ಕೃಷಿ-ಪರಿಸರ

ಅಮೃತಬಳ್ಳಿ ಸ್ಟೋರ್!

ಅಮೃತಬಳ್ಳಿ ಸ್ಟೋರ್!
Published On :

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೇರ್ಪಳ ರಸ್ತೆಯಲ್ಲಿ ಭಗವತಿ ಸ್ಟೋರ್ ಹೆಸರಿನ ದಿನಸಿ ಅಂಗಡಿಯಿದೆ. ಇದರ ಮಾಲೀಕರು ಶಾರದಾ ಹೊನ್ನಪ್ಪ ಗೌಡ. ಎಲ್ಲರೂ ತಮ್ಮ ಮನೆ, ಅಂಗಡಿ ಅಂದ ಹೆಚ್ಚಿಸಲು ಸುತ್ತಲೂ ಹೂವು ಬಿಡುವ ಬಳ್ಳಿಗಳನ್ನು ಹಬ್ಬಿಸುತ್ತಾರೆ. ಆದರೆ, ಶಾರದಾ ಅಮೃತಬಳ್ಳಿಯನ್ನು ಅಂಗಡಿ ಗೋಡೆ ಮೇಲೆ ಹರಡಿಸಿ ಹಸಿರು ಸೃಷ್ಟಿಸಿದ್ದಾರೆ.
ಶಾರದಾಗೆ ಈಗ 52 ವರ್ಷ. 6 ವರ್ಷಗಳ ಹಿಂದೆ ಅವರಿಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ಬಂತು. ಆಸ್ಪತ್ರೆಗೆ ಅಲೆದಾಡಿದರು. ಗುಣ ಕಾಣಲಿಲ್ಲ. ಸಮೀಪದ ಶಾಲೆಯ ಮೇಷ್ಟ್ರು ಒಬ್ಬರು ಅಮೃತಬಳ್ಳಿಯ ಕಷಾಯ ಕುಡಿಯುವಂತೆ ಸಲಹೆ ಮಾಡಿದರು. ಮನೆಯಲ್ಲಿ, ನೆರೆಹೊರೆಯಲ್ಲಿ ಬಳ್ಳಿ ಇಲ್ಲದ್ದರಿಂದ ದೂರದೂರಿನಿಂದ ತಂದು ಸೇವಿಸತೊಡಗಿದರು. ಹಾಗೆ ತಂದ ಬಳ್ಳಿಯ ತುಂಡೊಂದನ್ನು ಅಂಗಡಿ ಮಾಡಿನ ಅಡಿಯಲ್ಲಿ ನೆಟ್ಟರು. ಈಗ ಆ ಗೇಣುದ್ದದ ಬಳ್ಳಿ ಗೋಡೆಯ ಸುತ್ತಲೂ ದಟ್ಟವಾಗಿ ಹರಡಿ ಇಡೀ ಅಂಗಡಿ ಆವರಿಸಿದೆ. ದಾರಿಹೋಕರ ಗಮನ ಅತ್ತ ಸೆಳೆಯುವಂತೆ ಮಾಡಿದೆ.
ರೋಗ ನಿಯಂತ್ರಣ
ಅವರು ದಿನಾ ಬೆಳಗ್ಗೆ ಖಾಲಿ ಹೊಟ್ಟೆಗೆ 1 ಕಪ್ ಅಮೃತಬಳ್ಳಿ ಕಷಾಯ ಕುಡಿಯುತ್ತಾರೆ. ಬೇರೆ ಔಷಧಿ ತೆಗೆದುಕೊಳ್ಳುವುದಿಲ್ಲ. ಮಧುಮೇಹಕ್ಕೆ ಇದು ರಾಮಬಾಣ. ಇದನ್ನು ಕುಡಿಯಲು ಆರಂಭಿಸಿದ ಮೇಲೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿಯಂತ್ರಣಕ್ಕೆ ಬಂದಿದೆ. ಮೊದಲು ಆಗಾಗ ಕಾಡುತ್ತಿದ್ದ ಗಂಟುನೋವೂ ಮಾಯವಾಗಿದೆ. ಶೀತ, ಕೆಮ್ಮು, ಜ್ವರಕ್ಕೂ ಒಳ್ಳೆಯದು ಎನ್ನುತ್ತಾರವರು.
ಕಷಾಯದ ವಿಧಾನ
ಒಂದು ಮಡಿಕೆಯಲ್ಲಿ 1 ಲೀ. ನೀರು ತೆಗೆದುಕೊಂಡು ಅಮೃತಬಳ್ಳಿ ತುಂಡು ಹಾಕಿ ಒಲೆಯ ಮೇಲೆ ಇಟ್ಟು ಕುದಿಸುತ್ತಾರೆ. 1 ಕಪ್ ಆಗುವಾಗ ಒಲೆಯಿಂದ ಇಳಿಸುತ್ತಾರೆ. ರಾತ್ರಿ ಮಾಡಿ ಇಟ್ಟರೆ ಬೆಳಗ್ಗೆ ಎದ್ದ ತಕ್ಷಣ ಕುಡಿಯಬಹುದು ಎಂಬುದು ಅವರ ಸಲಹೆ.
ಕೈಖರ್ಚಿಗೆ ದುಡ್ಡು
ಮಧ್ಯಾಹ್ನ ಊಟದ ನಂತರ ಕೈ, ಬಟ್ಟಲು ಇದರ ಬುಡದಲ್ಲಿ ತೊಳೆಯುತ್ತಾರೆ. ಮಾರ್ಗದಲ್ಲಿ ಬಿದ್ದ ಒಣಗಿದ ಸಗಣಿ ಹೆಕ್ಕಿ ತಂದು ಹಾಕುತ್ತಾರೆ. ಹಸಿ ಸಗಣಿ ಹಾಕಿದರೆ ಗಿಡಗಳಿಗೆ ಹುಳು ಬರುತ್ತದೆ ಎನ್ನುವುದು ಅವರ ಅನುಭವ. ಇದು ಬಿಟ್ಟರೆ ಬೇರೆ ಉಪಚಾರ ಮಾಡುವುದಿಲ್ಲ. ಇಷ್ಟರಿಂದಲೇ ಅಗಲವಾದ ಎಲೆಗಳನ್ನು ಬಿಟ್ಟು ಹುಲುಸಾಗಿ ಹಬ್ಬಿದೆ. ಬಳ್ಳಿ ತುಂಡು ಮಾಡಿ ಮಾರಿದರೆ ಕೈಖರ್ಚಿಗೆ ದುಡ್ಡು ಸಿಗುತ್ತಿತ್ತು. ಆದರೆ, ಅವರಿಗೆ ಮಾರಾಟದ ಉದ್ದೇಶ ಇಲ್ಲ. ಔಷಧಿಗೆಂದು ಕೇಳಿದವರಿಗೆ ಉಚಿತವಾಗಿ ಕೊಡುತ್ತಾರೆ.
ಇತ್ತೀಚೆಗೆ ಗಂಡನಿಗೂ ಮಧುಮೇಹ ಬಂದಿದೆ. ಅಮೃತಬಳ್ಳಿ ಕಷಾಯ ಸೇವನೆಯಿಂದ ಹತೋಟಿಗೆ ಬಂದಿದೆ. ಹೊರಗಿನ ಔಷಧಿ ತೆಗೆದುಕೊಂಡಿಲ್ಲ ಎಂದು ಹೇಳುತ್ತಾರೆ ಶಾರದಾ. ಮಾಹಿತಿಗೆ ಅವರ ಮೊ. 9844870834 ಸಂಪರ್ಕಿಸಬಹುದು.

=  ಸಹನಾ ಕಾಂತಬೈಲು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.