ಯುವ ರೈತನ ಕೃಷಿ ಪ್ರೇಮ

ಯುವಕರನ್ನು ಕೃಷಿಯಲ್ಲಿ ಉಳಿಸಿಕೊಳ್ಳುವ ಬಗ್ಗೆ ಇಂದು ಹೆಚ್ಚು ಚಿಂತನೆಗಳು ನಡೆಯುತ್ತಿವೆ. ತೋಟಗಾರಿಕಾ ಇಲಾಖೆಯು ಆರ್ಯ (ARYA - Attracting and Retaining youths in Agriculture) ಎಂಬ ಯೋಜನೆಯನ್ನೇ ಪ್ರಾಯೋಗಿಕವಾಗಿ ಕೈಗೆತ್ತಿಕೊಂಡಿದೆ. ಜೊತೆಗೆ ಹಲವಾರು ಸ್ವಯಂಸೇವಾ ಸಂಸ್ಥೆಗಳು ಆಯ್ದ ಯುವಕರಿಗೆ ಕೃಷಿ ಪ್ರೀತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತರಬೇತಿಗಳನ್ನೂ ನಡೆಸುತ್ತಿವೆ.
ಪರಿಸ್ಥಿತಿ ಅಷ್ಟೊಂದು ಹದಗೆಟ್ಟಿಲ್ಲ, ಎಲ್ಲಾ ಯುವಕರೂ ಕೃಷಿಯಿಂದ ವಿಮುಖರಾಗಿಲ್ಲ ಎಂಬುದಕ್ಕೆ ಅಲ್ಲಲ್ಲಿ ಧನಾತ್ಮಕ ಉದಾಹರಣೆಗಳೂ ಸಿಗುತ್ತವೆ. ಅಂಥವರಲ್ಲೊಬ್ಬ ಮಧುಗಿರಿ ತಾಲೂಕು ಕಮ್ಮನಕೋಟೆಯ ಯತೀಶ್. 28 ವರ್ಷ ವಯಸ್ಸಿನ ಯತೀಶ್‌ಗೆ ಮೂರೂವರೆ ಎಕರೆ ಜಮೀನಿದೆ. 2 ಎಕರೆ ನೀರಾವರಿ, ಒಂದೂವರೆ ಎಕರೆ ಖುಷ್ಕಿ. ನೀರಾವರಿಯಲ್ಲಿ ತರಕಾರಿ, ಶೇಂಗಾ, ಬತ್ತ ಬೆಳೆದರೆ, ಖುಷ್ಕಿಯಲ್ಲಿ ಮಳೆಯಾಶ್ರಿತ ಶೇಂಗಾ, ರಾಗಿ, ಅಕ್ಕಡಿ ಬೆಳೆಯುತ್ತಾರೆ. ಖುಷ್ಕಿ ಜಮೀನಿನ ಸ್ವಲ್ಪ ಭಾಗ ಜೋಪು ನೆಲ ಇದ್ದು, ಅಲ್ಲಿ ಬತ್ತ ಬೆಳೆಯುತ್ತಾರೆ.
ಇವರ ಹೊಲ ಇರುವುದು ಬೆಟ್ಟದ ಸಾಲುಗಳ ನಡುವೆ. ಜೊತೆಗೆ ಹೊಲದ ಪಕ್ಕದಲ್ಲೇ ದೊಡ್ಡ ಹಳ್ಳ. ಮೂರು ದಿಕ್ಕಿನಲ್ಲೂ ಬೆಟ್ಟಗಳಿರುವುದರಿಂದ ಹಳ್ಳಕ್ಕೆ ಉತ್ತಮ ನೀರಾಸರೆಯಿದ್ದು, ವರ್ಷದ 8-9 ತಿಂಗಳು ಹರಿಯುತ್ತಲೇ ಇರುತ್ತದೆ. ಹಳ್ಳಕ್ಕೆ ಅಲ್ಲಲ್ಲಿ ಕಟ್ಟೆ ಹಾಕಿಕೊಂಡು ಬೇಸಾಯ ಮಾಡುತ್ತಾರೆ. ಯತೀಶರ ಹೊಲದಲ್ಲಿರುವ ನೂರಾರು ವರ್ಷ ಹಳೆಯ ಸೇದೋ ಬಾವಿಯಲ್ಲಿ ಈಗಲೂ ಸಿಹಿ ನೀರಿದ್ದು, ಹಳ್ಳಿಗರು ಬಳಸುತ್ತಾರೆ. ಹಳ್ಳವೇ ಇದಕ್ಕೂ ನೀರಾಸರೆ.
ಯತೀಶರಿಗೆ ಹಳ್ಳದ ಆಸರೆಯಿಂದ ನೀರಿನ ಕೊರತೆ ಅಷ್ಟಾಗಿ ಇಲ್ಲ. ಹಾಗಾಗಿ ತರಕಾರಿ ಕೃಷಿ ಮಾಡುತ್ತಾರೆ. 2012ರ ಡಿಸೆಂಬರ್‌ನಲ್ಲಿ ವಾಣಿಜ್ಯ ಉದ್ದೇಶದಿಂದ ಹಬ್ಬು ಹುರುಳಿ ಬಿತ್ತಿದರು. ಆದರೆ, ಬಿತ್ತಿದ ಒಂದೇ ತಿಂಗಳಿಗೆ ಬೇರುಹುಳು ಬಾಧೆ ಕಾಣಿಸಿಕೊಂಡಿತು. ಕೃಷಿ ಇಲಾಖೆ ಹೇಳಿದ ಔಷಧಿ ಹಾಕಿದ ನಂತರ ಬೇರುಹುಳು ಬಾಧೆ ಹೋಯಿತಾಯದರೂ ಗಿಡ ಸೊರಗೇ ಇದ್ದವು. ಅಷ್ಟು ಹೊತ್ತಿಗೆ ಸಾವಯವ ಕೃಷಿ ಯೋಜನೆಯಡಿಯಲ್ಲಿ ಮಾಡಿಕೊಂಡಿದ್ದ ಎರೆಘಟಕದಲ್ಲಿ ಗೊಬ್ಬರ ತಯಾರಾಗಿತ್ತು. ಹುರುಳಿ ಹಾಕಿದ್ದ ಹೊಲದ ಪಕ್ಕದಲ್ಲೇ ಎರೆ ಘಟಕ ಇದ್ದುದರಿಂದ ಪ್ರತಿ ಸಾಲಿಗೂ ಒಂದೊಂದು ಮಂಕರಿ ಗೊಬ್ಬರ ಹಾಕಿ ಮಣ್ಣು ಏರು ಹಾಕಿದರು. ಒಂದೇ ವಾರದಲ್ಲಿ ಚೆನ್ನಾಗಿ ಅಕ್ಕಲು ಹೊಡೆದು ಹಸಿರು ಉಕ್ಕಿತು. 'ಅಂಗ್ಡಿಯಿಂದ ಒಂದ್ ಕೆಜಿನೂ ರಸಗೊಬ್ರ ತಂದಿಲ್ಲ' ಎನ್ನುತ್ತಾರೆ ಯತೀಶ್. ಫೆಬ್ರವರಿ ವೇಳೆಗೆ ಇಳುವರಿ ಪ್ರಾರಂಭವಾಗಿ ಮೊದಲ ಬೀಡಿನಲ್ಲೇ ಸುಮಾರು ಮೂರು ಸಾವಿರ ಆದಾಯ.
ಹತ್ತಿರದ ಊರುಗಳಲ್ಲಿ ನಡೆಯುವ ಸಂತೆಗಳಿಗೆ ತರಕಾರಿ ತೆಗೆದುಕೊಂಡು ಹೋಗಿ ಸ್ವತಃ ಮಾರಾಟ ಮಾಡುತ್ತಾರೆ. ಬೆಲೆ ಸಮ್ಮತವಾದರೆ ಕೆಲವೊಮ್ಮೆ ಒಟ್ಟಿಗೇ ಕೊಡುವುದೂ ಉಂಟು. ನಾವೇ ಮಾರಾಟ ಮಾಡದಿದ್ದರೆ ಏನೂ ಗಿಟ್ಟಲ್ಲ ಎನ್ನುತ್ತಾರೆ.
ಒಂದು ಸಲಕ್ಕೆ ಎರಡರಿಂದ ಮೂರು ರೀತಿಯ ತರಕಾರಿ ಬೆಳೆಯುತ್ತಾರೆ. ಒಂದರಲ್ಲಿ ಬೆಲೆ ಕಡಿಮೆಯಾದರೆ ಮತ್ತೊಂದು ಕೈಹಿಡಿಯಲಿ ಎಂಬುದು ಇದರ ಹಿಂದಿನ ಜಾಣ್ಮೆ. ಹುರುಳಿ ಹಾಕಿದ ಸಮಯದಲ್ಲಿ ಟೊಮೇಟೊ ಬೆಳೆದಿದ್ದರು. ಸಂತೋಷದ ವಿಚಾರವೆಂದರೆ ಎರಡಕ್ಕೂ ಉತ್ತಮ ಬೆಲೆ ಸಿಕ್ಕಿತ್ತು.
ಇವರ ಗ್ರಾಮದಲ್ಲಿ ಹಲವರು ದೂರದ ಬೆಂಗಳೂರು ಅಥವಾ ತುಮಕೂರಿಗೆ ಹೋಗಿದ್ದಾರೆ. ಊರಿನಲ್ಲಿರುವ ಕೆಲವರೂ ಅಟೋ ಓಡಿಸುವ ಅಥವಾ ಕೃಷಿ ಹೊರತಾದ ಇನ್ನಿತರ ಕೆಲಸಗಳತ್ತ ಆಕರ್ಷಿತರಾಗಿದ್ದಾರೆ. ನೀವೇಕೆ ಹೋಗಿಲ್ಲ ಎಂಬ ಪ್ರಶ್ನೆಗೆ 'ಅದೇನೋ ಗೊತ್ತಿಲ್ಲ, ಹೋಗಬೇಕು ಅಂತ ಅನ್ನಿಸಲಿಲ್ಲ' ಎಂಬ ಸರಳ ಉತ್ತರ.
- ಮಲ್ಲಿಕಾರ್ಜುನ ಹೊಸಪಾಳ್ಯ
krushikaimara@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


