ಕೃಷಿ-ಪರಿಸರ

ತಾಳೆ ಭಾಗ್ಯ!

ತಾಳೆ ಭಾಗ್ಯ!
Published On :

ದೀರ್ಘಾವಧಿಯ ಬೆಳೆ ಬೆಳೆದು ಲಾಭ ಗಳಿಸಬೇಕೆನ್ನುವವರು ತಾಳೆ ಬೆಳೆಯಬಹುದು. ಅದರಲ್ಲಿ ಅಂತರ ಬೆಳೆಗಳನ್ನು ಬೆಳೆದು ಮತ್ತಷ್ಟು ಲಾಭ ಗಳಿಸಬಹುದು. ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದ ದ್ವಾರಮಕ್ಕಿಯ ಜಿ.ಎನ್. ರತ್ನಾಕರ ಗೌಡರು ಬಹುವಾರ್ಷಿಕ ಬೆಳೆಗಳಾದ ತಾಳೆ, ಅಡಕೆ, ತೆಂಗು, ಮಾವು, ಕಾಳುಮೆಣಸು ಕೃಷಿ ಅಳವಡಿಸಿಕೊಂಡು, ನಿರಂತರ ಆದಾಯ ಗಳಿಸುತ್ತಿದ್ದಾರೆ.

ತಾಳೆ ಬೆಳೆ
ರತ್ನಾಕರಗೌಡರು 18 ಎಕರೆ ಜಮೀನಿನಲ್ಲಿ ಅರ್ಧ ಭಾಗ ಭತ್ತ ಬೆಳೆಯುತ್ತಿದ್ದರು. ಆದರೆ, ಕಾರ್ಮಿಕರ ಅಲಭ್ಯದಿಂದ ತಾವೇ ಸ್ವತಃ ಕೆಲಸ ಮಾಡಿ ಬೆಳೆಯಲು ಮನಸ್ಸು ಮಾಡಿದರು. ಆಗ ತೋಟಗಾರಿಕೆ ಇಲಾಖೆಯ ಸಲಹೆಯಂತೆ ತಾಳೆ ಬೆಳೆಯಲು ಮುಂದಾದರು. ಒಟ್ಟು 5 ಎಕರೆ ತಾಳೆ ಹಾಕಿದ್ದಾರೆ. ಇದರಲ್ಲಿ ಎರಡೂವರೆ ಎಕರೆ ಐದು ವರ್ಷದ ಮರಗಳಾದರೆ ಉಳಿದ ಎರಡೂವರೆ ಎಕರೆ ತೋಟದಲ್ಲಿ 8 ವರ್ಷದ ಮರಗಳಿವೆ. ಇದರಿಂದಾಗಿ ನಿರಂತರ ಆದಾಯಕ್ಕೇನೂ ಕೊರತೆಯಿಲ್ಲ.
ತಾಳೆ ಕೃಷಿಯಲ್ಲಿ ಎಕರೆಗೆ ಕನಿಷ್ಠ 55ರಿಂದ 60 ಮರ ನೆಟ್ಟು ಆದಾಯ ಗಳಿಸಬಹುದು. ಇದರಲ್ಲಿ ಎರಡು ಜಾತಿಯ ಹೂವು ಬಿಡುತ್ತವೆ. ಗಂಡು ಹಾಗೂ ಹೆಣ್ಣು ಹೂವು. ಗಂಡು ಹೂವಿನಲ್ಲಿ ಕಾಯಿ ಬಿಡದೇ ಕೇವಲ ಹೆಣ್ಣು ಹೂವಿನಲ್ಲಿ ಗೊಂಚಲು ಗೊಂಚಲಾಗಿ ಕಾಯಿಗಳು ಬಿಡುತ್ತವೆ. ಇವು ಹೂವಿನಿಂದ ಕಾಯಿಯಾಗಿ ಹಣ್ಣಾಗಲು ಕನಿಷ್ಠ ನಾಲ್ಕು ತಿಂಗಳು ಬೇಕು. ಒಂದು ಮರದಲ್ಲಿ 6ರಿಂದ 7 ಗೊಂಚಲು ಕಾಯಿಗಳು ಬಿಟ್ಟು, ಒಂದೊಂದು ಗೊಂಚಲು 15- 40 ಕೆಜಿವರೆಗೂ ಇರುತ್ತವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಜಿಗೆ ರು. 8- ರು. 10 ಲಭ್ಯ. ಇದನ್ನು ನರಸಿಂಹರಾಜಪುರದ ತೋಟಗಾರಿಕೆ ಇಲಾಖೆಯವರು ಸ್ವತಃ ಕೊಂಡು, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಹತ್ತಿರವಿರುವ ಆಯಿಲ್ ಫ್ಯಾಕ್ಟರಿಗೆ ರವಾನಿಸುತ್ತಾರೆ. ಫ್ಯಾಕ್ಟರಿಯವರು ಬೆಳೆ ಪರಿಶೀಲಿಸಿ, ತಕ್ಕ ದರ ನಿಗದಿಪಡಿಸಿ, ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾರೆ.

ಮಿಶ್ರಬೆಳೆ
ತೋಟದಲ್ಲಿ ಕೇವಲ ತಾಳೆ ಮಾತ್ರವಲ್ಲದೆ, ಅಡಕೆ, ತೆಂಗು ಹಾಗೂ ಕಾಳುಮೆಣಸನ್ನೂ ಬೆಳೆಯುತ್ತಾರೆ. ನಿರಂತರ ಆದಾಯಕ್ಕಾಗಿ ಒಂದಷ್ಟು ಆಧುನಿಕ ಸೌಲಭ್ಯದ ಮೊರೆ ಹೋಗಿದ್ದಾರೆ. ಅಡಕೆ ಮರದ ಹಾಳೆ, ಸೋಗೆಯನ್ನು ಒಂದನ್ನೂ ತೆಗೆಯದೆ ಮರದ ಬುಡದಲ್ಲಿಯೇ ಕೊಳೆಯಲು ಬಿಡುತ್ತಾರೆ. ಇದರಿಂದಾಗಿ, ಮರಕ್ಕೆ ನಿರಂತರವಾಗಿ ಉತ್ತಮ ಗೊಬ್ಬರ ದೊರಕುತ್ತದೆ. ಅಲ್ಲದೆ, ತೋಟದಲ್ಲಿ ಐದು ಬೋರ್ ಕೊರೆಸಿದ್ದಾರೆ. ಕೆರೆ ನಿರ್ಮಿಸಿ, ತೋಟದುದ್ದಕ್ಕೂ ಹನಿ ನೀರಾವರಿ ಅಳವಡಿಸಿದ್ದಾರೆ. ಗಿಡಗಳಿಗೆ ಔಷಧ ಸಿಂಪಡಿಸಲು ಹಾಗೂ ಕಳೆ ತೆಗೆಯಲು ಕಡಿಮೆ ಖರ್ಚಿನಲ್ಲಿ ಆಗುವ ಯಂತ್ರ ಬಳಸುತ್ತಾರೆ.
ಅಡಕೆ ಹಾಗೂ ತೆಂಗಿನ ಮರಗಳು 50- 60 ವರ್ಷ ಫಸಲನ್ನು ನೀಡಿದರೂ ಇದರ ಇಳುವರಿ ವರ್ಷ ಕಳೆದಂತೆಲ್ಲಾ ಫಸಲು ಕಡಿಮೆಯಾಗುತ್ತಾ ಹೋಗುತ್ತದೆ. ಎರಡು ಅಡಕೆ ಮರದ ನಡುವೆ ಸಸಿ ಬೆಳೆಸಿ, ಹೆಚ್ಚು ವರ್ಷವಾದ ಮರಗಳನ್ನು ಕಡಿದುಬಿಡುತ್ತಾರೆ. ಇದರಿಂದಾಗಿ, ನಿರಂತರ ಆದಾಯಕ್ಕೇನೂ ಚ್ಯುತಿಯುಂಟಾಗಲ್ಲ. ಮಲ್ಲಿಕಾ, ರಸಪೂರಿ, ದಶಾವರಿ ಮುಂತಾದ ಉತ್ತಮ ಜಾತಿಯ ಮಾವಿನ ಫಸಲೂ ಇವರಿಗೆ ಆದಾಯ ತಂದುಕೊಡುತ್ತಿದೆ. 1500 ಅಡಕೆ ಮರಗಳಿದ್ದು, ಇವುಗಳ ಬುಡದಲ್ಲೇ ಕಾಳುಮೆಣಸಿನ ಬಳ್ಳಿ ಹಾಕಿದ್ದಾರೆ. ಇದು ಫಸಲು ಬಿಡುವ ಹಂತದಲ್ಲಿದೆ. ಇದಲ್ಲದೆ, ತೆಂಗು ಬೆಳೆದಿರುವುದರಿಂದ ಎಳನೀರು, ತೆಂಗಿನಕಾಯಿಗಳನ್ನು ಸ್ಥಳದಲ್ಲಿಯೇ ಬಿಕರಿ ಮಾಡುತ್ತಾರೆ.

ಬಿಎಸ್ಸಿ ಪದವೀಧರ
ಮೂಲತಃ ಕೃಷಿಕ ಕುಟುಂಬದಲ್ಲಿಯೇ ಜನಿಸಿದ್ದರೂ ರತ್ನಾಕರ್ ಅವರು ಬಿಎಸ್ಸಿ ಪದವೀಧರರು. ಇವರ ಕೃಷಿ ಚಟುವಟಿಕೆಗೆ ಪತ್ನಿ, ಹಾಗೂ ಮಗ- ಸೊಸೆ ಹೆಗಲು ನೀಡುತ್ತಾರೆ. 2011- 12ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ತಾಳೆ ಬೆಳೆ ಅಭಿವೃದ್ಧಿ ಯೋಜನೆಯಿಂದ ತಾಳೆ ಉತ್ಪಾದನೆ ಸಾಧಕರು ಎಂಬ ಗೌರವ ಪಡೆದಿದ್ದಾರೆ. ರತ್ನಾಕರ್ ಅವರಿಗೆ ನೀವೂ ಶುಭಾಶಯ ಕೋರಿ... ಮೊ. 9448505957.

- ಭಾಗ್ಯ ನಂಜುಂಡಸ್ವಾಮಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.