ಕವಳಿ ಕಳಕಳಿ

ಹಿಂದೆ ದನಗಾಯಿಗಳು, ಕುರಿಗಾಹಿಗಳು ಈ ಭಾಗದ ಕಾಡುಗಳಲ್ಲಿ ಕವಳಿ, ಬಿಕ್ಕೆ, ಕಾರೆ ಹಣ್ಣು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಇಂದು ಅದೇ ಕುರಿಗಾಯಿಗಳು ಕುರಿ ಮೇಯಿಸಲೆಂದು ಕವಳೆ ಗಿಡಗಳನ್ನೇ ಕಡಿದು ಹಾಕುತ್ತಿರುವುದು ದುರ್ದೈವ.
ಕವಳಿ, ಬಿಕ್ಕೆ, ಕಾರೆ ಮುಂತಾದ ಅಪರೂಪದ ಹಣ್ಣಿನ ಗಿಡ ಕಡಿದು ಹಾಳು ಮಾಡುತ್ತಿರುವುದು ಮಾತ್ರ ಪರಿಸರಪ್ರೇಮಿಗಳಿಗೆ ನುಂಗಲಾರದ ತುತ್ತಾಗಿದೆ.
ಬಲು ಸವಿ
ಈಗ ಕವಳಿ ಹಣ್ಣಿನ ಸೀಜನ್. ಕೂಡ್ಲಿಗಿಯಿಂದ ಕೊಟ್ಟೂರಿಗೆ ಹೋಗುವವರು ರಸ್ತೆಯ ಅಕ್ಕಪಕ್ಕ ಕಣ್ಣಾಡಿಸಿದರೆ ಕಪ್ಪು ದ್ರಾಕ್ಷಿ ಹೋಲುವ ಕವಳಿ ಹಣ್ಣು ನೋಡಬಹುದು. ಅಳಿದುಳಿದ ಕವಳಿ ಗಿಡಗಳಲ್ಲಿ ಕಪ್ಪು ಹಣ್ಣು ಕವಳಿಯದ್ದೇ ಕಾರುಬಾರು. ಇನ್ನಷ್ಟು ದಿನ ಹೋದರೆ ಬಿಕ್ಕೆ ಹಣ್ಣುಗಳ ಸೀಜನ್. ಆದರೆ, ಬಿಕ್ಕೆ ಮರಗಳು ಹುಡುಕಿದರೂ ಸಿಗದ ಪರಿಸ್ಥಿತಿ. ನಂತರ ಕಾರೆ ಹಣ್ಣಿನ ಸುಗ್ಗಿ. ಸೀಜನ್‌ಗೆ ಮಾತ್ರ ಸಿಗುವ ಇಂಥ ಅಪರೂಪದ ಕಾಡು ಫಲಹಾರದ ರುಚಿ ಅನುಭವಿಸಿದವರಿಗೆ ಗೊತ್ತು ಅದರ ಸವಿ. ದೇಹದ ಆರೋಗ್ಯಕ್ಕೂ ಉತ್ತಮ.
ಕಣ್ಮರೆಯಾಗುತ್ತಿದೆ...
ನಮ್ಮ ಕಣ್ಮುಂದೆ ನೂರಾರು ಜಾತಿಯ ಹಣ್ಣಿನ ಮರಗಳು ಕಾಡಿನಿಂದ ಮರೆಯಾಗಿದ್ದು, ಈಗ ಅಳಿದುಳಿದಿರುವ ಅಪಾರ ಔಷಧಿ ಗುಣಗಳಿಗುವ ಕವಳಿ, ಕಾರೆ, ಬಿಕ್ಕೆ ಹಣ್ಣಿನ ಗಿಡ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ದನಗಾಹಿಗಳು, ಕುರಿಗಾಹಿಗಳು ಹಾಗೂ ಉರುವಲುಗಳಿಗಾಗಿ ಗಿಡ ಕಡಿಯುವವರು ಯಾರೇ ಕೊಡಲಿ, ಕುಡುಗೋಲು ಹಿಡಿದು ಕಾಡಿಗೆ ಬಂದರೆ ಅಂಥವರ ಮೇಲೆ ಮುಲಾಜಿಲ್ಲದೇ ಕ್ರಮ ಜರುಗಿಸಿ ಶಿಕ್ಷೆ ನೀಡದೆ ಹೋದರೆ ಮುಂದಿನ ದಿನಗಳಲ್ಲಿ ಕವಳಿ, ಕಾರೆ, ಬಿಕ್ಕೆ ಹಣ್ಣಿನ ಮರಗಳನ್ನು ಮ್ಯೂಸಿಯಂನಲ್ಲಿ ನೋಡಿದರೂ ಅಚ್ಚರಿಯಾಗದು.
ಹಗರಿಬೊಮ್ಮನಹಳ್ಳಿ ತಾಲೂಕು ಬೆಣ್ಣಿಕಲ್ಲು ಕಾಯ್ದಿಟ್ಟ ಪ್ರದೇಶಕ್ಕೆ ಸೇರಿದ ನೂರಾರು ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಒಂದು ಕಾಲಕ್ಕೆ ಈಚಲ ಹಣ್ಣುಗಳು, ಬಿಕ್ಕೆ, ಕಾರೆ, ಕವಳಿ, ಗೋಡಂಬಿ ಹಣ್ಣುಗಳ ಕಣಜವೇ ಆಗಿತ್ತು. ಸುತ್ತಮುತ್ತಲ ಹತ್ತಾರು ಹಳ್ಳಿಗಳ ಜನ ಇಲ್ಲಿಗೆ ಹಣ್ಣು ತಿನ್ನಲು ಬರುತ್ತಿದ್ದರು. ಆದರೆ, ಇಂದು ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಕಾಡು ರೈತರ ಒತ್ತುವರಿಯಿಂದ ಜಮೀನುಗಳಾಗಿ ಮಾರ್ಪಡುತ್ತಿವೆ. ಇನ್ನು ಎರಡೇ ವರ್ಷ ಕಳೆದರೆ ಇಲ್ಲಿ ಒಂದು ಕಾಲಕ್ಕೆ ಕಾಡಿತ್ತು ಎನ್ನುವುದನ್ನು ಪತ್ತೆ ಮಾಡಬೇಕಾಗುತ್ತದೆ. ಈ ಕಾಡಿನಲ್ಲಿದ್ದ ಜಿಂಕೆ, ಮೊಲ, ನರಿ, ಉಡ ಮುಂತಾದ ಪ್ರಾಣಿಗಳು ಕಾಡಿನ ನಾಶದಿಂದ ಬೇಟೆಗಾರಿಕೆಯಿಂದ ಅಪರೂಪದ ಸಸ್ಯ ಹಾಗೂ ಜೀವವೈವಿಧ್ಯ ಸಂತತಿ ನಾಶವಾಗುತ್ತಿದೆ. ಜೀವರಾಶಿಯ ಅಸಮತೋಲನದಿಂದ ಮನುಷ್ಯನ ಜೀವನವೂ ಕಷ್ಟಕರವಾಗುತ್ತದೆ ಎಂಬ ವಿಚಾರವನ್ನು ಈ ಭಾಗದ ಅನಕ್ಷರಸ್ಥರಿಗೆ ತಿಳಿಸಿಕೊಡುವವರು ಯಾರು?
- ಭೀಮಣ್ಣ ಗಜಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


