ಕೃಷಿ-ಪರಿಸರ

ವಸಂತ ಋತು

ರೈತರಿಗೆ ಮಾಹಿತಿ ನೀಡಲು ತೋಟಗಾರಿಕಾ ಇಲಾಖೆ ಆರ್ಟಿ ಕ್ಲಿನಿಕ್ ಹಾಗೂ ಕೃಷಿ ಇಲಾಖೆ ರೈತ ಸಂಪರ್ಕ...

ವಸಂತ ಋತು
Published On :

ರೈತರು ದೇಶದ ಜೀವ. ಅವರಿಗೆ ಮಾಹಿತಿ ನೀಡಲು ತೋಟಗಾರಿಕಾ ಇಲಾಖೆ ಆರ್ಟಿ ಕ್ಲಿನಿಕ್ ಹಾಗೂ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳನ್ನು ತೆರೆದವು. ಆರ್ಟಿ ಕ್ಲಿನಿಕ್‌ನಲ್ಲಿ ಒಂದಷ್ಟು ಮಾಹಿತಿ ಸಿಗುತ್ತಿದೆಯಾದರೂ ರೈತ ಸಂಪರ್ಕ ಕೇಂದ್ರಗಳು ರೈತರಿಗೆ ಭೂಮಿಯ ಫಲವತ್ತತೆ, ಹಸಿರು ಉಳಿಸುವ ಹಾಗೂ ಬೆಳೆಸುವ ಬಗ್ಗೆ ಮಾಹಿತಿ ನೀಡುವ ಬದಲು ರಸಗೊಬ್ಬರ, ಬಿತ್ತನೆ ಬೀಜ, ಕೀಟ ಮತ್ತು ಕ್ರಿಮಿನಾಶಕ ಮಾರುವ ಕೇಂದ್ರಗಳಾಗಿ ಪರಿವರ್ತಿತವಾಗಿವೆ.
ಮಳೆಯ ಅಭಾವ, ರೋಗ, ಕೀಟಗಳ ಹಾವಳಿಯಿಂದಾಗಿ ಆಹಾರದ ಉತ್ಪಾದನೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿದೆ. ಉತ್ಪಾದನೆ ಹೆಚ್ಚಿಸಲು ಅವಕಾಶವಿದೆ. ಇರುವ ಭೂಮಿಯನ್ನು ಹೆಚ್ಚಿಸಲಾಗದು. ಆದರೆ, ಕಡಿಮೆ ನೀರು, ರಾಸಾಯನಿಕ ಬಳಸುವುದರಿಂದ ಹೆಚ್ಚು ಪೌಷ್ಟಿಕಾಂಶ ಇರುವ ಆಹಾರ ಉತ್ಪಾದನೆ ಮಾಡಬಹುದು. ತಳಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಬೇಕು. ಇದರಿಂದ ಶೇ.5ರಷ್ಟು ಗುಣಮಟ್ಟ ಹೆಚ್ಚುತ್ತದೆ.

ಬೇರಿನ ಆರೋಗ್ಯ
ಜಮೀನಿಗೆ ರಾಸಾಯನಿಕ ಗೊಬ್ಬರ ಅಗತ್ಯ. ಆದರೆ, ರೈತರು ಹಾಕುವ ವಿಧಾನ ಸರಿಯಿಲ್ಲ. ಬೇರಿನ ಆರೋಗ್ಯ ಮುಖ್ಯ. ತಾಂತ್ರಿಕತೆ ಸರಿಯಾಗಿ ಬಳಸಲಿಲ್ಲ ಅಂದ್ರೆ ಉಲ್ಟಾ. ಮಣ್ಣಿಂದ ಬರುವ ರೋಗಕ್ಕೆ ಚಿಕಿತ್ಸೆ ಇಲ್ಲ.

ವಿನೂತನ ಪ್ರಯೋಗ
ಈ ಹಿನ್ನೆಲೆಯಲ್ಲಿ ಸಣ್ಣ ರೈತರಿಗೆ ಉಚಿತವಾಗಿ ಮಾಹಿತಿ ನೀಡಲು ಡಾ. ವಸಂತಕುಮಾರ್ ಅವರು ಅಗ್ರಿ ಕ್ಲಿನಿಕ್ ಆರಂಭಿಸಿದ್ದಾರೆ. ಭಾರತದಲ್ಲೇ ಇದೊಂದು ವಿನೂತನ ಪ್ರಯೋಗ. ಜ್ಞಾನ, ಬದ್ಧತೆ, ಸೇವೆ ಮತ್ತು ಸೌಲಭ್ಯ ಇವರ ಧ್ಯೇಯ. ಸಸ್ಯರೋಗ ಪತ್ತೆ ಹಚ್ಚುವಿಕೆಯಲ್ಲಿ ಇವರದು ಅಗಾಧ ಪರಿಣತಿ. ಅತ್ಯಮೂಲ್ಯ, ವೈಜ್ಞಾನಿಕವಾಗಿ ಚಿತ್ರೀಕರಿಸಿದ ದೇಶದಲ್ಲೇ ಅತಿ ಹೆಚ್ಚು ಚಿತ್ರಗಳ ಸಂಗ್ರಹ ಇವರಲ್ಲಿದೆ.

ರೈತರಿಗೆ ಅರಿವು
ಹೊಗೆಸೊಪ್ಪು ಸಸಿಮಡಿಯ ವೈಜ್ಞಾನಿಕ ನಿರ್ವಹಣೆಯ ಬಗ್ಗೆ ವಿಡಿಯೋ ಕ್ಯಾಸೆಟ್ ನಿರ್ಮಿಸಿ, ರೈತರಿಗೆ ಉಚಿತವಾಗಿ ಹಂಚಿದ್ದಾರೆ. ಹಲವು ಶಿಬಿರ ನಡೆಸಿ, ಕೃಷಿಯಲ್ಲಿ ಹೊಸ ತಂತ್ರಜ್ಞಾನ, ನೀರಿನ ಮಿತ ಬಳಕೆ, ನಿರ್ವಹಣೆ, ಮಣ್ಣಿನ ಆರೋಗ್ಯದ ಬಗ್ಗೆ ಅರಿವು ಮೂಡಿಸಿದ್ದಾರೆ. ರೈತರ ಜಮೀನಿಗೆ ಭೇಟಿ ನೀಡಿ, ರೋಗ ಗುರುತಿಸಿ, ನಿಯಂತ್ರಣಕ್ಕೆ ಸಲಹೆ ಮಾಡುತ್ತಾರೆ. ತಂಬಾಕು ಬೆಳೆಗಾರರಿಗೆ ಪರ್ಯಾಯವಾಗಿ ತರಕಾರಿ ಬೆಳೆಯುವಂತೆ ಸಲಹೆ ನೀಡುತ್ತಿದ್ದಾರೆ.

ಗ್ರಂಥಾಲಯ
ರೈತೋಪಯೋಗಿ ಪುಸ್ತಕಗಳು, ನಿಯತಕಾಲಿಕೆಗಳು, ವಿಡಿಯೋ ಸಿಡಿಗಳ ಗ್ರಂಥಾಲಯ ತೆರೆದಿದ್ದಾರೆ. ಕೃಷಿ ವಿಜ್ಞಾನ ವೇದಿಕೆ ಆರಂಭಿಸಿ, ರೈತರಿಗೆ ತರಬೇತಿ, ಉಚಿತ ಸಸ್ಯರೋಗ ತಪಾಸಣಾ ಪ್ರಯೋಗಾಲಯ ನಡೆಸುತ್ತಿದ್ದಾರೆ. ಈ ಉಚಿತ ಖಾಸಗಿ ಸಸ್ಯರೋಗ ಪ್ರಯೋಗಾಲಯವೂ ದೇಶದಲ್ಲೇ ಪ್ರಥಮ.
ಡಾ. ವಸಂತಕುಮಾರ್ ಅವರು ಮೈಸೂರು ವಿವಿಯಿಂದ ಬಿ.ಎಸ್ಸಿ, ಎಂ.ಎಸ್ಸಿ (ಸಸ್ಯಶಾಸ್ತ್ರ), ಎಂ.ಫಿಲ್ (ಬೀಜರೋಗ ಶಾಸ್ತ್ರ), ಪಿಎಚ್.ಡಿ (ಅನ್ವಯಿಕ ಸಸ್ಯಶಾಸ್ತ್ರ) ಪದವಿ ಪಡೆದವರು. ರಾಜ್ಯ ಸರ್ಕಾರದಿಂದ ಶ್ರೇಷ್ಠ ವಿಜ್ಞಾನ ಸಂವಹನಕಾರ ಪ್ರಶಸ್ತಿ, ಲೀಡಿಂಗ್ ಸೈಂಟಿಸ್ಟ್ ಆಫ್ ದಿ ವರ್ಲ್ಡ್ ಗೌರವ ಸಿಕ್ಕಿದೆ. ಟಿ.ಬಿ. ಜಯಚಂದ್ರ ಅವರು ಕೃಷಿ ಸಚಿವರಾಗಿದ್ದಾಗ ಡಾ. ವಸಂತಕುಮಾರ್ ಸಲಹೆಗಾರರಾಗಿದ್ದರು. ಈಗಲೂ ಹಲವಾರು ಕೃಷಿ ಸಂಬಂಧಿ ಕಂಪನಿಗಳಿಗೆ ಸಲಹೆಗಾರರಾಗಿದ್ದಾರೆ.

ಸಂಶೋಧಕ
ವಸಂತಕುಮಾರ್ ಒಂದು ರೀತಿಯಲ್ಲಿ ಹಸಿರು ಡಾಕ್ಟರ್. ಸಸ್ಯರೋಗ ಸಂಶೋಧಕ. ಏಕೆಂದರೆ ಕೃಷಿ ಪದವೀಧರರು, ತಜ್ಞರು, ಸಂಶೋಧಕರು, ವಿಜ್ಞಾನಿಗಳು ರೈತರ ಜಮೀನುಗಳಿಗೆ ಹೋಗಿ ಕೆಲಸ ಮಾಡುವವರು ಅಪರೂಪ. ಆಸಕ್ತಿ ಇದ್ದರೂ ನಿರ್ದಿಷ್ಟ ವಲಯಕ್ಕೆ ಮಾತ್ರ ಸೀಮಿತ. ಆದರೆ, ವಸಂತಕುಮಾರ್ ತಳಹಂತದಿಂದ ರೈತರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಲ್ಯಾಬ್ ಟು ಲ್ಯಾಂಡ್ (ಪ್ರಯೋಗಾಲಯದಿಂದ ಜಮೀನಿಗೆ) ಎಂಬುದನ್ನು ನಿಜಾರ್ಥದಲ್ಲಿ ಸಾಕಾರಗೊಳಿಸಿದ್ದಾರೆ. ಸಣ್ಣ ರೈತರು ಇವರಿಗೆ ಇ- ಮೇಲ್ ಮೂಲಕ ಫೋಟೋ ಕಳುಹಿಸಿದರೂ ಸಾಕು. ಸಸ್ಯಕ್ಕೆ ತಗುಲಿರುವ ರೋಗ ಪತ್ತೆ ಮಾಡಿ, ಪರಿಹಾರ ಸೂಚಿಸುತ್ತಾರೆ. ಆದರೆ, ದೊಡ್ಡ ರೈತರು, ಕಾರ್ಪೋರೇಟ್ ಸಂಸ್ಥೆಗಳಿಗೆ ಉಚಿತ ಸೇವೆ ಇಲ್ಲ.
ಆಸಕ್ತರು ವಸಂತಕುಮಾರ್ ಅವರ ಮೊ. 9845347884 ಸಂಪರ್ಕಿಸಬಹುದು. ಇ- ಮೇಲ್: vasanth.greenlife@gmail.com

- ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.