ಸಾವೆಸಿರಿ

ಇಲ್ಲಿನ ಸಾವೆಗೆ ಸಾವಿಲ್ಲ!
ಹೌದು, ಒಂದು ಕಾಲದಲ್ಲಿ ಸಿರಿಧಾನ್ಯಗಳಿಗೆ ಅದರದ್ದೇ ಆದ ಮಹತ್ವವಿತ್ತು. ಇಂದು ಬದಲಾದ ಕೃಷಿ, ರಾಸಾಯನಿಕಯುಕ್ತ ವಾಣಿಜ್ಯ ಬೆಳೆಗಳಿಂದ ಸಿರಿಧಾನ್ಯಗಳಿಗೆ ಮಹತ್ವ ಕಡಿಮೆಯಾಗುತ್ತಿದೆ. ಆದರೆ, ಇದಕ್ಕೆ ತದ್ವಿರುದ್ಧವೆನ್ನುವಂತೆ ಬೈಲಹೊಂಗಲ ತಾಲೂಕಿನ ಮರಡಿನಾಗಲಾಪೂರ ಗ್ರಾಮದಲ್ಲಿ ಬೆಳೆದ ಸಾವೆಗೆ ಬಲು ಬೇಡಿಕೆ.
ಯಾಕೆ ಅಂತೀರಾ? ಇಲ್ಲಿ ಬೆಳೆದ ಸಾವೆಯನ್ನು ಮಧುಮೇಹಿ, ಕಣ್ಣು ಊರಿ, ಮಲಬದ್ಧತೆ ಇರುವವರು ವೈದ್ಯರ ಸಲಹೆಯಂತೆ ದೂರದೂರಿನ ನೌಕರರು ಹುಡುಕಿಕೊಂಡು ಬಂದು ಕೊಂಡೊಯ್ಯುತ್ತಾರೆ. ಇನ್ನು ಬಾಣಂತಿಯರಿಗೆ ಸಾವೆ ಉತ್ತಮ ಆಹಾರ. ಹಾಗಾಗಿ ಇದಕ್ಕೆ ಬೇಡಿಕೆ ಹೆಚ್ಚಿದೆ ಅಂತಾರೆ ಗ್ರಾಮದ ಸಾವೆ ಕೃಷಿಕ ದೊಡ್ಡಪ್ಪ ನಿಂಗಪ್ಪ ಊಗರಕೋಡ.
ಅಲ್ಪ ಮಳೆ ಸಾಕಾಗುತ್ತೆ...
3 ತಿಂಗಳ ಬೆಳೆಯಾದ ಸಾವೆಯನ್ನು ಸಾಮಾನ್ಯವಾಗಿ ಜೂನ್‌ನಲ್ಲಿ ಬಿತ್ತನೆ ಮಾಡುತ್ತಾರೆ. ಸಾವೆಗೆ ಸಾಮಾನ್ಯವಾಗಿ ಸರಿಯಾದ ಸಮಯದಲ್ಲಿ ಬೆಳೆದರೆ ಯಾವುದೇ ರೋಗ ಬಾರದು. ಅಲ್ಪ ಮಳೆಯಾದರೂ ಸಾಕು, ಹುಲುಸಾಗಿ ಬರುತ್ತದೆ. ಸಸಿಗಳು ಕುಬ್ಜವಾಗಿರುತ್ತವೆ. ಸಣ್ಣ ತೆನೆ ಹೊಂದಿರುತ್ತವೆ. ಮೂರು ತಿಂಗಳ ನಂತರ ಕಟಾವು ಮಾಡಿ ಬಣವೆ ಮಾಡಿ ಸೂಕ್ತ ಸಮಯ ನೋಡಿ ಕಣ ಮಾಡಿ, ಗಾಳಿ ಬೀಸುವ ಸ್ಥಳದಲ್ಲಿ ಕಾಳುಗಳನ್ನು ಬೇರ್ಪಡಿಸುತ್ತಾರೆ. ಒಕ್ಕಲು ಮಾಡುವುದು ತುಸು ಕಠಿಣ. ಏಕೆಂದರೆ, ಸಣ್ಣ ಕಾಳು ಇರುವುದರಿಂದ ಉಸುಕು, ಮಣ್ಣು ಸೇರದಂತೆ ಎಚ್ಚರ ವಹಿಸಬೇಕು. ಎಕರೆಗೆ 6ರಿಂದ 7 ಕ್ವಿಂಟಲ್ ಇಳುವರಿ ಬರುತ್ತದೆ. ಕ್ವಿಂಟಲ್‌ಗೆ ಮಾರುಕಟ್ಟೆಯಲ್ಲಿ ರು. 3 ಸಾವಿರ ಧಾರಣೆಯಿದೆ.
ಸಾವೆ ಮೇವಿನ ಮಹತ್ವ
ಇಲ್ಲಿಯ ರೈತರಿಗೆ ಸಾವೆಯಿಂದ ಎರಡೆರಡು ರೀತಿಯ ಲಾಭ ಉಂಟು. ಬಾಳೇಶ ಹೇಳುವಂತೆ, 'ಸಾವೆ ಹುಲ್ಲು ತಿಂದ ದನಗಳು ಸಂಜಿ ಹೊತ್ತಿನ್ಯಾಗ ಡರಕಿ ಹೊಡೆಯು ಶಬ್ದಕ್ಕ ನಮ್ಮ ಮನಿ ಹೆಣ್ಮಕ್ಕಳು ಗುರುತಾ ಹಿಡಿದು ದೀಪ ಹಚ್ಚತ್ತಾರ ರೀ, ಇನ್ನ ಮೇವಿನ್ಯಾಗಿರುವ ತಾಕತ್ತು ಇದೆ ಮತ್ತು ದನಕರಕ್ಕ ಹೊಟ್ಟಿ ಉಬ್ಬಿದರ ಈ ಮೇವ ಹಾಕಿದರ ಕಡಿಮೆಯಾಗುತ್ತೆ'.
ವೈವಿಧ್ಯಮಯ ಸಾವೆ ಪಾಕ
ಸಾವೆಯಿಂದ ವಿಶೇಷ ಖಾದ್ಯಗಳಾದ ಸಾವೆ ಪಾಯಸ, ಸಾವೆ ಹಪ್ಪಳ, ಹುಳಿಬುತ್ತಿ, ಚಕ್ಕುಲಿ, ಉಪ್ಪಿಟ್ಟು, ಹುಗ್ಗಿ ಹೀಗೆ ಹಲವು ಅಡುಗೆ ತಯಾರಿಸುತ್ತಾರೆ. ಮಧುಮೇಹಿ ಪೀಡಿತರಿಗೆ ಸಾವೆ ಉತ್ತಮ ಆಹಾರ. ಸಿರಿಧಾನ್ಯಗಳ ಉಳಿವಿಗಾಗಿ ಆಂದೋಲನಗಳೇ ನಡೆಯುತ್ತಿರುವ ಈ ಹೊತ್ತಿನಲ್ಲಿ ಸ್ವ ಪ್ರೇರಣೆಯಿಂದ ಸಾವೆ ಉಳಿಸುತ್ತಿರುವ ರೈತರಿಗೆ ಪ್ರೋತ್ಸಾಹ ಸಿಗಬೇಕಿದೆ.
- ವಿನೋದ. ರಾ. ಪಾಟೀಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


