ಸಾವಯವ ಸಾಬೂನು

ಸಿನಿಮಾ ತಾರೆಯರ ಮೈಕಾಂತಿ ಹೆಚ್ಚಿಸುವ ಸೋಪಿನ ಬಗ್ಗೆ ಝಗಮಗಿಸುವ ಜಾಹಿರಾತು ಕೇಳಿದ್ದೀರಿ ಹಾಗೂ ನೋಡಿದ್ದೀರಿ. ನಾನು ಹೇಳಹೊರಟಿರುವುದು ಕೀಟ ನಿಯಂತ್ರಣದ ಮೂಲಕ ನಮ್ಮ ಕೃಷಿಲೋಕದ ಎವರ್‌ಗ್ರೀನ್ ತಾರೆಯರ ಮುಖಕಾಂತಿ ಹೆಚ್ಚಿಸುವ ಹೊಂಗೆ ಮತ್ತು ಬೇವಿನ ಸೋಪುಗಳ ಬಗ್ಗೆ.
ಹೊಂಗೆ ಮತ್ತು ಬೇವಿನ ಸೋಪು ಸಾವಯವ ವಿಧಾನದಲ್ಲಿ ಬೇಸಾಯ ಮಾಡುವವರಿಗೆ ಕೀಟ ನಿಯಂತ್ರಿಸಲು ಅತ್ಯಂತ ಸೂಕ್ತ. ಎರಡೂ ಸೋಪುಗಳು ಒಂದೇ ರೀತಿಯ ಕೆಲಸ ಮಾಡುತ್ತವೆ. ಹಾಗಾಗಿ ಯಾವುದಾದರೂ ಒಂದನ್ನು ಬಳಸಿದರೆ ಸಾಕು. ವಿಶೇಷವಾಗಿ ತರಕಾರಿ ಬೆಳೆಗಳಿಗೆ ಇದು ಪರಿಣಾಮಕಾರಿ. ಸೋಪಿನ ದ್ರಾವಣವನ್ನು ತರಕಾರಿ ಬೆಳೆಗಳ ಮೇಲೆ ಸಿಂಪಡಿಸಬೇಕು. ಕೀಟ ಬಾಧೆ ತಗುಲುವವರೆಗೂ ಕಾಯದೆ ನಾಟಿ ಮಾಡಿದ 15 ದಿವಸಕ್ಕೆ ಮೊದಲ ಸಿಂಪಡಣೆ ಮಾಡಬೇಕು. ಹುಳ ಬಿದ್ದ ಮೇಲೆ ಪರದಾಡುವುದಕ್ಕಿಂತ ಮುಂಚಿತವಾಗಿಯೇ ಸಿಂಪಡಿಸಿದರೆ ಕಡಿಮೆ ಖರ್ಚು ಹಾಗೂ ಅಲ್ಪ ಸಮಯದಲ್ಲೇ ಮುಗಿದುಹೋಗುತ್ತದೆ. ಮುಖ್ಯವಾಗಿ ತರಕಾರಿಗಳಿಗೆ ಬರುವ ರಂಗೋಲಿ ಹುಳ, ಕಾಯಿಕೊರಕ, ಹಣ್ಣುಕೊರಕ, ಹೇನು, ನುಸಿ, ಜಿಗಿಹುಳ ಮುಂತಾದವುಗಳನ್ನು ಇದರಿಂದ ನಿಯಂತ್ರಿಸಬಹುದು.
ಸೋಪನ್ನು ದ್ರಾವಣವನ್ನಾಗಿ ಮಾರ್ಪಡಿಸುವುದು ಅತಿ ಸುಲಭ. ಐದರಿಂದ ಹತ್ತು ಗ್ರಾಂ ಬೇವು ಅಥವಾ ಹೊಂಗೆ ಸೋಪನ್ನು ಒಂದು ಲೀಟರ್ ನೀರಿನಲ್ಲಿ ಚೆನ್ನಾಗಿ ಕಿವುಚಿ ಕರಗಿಸಿ. ನಂತರ ತೆಳುವಾದ ಬಟ್ಟೆ ಅಥವಾ ನೈಲಾನ್ ನೆಟ್ ಅಥವಾ ಟೀ ಸೋಸುವುದರಲ್ಲಿ ಸೋಸಿಕೊಳ್ಳಿ. ಈಗ ದ್ರಾವಣ ರೆಡಿ ಟು ಯೂಸ್. ಇದನ್ನು ತರಕಾರಿಗಳ ಕುಡಿ ಹಾಗೂ ಎಲೆಗಳ ತಳಭಾಗಕ್ಕೆ ತಗುಲುವಂತೆ ಸಿಂಪರಣೆ ಮಾಡಿ. ಪುಟ್ಟ ಪೊರಕೆಯಿಂದ ಸಿಂಪಡಿಸಬಹುದು ಅಥವಾ ಸ್ಪ್ರೇಯರ್ ಬಳಸಬಹುದು. ಸಿಂಪಡಿಸಿದ ತಕ್ಷಣ ಅಥವಾ ಒಂದೆರಡು ದಿನದಲ್ಲಿ ಮಳೆಬಂದರೆ ಮತ್ತೆ ಸ್ಪ್ರೇ ಮಾಡಬೇಕು. ಒಂದು ಬೆಳೆಗೆ ಅಗತ್ಯಕ್ಕನುಗುಣವಾಗಿ 4- 5 ಬಾರಿ ಈ ದ್ರಾವಣ ಸಿಂಪಡಿಸಿದರೆ ಪರಿಣಾಮಕಾರಿ. ಅಂಗಡಿಗಳಲ್ಲಿ ಸಿಗುವ ಘನಘೋರ ರಸವಿಷ ತಂದು ಹೊಡೆದು ಮಣ್ಣಿನ ಆರೋಗ್ಯಕ್ಕೂ ನಮ್ಮ ಆರೋಗ್ಯಕ್ಕೂ ಹಾನಿ ಮಾಡಿಕೊಳ್ಳುವ ಬದಲು ನಮ್ಮ ಹೊಳೆ ಸಾಲು, ರಸ್ತೆ ಬದಿ, ಹೊಲದ ಬದುಗಳಲ್ಲಿ ಸಿಗುವ ಹೊಂಗೆ ಅಥವಾ ಬೇವಿನ ಬೀಜದಿಂದ ತಯಾರಾದ ಈ ಸೋಪನ್ನು ಬಳಸುವುದು ಎಲ್ಲ ದೃಷ್ಟಿಯಿಂದಲೂ ಒಳಿತಲ್ಲವೇ?
ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಈ ಸೋಪುಗಳನ್ನು ತಯಾರಿಸುತ್ತದೆ. ಅದರ ಅಂಗಸಂಸ್ಥೆಯಾದ ತುಮಕೂರು ಬಳಿಯ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರವು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಈ ಸೋಪುಗಳ ತಯಾರಿಕೆ ಬಗ್ಗೆ ಗ್ರಾಮೀಣ ಯುವಕ, ಯುವತಿಯರಿಗೆ ತರಬೇತಿ ನೀಡುತ್ತದೆ. ಸ್ಥಳೀಯರೇ ಇದನ್ನು ಉತ್ಪಾದಿಸಿ ಅಲ್ಲಿಯೇ ಮಾರಾಟ ಮಾಡಲಿ. ಕಡಿಮೆ ದರಕ್ಕೆ ರೈತರಿಗೆ ಸಿಗಲಿ, ಹಳ್ಳಿಗಳಲ್ಲಿ ಯಥೇಚ್ಛ ಸಿಗುವ ಹೊಂಗೆ ಮತ್ತು ಬೇವಿನ ಬೀಜಗಳ ಸದುಪಯೋಗವಾಗಲಿ ಎಂಬುದು ಇದರ ಹಿಂದಿನ ಉದ್ದೇಶ. ತರಬೇತಿ ಅವಧಿ ಒಂದು ತಿಂಗಳು. ಗ್ರಾಮೀಣ ಯುವಕ,ಯುವತಿಯರು ಇದನ್ನೊಂದು ಉಪಕಸುಬಾಗಿ ಮಾಡಿಕೊಳ್ಳಬಹುದು. ಸಾವಯವ ಕೃಷಿ ಬಗ್ಗೆ ರೈತರ ಒಲವು ಹೆಚ್ಚುತ್ತಿರುವುದರಿಂದ ಈ ಸೋಪುಗಳಿಗೆ ಸಹಜವಾಗಿಯೇ ನಿರಂತರ ಬೇಡಿಕೆ ಇರುತ್ತದೆ.
ತರಬೇತಿ ಕುರಿತು ಹೆಚ್ಚಿನ ಮಾಹಿತಿಗೆ ಸಂಪರ್ಕ ಡಾ. ಹನುಂತೇಗೌಡ, ವಿಷಯತಜ್ಞರು, ಕೇವಿಕೆ, ಹಿರೇಹಳ್ಳಿ. ದೂ. 0816- 2243792 (ಕಚೇರಿ ವೇಳೆಯಲ್ಲಿ ಮಾತ್ರ).
- ಮಲ್ಲಿಕಾರ್ಜುನ ಹೊಸಪಾಳ್ಯ
krushikaimara@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


