ಕೃಷಿ-ಪರಿಸರ

ದಾಳಿಂಬೆ ದರ್ಬಾರ್

ಕೊಳ್ಳೇಗಾಲ ತಾಲೂಕಿನ ಹನೂರು ಗ್ರಾಮದ ರೈತ ರಮೇಶ ನಾಯ್ಡು ಅವರೇ ತಮ್ಮ ಮೂರೂವರೆ ಎಕರೆ...

ದಾಳಿಂಬೆ ದರ್ಬಾರ್
Published On :

ರೈತರು ಸಂಕಷ್ಟದಲ್ಲಿದ್ದಾಗ ಅವರನ್ನು ಯಾರೂ ಮಾತನಾಡಿಸುವುದಿಲ್ಲ. ಅದರಲ್ಲೂ ಬೆಳೆದ ಬೆಳೆ ನಷ್ಟವಾದಾಗಲಂತೂ ಅವರ ಗೋಳು ಯಾರಿಗೂ ಬೇಡ. ಆದರೆ ಇಲ್ಲೊಂದು ಅಪರೂಪದ ವಿದ್ಯಮಾನ ನಡೆದಿದೆ. ರೈತರೊಬ್ಬರು 'ನಷ್ಟ ನನಗೆ ಕಟ್ಟಿಟ್ಟ ಬುತ್ತಿ' ಎಂದುಕೊಂಡು ತಲೆ ಮೇಲೆ ಕೈಹೊತ್ತು ಕುಳಿತಾಗ ಖಾಸಗಿ ಕಂಪನಿಯೊಂದು ಅವರ ಕೈಹಿಡಿದಿದೆ. ಇದರಿಂದ ಬರಡು ಭೂಮಿಯಲ್ಲಿ ಬಂಗಾರದಂಥ ದಾಳಿಂಬೆ ಬೆಳೆ ಕಾಣುವಂತಾಗಿದೆ.
ಕೊಳ್ಳೇಗಾಲ ತಾಲೂಕಿನ ಹನೂರು ಗ್ರಾಮದ ರೈತ ರಮೇಶ ನಾಯ್ಡು ಅವರೇ ತಮ್ಮ ಮೂರೂವರೆ ಎಕರೆ ಬಂಜರು ಜಮೀನಿನಲ್ಲಿ ದಾಳಿಂಬೆ ಬೆಳೆದು ಭರ್ಜರಿ ಲಾಭ ಗಳಿಸಿದವರು.
ದಾಳಿಂಬೆ ಬೆಳೆದಿದ್ದ ಅವರು ತಮ್ಮ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆದು ಲಾಭ ಗಳಿಸುವುದು ಸಾಧ್ಯವಾಗದ ಮಾತು ಎಂದು ಕೈಚೆಲ್ಲಿ ಕುಳಿತಿದ್ದರು. ಆಗ ಕರ್ನಾಟಕ ಅಗ್ರೋ ಕೆಮಿಕಲ್ ಮಲ್ಟಿಫ್ಲೆಕ್ಸ್ ಕಂಪನಿಯ ವಿಜ್ಞಾನಿ ಡಾ.ನಾರಾಯಣಸ್ವಾಮಿ ಈ ರೈತನ ಕೈ ಹಿಡಿದಿದ್ದಾರೆ. ಮಾತ್ರವಲ್ಲ, ಅವರೇ ದಾಳಿಂಬೆ ಬೆಳೆಯಲು ಪ್ರೋತ್ಸಾಹ ನೀಡಿದ್ದಾರೆ. 22 ತಿಂಗಳ ಬೆಳೆ ಕೈಗೆ ಬರುವವರೆಗೂ ಜೊತೆಗಿದ್ದು, ಸಲಹೆ- ಸಹಕಾರ ನೀಡಿದ್ದಾರೆ.

ಬೆಳೆಯೋದು ಹೇಗೆ?
ರಮೇಶ ನಾಯ್ಡು 1600ಕ್ಕೂ ಅಧಿಕ ದಾಳಿಂಬೆ ಗಿಡ ಬೆಳೆಸಿದ್ದಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಗಿಡದಿಂದ ಗಿಡಕ್ಕೆ 8 ಅಡಿ ಅಂತರ ಕಾಯ್ದುಕೊಂಡಿದ್ದಾರೆ. ಸಾಲಿನಿಂದ ಸಾಲಿಗೆ 10 ಅಡಿ ಅಂತರದಲ್ಲಿ ಸಸಿ ನಾಟಿ ಮಾಡಿದ್ದಾರು. ಗಿಡ ನೆಟ್ಟ ದಿನದಿಂದ ಫಸಲು ಕೈಗೆ ಬರಲು 22 ತಿಂಗಳು ಬೇಕು. ನಂತರ 2 ವರ್ಷಕ್ಕೆ 3 ಬಾರಿ ಬೆಳೆ ತೆಗೆಯಬಹುದು. 1 ಬಾರಿ ನೆಟ್ಟ ದಾಳಿಂಬೆ ಗಿಡ ಕನಿಷ್ಠ 15 ವರ್ಷ ಬಾಳಿಕೆ ಬರುತ್ತದೆ.

ನೆರವಿಗೆ ಬಂದ ವಿಜ್ಞಾನಿ

ಲಾಭದ ಕನಸಿನೊಂದಿಗೆ ದಾಳಿಂಬೆ ಗಿಡಗಳನ್ನು ನೆಟ್ಟು ಆಗಿತ್ತು. ಆದರೆ ಮುಂದಿನ ಹಾದಿ ಗೊತ್ತಿರಲಿಲ್ಲ. ಇಂಥ ಸಂದರ್ಭದಲ್ಲೇ ನೆರವಿಗೆ ಬಂದವರು ಡಾ.ನಾರಾಯಣಸ್ವಾಮಿ. ದಾಳಿಂಬೆ ಬೆಳೆಗೆ ಯಾವ ಸಂದರ್ಭದಲ್ಲಿ ಔಷಧ, ಗೊಬ್ಬರ ಹಾಕಬೇಕು? ರೋಗ ಬಂದಾಗ ಹತೋಟಿಗೆ ತೆಗೆದುಕೊಳ್ಳಬೇಕಾದ ಕ್ರಮಗಳೇನು? ಇತ್ಯಾದಿಗಳ ಬಗ್ಗೆ ಕಾಲಕಾಲಕ್ಕೆ ಸಲಹೆ ನೀಡಿ ಉತ್ತಮ ಬೆಳೆ ಬರಲು ಸಹಕಾರ ನೀಡಿದರು. ಇದರಿಂದ ಒಂದು ದಾಳಿಂಬೆ ಹಣ್ಣು 300 ಗ್ರಾಂನಿಂದ 550 ಗ್ರಾಂ ತೂಕವಿದೆ.  ಮಾಹಿತಿಗಾಗಿ ರಮೇಶ ನಾಯ್ಡು(ಮೊ. 9449696873), ಖಾಸಗಿ ಕಂಪನಿಯ ವಿಜ್ಞಾನಿ ಡಾ. ನಾರಾಯಣಸ್ವಾಮಿ(ಮೊ. 9945547625) ಅವರನ್ನು ಸಂಪರ್ಕಿಸಬಹುದು.

ಹಲವು ಗ್ರಾಮಗಳಲ್ಲಿ...
ಕೊಳ್ಳೇಗಾಲ ತಾಲೂಕಿನ ಗುಂಡಾಲ್, ಕೌದಳ್ಳಿ, ಅಜ್ಜಿಪುರ, ಹನೂರು, ರಾಯರದೊಡ್ಡಿ, ಉದ್ದನೂರು, ಮಹಾಲಿಂಗನಕಟ್ಟೆ, ಹೊಸೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ನೂರಾರು ಎಕರೆ ಜಮೀನಿನಲ್ಲಿ ಹಲವು ರೈತರು ದಾಳಿಂಬೆ ಬೆಳೆ ಬೆಳೆದಿದ್ದಾರೆ. ಈಗಾಗಲೇ ರೈತ ಎಸ್. ರಮೇಶ್ ಎಂಬವರು ತಮ್ಮ ಜಮೀನಿನ ದಾಳಿಂಬೆ ಮಾರಾಟ ಮಾಡಿದ್ದಾರೆ. ಅದಕ್ಕೆ ಹೂಡಿದ ಬಂಡವಾಳ 4 ಲಕ್ಷ. ಕನಿಷ್ಠ 6 ಲಕ್ಷ ಲಾಭ ಬಂದಿದೆ ಅಂದರೆ ಅಚ್ಚರಿಯಾಗದೆ ಇರದು.

ನಾನು ಕಷ್ಟದಲ್ಲಿದ್ದಾಗ ಕರ್ನಾಟಕ ಅಗ್ರೋ ಕೆಮಿಕಲ್ ಮಲ್ಟಿಫ್ಲೆಕ್ಸ್ ಕಂಪನಿಯ ವಿಜ್ಞಾನಿ ಡಾ. ನಾರಾಯಣಸ್ವಾಮಿ ಅವರು ಮಾರ್ಗದರ್ಶನ ನೀಡಿದರು. ಇದರಿಂದ ಬಂಗಾರದಂಥ ದಾಳಿಂಬೆ ಬೆಳೆ ಬಂದಿದೆ.
- ರಮೇಶ ನಾಯ್ಡು, ರೈತ

- ಎನ್. ನಾಗೇಂದ್ರಸ್ವಾಮಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.