ಕೃಷಿ-ಪರಿಸರ

ತೆಂಗು ಮೌಲ್ಯವರ್ಧನೆಯ ತಾಜಾ ಸಾಹಸ

ಆ ಮೂವರೂ ಸಮಾನಮನಸ್ಕರು ದಿನಾ ಬೆಳಗ್ಗೆ ತುಮಕೂರು ನಗರದಿಂದ 20 ಕಿಮೀ ದೂರದ ಹಳ್ಳಿಗೆ ಹೊರಡುತ್ತಾರೆ. ದಾರಿಯುದ್ದಕ್ಕೂ ಹಳ್ಳಿಗಳಿಂದ ನಗರಕ್ಕೆ ಬರುವವರ...

ತೆಂಗು ಮೌಲ್ಯವರ್ಧನೆಯ ತಾಜಾ ಸಾಹಸ
Published On :

ಆ ಮೂವರೂ ಸಮಾನಮನಸ್ಕರು ದಿನಾ ಬೆಳಗ್ಗೆ ತುಮಕೂರು ನಗರದಿಂದ 20 ಕಿಮೀ ದೂರದ ಹಳ್ಳಿಗೆ ಹೊರಡುತ್ತಾರೆ. ದಾರಿಯುದ್ದಕ್ಕೂ ಹಳ್ಳಿಗಳಿಂದ ನಗರಕ್ಕೆ ಬರುವವರ ದಂಡೇ ಎದುರಾಗುತ್ತದೆ. ಸಂಜೆ ಇದಕ್ಕೆ ತದ್ವಿರುದ್ಧ. ಇವರು ತಮ್ಮ ತೋಟದಲ್ಲಿ ದಿನವಿಡೀ ನೀರಾಯಿಸಿ, ಗೊಬ್ಬರ ಎರಚಿ, ಜೀವಾಮೃತ ಮಾಡಿ, ಗಿಡಗಳ ಬುಡಕ್ಕೆ ಸೆತ್ತೆ- ಸೆದೆ ಹಾಕಿ, ತೆಂಗಿನಕಾಯಿ ಇಳಿಸಿ, ಕರೆಂಟು ಇರುವ ಮೂರು ಗಂಟೆಗಳಲ್ಲಿ ಕಾಯಿ ಸುಲಿದು, ಒಡೆದು, ತುರಿದು, ಹುರಿದು, ಎಣ್ಣೆ ತೆಗೆದು ಸೋಸಿ ಬಾಟಲುಗಳಿಗೆ ತುಂಬಿಕೊಂಡು, ಜೊತೆಗೆ ತಾಜಾ ನುಗ್ಗೆಕಾಯಿ, ಎಳ್ಳಿಕಾಯಿ, ನಿಂಬೆಹಣ್ಣು, ಸೊಪ್ಪು- ತರಕಾರಿಗಳೊಂದಿಗೆ ತುಮಕೂರಿಗೆ ಹೊರಟರೆ, ಬೆಳಗಿನಿಂದ ನಗರದಲ್ಲಿ ಆ ಕೆಲಸ ಈ ಕೆಲಸ ಮಾಡಿಕೊಂಡಿದ್ದ ಗುಂಪು ಬ್ರೆಡ್ಡು, ಬಿಸ್ಕತ್ತು, ಆ್ಯಪಲ್ಲು, ಬೇರೆ ರೀತಿಯ ಬಾಟಲುಗಳೊಂದಿಗೆ ಹಳ್ಳಿಕಡೆ ಸಾಗುತ್ತಾರೆ.
ಆ ಮೂವರು ತುಮಕೂರು ಸಮೀಪದ ನೇರಳಾಪುರದಲ್ಲಿರುವ ತೋಟದ ಮನೆಯಲ್ಲಿ ತಾಜಾ ತೆಂಗಿನೆಣ್ಣೆ ಉತ್ಪಾದನಾ ಘಟಕ ಸ್ಥಾಪಿಸಿದ್ದಾರೆ. ತೋಟದ ಮಾಲೀಕ ಗಂಗಾಧರಮೂರ್ತಿ ಸುಸ್ಥಿರ ಕೃಷಿ, ಮೌಲ್ಯವರ್ಧನೆ, ಸ್ಥಳೀಯ ಬಳಕೆಯಲ್ಲಿ ಆಸಕ್ತರು. ಸುರೇಂದ್ರರಿಗೆ ನೈಸರ್ಗಿಕ ಮತ್ತು ಸಾವಯವ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಹೆಚ್ಚಿನ ಒಲವು ಮತ್ತು ವಿಶ್ವಾಸ. ಇವರಿಬ್ಬರಿಂದ ಪ್ರಭಾವಿತಗೊಂಡು ಹೊಸತನ ಮಾಡಬೇಕೆಂಬ ಹಂಬಲ. ಇದರ ಪ್ರತಿಫಲವಾಗಿ ಶುರುವಾಗಿದ್ದೇ ಕಲ್ಪಾಮೃತ ತಾಜಾ ತೆಂಗಿನೆಣ್ಣೆ ಘಟಕ. ಮೂರ್ತಿಯವರ ತೋಟದಲ್ಲಿ ಕೊಟ್ಟಿಗೆಗೆಂದು ಕಟ್ಟಿದ್ದ ಕಟ್ಟಡದಲ್ಲೇ ಘಟಕ ಸ್ಥಾಪನೆಯಾಗಿದೆ.
ತೆಂಗಿನ ಹೋಳನ್ನು ತುರಿಯುವ ಸ್ಕ್ರಾಪರ್, ತುರಿ ಬಾಡಿಸುವ ಡ್ರೈಯರ್ ಮತ್ತು ಎಣ್ಣೆ ತೆಗೆಯುವ ಹೈಡ್ರಾಲಿಕ್ ಜಾಕ್‌ಗಳ ಬಿಡಿಭಾಗ ತಂದು ಇವರೇ ಅಸೆಂಬಲ್ ಮಾಡಿಕೊಂಡಿದ್ದಾರೆ. ಇದರಲ್ಲಿ ಸ್ಕ್ರಾಪರ್ ಮಾತ್ರ ವಿದ್ಯುತ್ ಚಾಲಿತ. ಮೂರಡಿ ಎತ್ತರ, ನಾಲ್ಕೂವರೆ ಅಡಿ ಅಗಲ ಹಾಗೂ ಎಂಟಡಿ ಉದ್ದದ ಒಲೆಯನ್ನು ಇವರೇ ಕಟ್ಟಿ ಸಿಮೆಂಟ್ ಪ್ಲಾಸ್ಟಿಂಗ್ ಮಾಡಿದ್ದಾರೆ. ಇದಕ್ಕೆ ನಾಲ್ಕಡಿ ಅಗಲ ಮತ್ತು ಏಳಡಿ ಉದ್ದದ ಸ್ಟೀಲಿನ ಹೆಂಚು ಕೂಡಿಸಲಾಗಿದೆ. ಎಣ್ಣೆ ಹಿಂಡಲು ಕೈಚಾಲಿತ ಹೈಡ್ರಾಲಿಕ್ ಜಾಕ್ ಇದೆ. ಘಟಕವು ತೋಟದಲ್ಲೇ ಇರುವುದರಿಂದ ಕೈಯಳತೆಯಲ್ಲೇ ತೆಂಗಿನ ಕಾಯಿ ಲಭ್ಯ.  
ಒಬ್ಬರು ಕಾಯಿ ತುರಿಯಲು ಕುಳಿತರೆ ಮತ್ತೊಬ್ಬರದು ಒಲೆಗೆ ಉರಿ ಹಾಕುತ್ತಾ ಬಾಡಿಸುವ ಕೆಲಸ. ನಂತರ ಇಬ್ಬರೂ ಕೂಡಿ ಎಣ್ಣೆ ಹಿಂಡಿ ಬಾಟಲಿಗೆ ಹಾಕುತ್ತಾರೆ. ಈ ಕೆಲಸಗಳನ್ನು ವಿಶ್ವಾಸ್ ಮತ್ತು ಸುರೇಂದ್ರ ನಿರ್ವಹಿಸುತ್ತಿದ್ದು, ಮೂರ್ತಿಯವರು ಸ್ಥಳಾವಕಾಶ ನೀಡಿರುವ ಜೊತೆಗೆ ಮಾರುಕಟ್ಟೆ ವಿಸ್ತರಣೆಗೆ ನೆರವಾಗುತ್ತಿದ್ದಾರೆ.
ತೋಟದಲ್ಲಿ ಘಟಕ ಇರುವುದರಿಂದ ಹಲವು ಲಾಭಗಳಿವೆ. ಕಾಯಿ ಸುಲಿದ ಮಟ್ಟೆ ಮತ್ತು ಚಿಪ್ಪು ಇವರ ಒಲೆಗೇ ಬಳಕೆಯಾಗುತ್ತದೆ. ಕಾಯಿನೀರನ್ನು ಹಸುಗಳಿಗೆ ಹಾಗೂ ಜೀವಾಮೃತ ಗೊಬ್ಬರಕ್ಕೆ ಹಾಕುತ್ತಾರೆ. ಪ್ರತಿ ಕಾಯಿಯನ್ನು ಏಳು ರುಪಾಯಿಗೆ ಕೊಳ್ಳುತ್ತಿರುವುದರಿಂದ ಅಕ್ಕ- ಪಕ್ಕದ ತೋಟದವರು ಇವರಿಗೇ ಮಾರಾಟ ಮಾಡಲು ಮುಂದೆ ಬರುತ್ತಿದ್ದಾರೆ. ಪರಸ್ಪರ ಲಾಭ.
ಕಳೆದ ಜೂನ್ ತಿಂಗಳಲ್ಲಿ ಘಟಕ ಶುರುವಾಗಿದ್ದು, ಬೆಂಗಳೂರು ಮತ್ತು ತುಮಕೂರಿನಲ್ಲಿ ಮಾರ್ಕೆಟ್ ಮಾಡುತ್ತಿದ್ದಾರೆ. ಪ್ರಸ್ತುತ ತಿಂಗಳಿಗೆ ಸರಾಸರಿ 100 ಲೀಟರ್ ಖರ್ಚಾಗುತ್ತಿದೆ. ತುಮಕೂರಿನಲ್ಲಿ ತಿಂಗಳಿಗೆ ಮೂರು ಲೀಟರ್ ಬಳಸುವ ನೂರು ಕುಟುಂಬ ಕಾಯಂ ಗ್ರಾಹಕರು ಸಿಕ್ಕರೆ ಸಾಕು ನಮ್ಮ ಪ್ರಯತ್ನ ಸಾರ್ಥಕ. 500 ಕುಟುಂಬ ಸಿಕ್ಕರಂತೂ ಇಂತಹ ಮತ್ತೆರಡು ಘಟಕ ಹಾಕಬಹುದು ಎನ್ನುವ ಮೂರ್ತಿಯವರು ನಮ್ಮ ಜನರು ತೆಂಗಿನೆಣ್ಣೆಯ ಬಗ್ಗೆ ಹಲವು ಮಿಥ್ಯೆ ಬೆಳೆಸಿಕೊಂಡಿರುವ ಬಗ್ಗೆ ವಿಷಾದಪಡುತ್ತಾರೆ.
ಅಡುಗೆಗೆ, ಕೇಶರಕ್ಷಣೆಗೆ, ಚರ್ಮ ರಕ್ಷಣೆಗೆ, ದೇಹದ ಅನಗತ್ಯ ತೂಕ ಇಳಿಕೆಗೆ, ದೇಹದ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ, ಮಧುಮೇಹ ರೋಗ ಹತೋಟಿ ಮುಂತಾದ ಅನೇಕ ರೀತಿಯಲ್ಲಿ ತೆಂಗಿನೆಣ್ಣೆ ಅತ್ಯುಪಯುಕ್ತ. ಅದಕ್ಕಾಗಿಯೇ ಅಮೆರಿಕಾದ ತೆಂಗು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ. ಬ್ರೂಸ್ ಪೈಪ್ ತೆಂಗಿನೆಣ್ಣೆಯು ಭೂಮಿಯ ಮೇಲಿನ ಅತ್ಯಂತ ಆರೋಗ್ಯಕರ ಖಾದ್ಯ ತೈಲ ಎಂದಿದ್ದಾರೆ. ತಾಜಾ ತೆಂಗಿನೆಣ್ಣೆಯಲ್ಲಿ ಯೆಂಟಿಬಯಾಟಿಕ್ ಅಂಶಗಳಿರುವುದಕ್ಕೆ ನಾನೇ ಸಾಕ್ಷಿ ಇದು ಸುರೇಂದ್ರ ಅನುಭವ. ಕಾಯಿ ತುರಿಯುವಾಗ ಆದ ಇವರ ಬೆರಳ ಗಾಯಕ್ಕೆ ಎರಡು ಮೂರು ದಿನ ಈ ಎಣ್ಣೆಯನ್ನೇ ಹಚ್ಚಿದರು, ವಾಸಿಯಾಯಿತು.
ಜಿಲ್ಲೆಯಲ್ಲಿ ನೆಲಕಚ್ಚುತ್ತಿರುವ ತೆಂಗಿಗೆ ಮೌಲ್ಯವರ್ಧನೆ ಮಾಡಬೇಕು, ತೆಂಗು ಬೆಳೆಯುವವರೇ ಅದನ್ನು ಬಳಸುವಂತೆ ಪ್ರೇರೇಪಿಸಬೇಕು, ಪ್ರತಿ ತೋಟದಲ್ಲೂ ತಾಜಾ ಎಣ್ಣೆ ತೆಗೆಯುವ ಘಟಕಗಳು ಸ್ಥಾಪನೆಯಾಗಿ ಹಾಲಿನ ಡೈರಿಗಳಂತೆ ಸಹಕಾರಿ ತತ್ವದಡಿ ಎಣ್ಣೆಯ ಕೊಳ್ಳುವಿಕೆ ಮತ್ತು ಮಾರಾಟ ನಡೆಯಬೇಕು ಎಂಬ ಕನಸು ಹೊಂದಿದ ಈ ಮೂವರೂ ನಗರದ ಅಲ್ಲಲ್ಲಿ ಬ್ಯಾನರ್ ಹಾಕುವ ಮೂಲಕ, ಮನೆ- ಮನೆ ಪ್ರಚಾರ ಮಾಡುವ ತಮ್ಮ ಪ್ರಯತ್ನವನ್ನು ಯಶಸ್ಸುಗೊಳಿಸಲು ಒದ್ದಾಡುತಿದ್ದಾರೆ. ತೆಂಗಿನ ತೋಟದಲ್ಲೇ ತಯಾರಾಗುವ ತಾಜಾ ಎಣ್ಣೆ ಬಳಸುವ ಮೂಲಕ ಇವರ ಶ್ರಮವನ್ನು ಸಾರ್ಥಕಗೊಳಿಸೋಣ.
ಸಂಪರ್ಕಕ್ಕಾಗಿ ಮೊ. 9242938200, 9591133994

- ಮಲ್ಲಿಕಾರ್ಜುನ ಹೊಸಪಾಳ್ಯ
krushikaimara@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.