜವಾಬ್ದಾರಿ ಹೊರಿಸಿದೆ. ಆದರೆ, ಅವರಿಗೆ ಈ ಕೃಷಿಯಲ್ಲಿ ಅನುಭವದ ಕೊರತೆ ಸ್ವಲ್ಪ ಮಟ್ಟಿಗೆ ಇಳುವರಿಯ ಮೇಲೆ ಪರಿಣಾಮ ಬೀರಿತು. ಆದ್ದರಿಂದ ಮುಂದಿನ ದಿನಗಳಲ್ಲಿ ತಾವೇ ಖುದ್ದಾಗಿ ನಿಂತು ಕೃಷಿ ಚಟುವಟಿಕೆಯಲ್ಲಿ ತೊಡಗಿ ಹೆಚ್ಚಿನ ಕಾಳಜಿ ವಹಿಸುತ್ತೇನೆಂಬ ಇಂಗಿತ ಇವರದ್ದಾಗಿದೆ.
= ಪ್ರೊ. ಶಿವಾನಂದ ಎಸ್ ಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


