ಕೃಷಿ-ಪರಿಸರ

ವಿನಯವಂತ

ವಿನಯವಂತ
Published On :

ಚಿಕ್ಕಮಗಳೂರಿನ ಜಕ್ಕನಹಳ್ಳಿಯ ವಿನಯಕುಮಾರರಿಗೆ 32. ಕೃಷಿಯಲ್ಲಿ ಆಸಕ್ತಿ. ಕಾಫಿ ಕೃಷಿಯ ಜತೆಗೆ ಹೊಸದನ್ನು ಸಾಧಿಸಬೇಕೆನ್ನುವ ತುಡಿತ. ಪದವಿ ಓದುತ್ತಿರುವಾಗಲೇ ಅಪ್ಪ ಜೆ.ಬಿ. ಶಿವಪ್ಪ ಅವರೊಂದಿಗಿದ್ದ ಅನುಭವ.
ಜವ್ವನವಿರುವಾಗಲೇ ಜವಾಬ್ದಾರಿ ಕೊಟ್ರೆ ಕೆಲಸ ಮಾಡ್ತಾ ಮಾಡ್ತಾ ಅನುಭವ ಬಂದು ಬಿಡುತ್ತೆ ಎನ್ನುವುದು ವಿನಯ್ ನಿಲುವು. ಕೃಷಿ ಹೆಗಲಿಗೇರಿಸಿಕೊಂಡ ವಿನಯ್ ಮುಂದೆ ಹಲವು ಕನಸುಗಳು. ಸಾವಯವ ಕೃಷಿಯತ್ತ ಒಲವು. ಸಾವಯವ ಕೃಷಿಕರ ತೋಟ ಭೇಟಿ. ಕೃಷಿಕರೊಂದಿಗೆ ಮಾತುಕತೆ. ತೋಟಗಳಿಗೆ ಪ್ರವಾಸ. ಪತ್ರಕರ್ತರಾಗಿದ್ದುಕೊಂಡು ಈಗ ಕೃಷಿ ಮತ್ತು ಕೃಷಿ ವಿಚಾರ ಹಂಚುತ್ತಿರುವ ಚಂದ್ರಶೇಖರ್ ನಾರಾಣಾಪುರ ವಿನಯರಿಗೆ ಬೆಂಬಲ. ಚಂದ್ರಶೇಖರ್ ಅವರ ಹೈನುಗಾರಿಕೆ ನೋಡಿದ ವಿನಯ್‌ಗೆ, ತನ್ನಲ್ಲೂ ವಿವಿಧ ತಳಿಗಳ ಪಶು ಸಂಸಾರ ಅಭಿವೃದ್ಧಿ ಮಾಡಬೇಕೆನ್ನುವ ನಿರ್ಧಾರ. ಇವರ ಭೂಮಿ ಎತ್ತರ ತಗ್ಗಿನ ಜಾಗ. ಎಚ್.ಎಫ್. ದನಗಳನ್ನು ಹಟ್ಟಿಯಲ್ಲಿ ಕಟ್ಟಿ ಸಾಕಬೇಕು. ದೇಸಿ ದನಗಳಾದರೆ ಮೇಯಲು ಬಿಡಬಹುದಲ್ಲಾ ಎಂದು ದೇಸಿ ತಳಿಯ ದನಗಳ ಆಯ್ಕೆ.
ಚಿಕ್ಕಮಗಳೂರಿನಿಂದ ಜಕ್ಕನಹಳ್ಳಿಗೆ 15 ಕಿ.ಮೀ. ದೂರ. ಏಳು ಕಿಮೀ ದೂರದ ಮಲ್ಲಂದೂರಿನಲ್ಲಿ ಕಾಳುಮೆಣಸು ಯಥೇಚ್ಛ. ಜಕ್ಕನಹಳ್ಳಿಯಲ್ಲಿ ಇಳುವರಿ ಕಡಿಮೆ. ಯಾಕೆ ಹೀಗೆ ಎನ್ನುವುದು ವಿನಯರಿಗೆ ಚಿಂತೆ. ಸಮುದ್ರ ಮಟ್ಟಕಿಂತ ಸ್ವಲ್ಪ ಕಡಿಮೆ ಎತ್ತರದಲ್ಲಿರುವುದು ಕಾರಣವಿರಬಹುದೇನೋ, ವಿನಯ್ ಸಂಶಯ.
ಮನೆಯ ಸನಿಹ 2000 ಕಾಳುಮೆಣಸು ಬಳ್ಳಿಗಳ ನಾಟಿ. ಅವಕ್ಕೀಗ ಆರು ವರುಷ. ಅಡಕೆ ಮರಗಳಿಗೆ ಬಳ್ಳಿ ಹಬ್ಬಲು ಬಿಡುವುದು ವಾಡಿಕೆ. ಇಲ್ಲಿ ಅಡಕೆ ಗಿಡಗಳಿಲ್ಲ. ಹಾಗಾಗಿ ಕಾಡು ಮರಗಳ ಗಿಡಗಳಿಗೆ ಬಳ್ಳಿ ಹಬ್ಬಿಸಿದ್ದಾರೆ. ಮೂರು ವರ್ಷದಲ್ಲಿ ಕೇವಲ ಎರಡು ಕಿಲೋ ಮೆಣ್ಸು ಸಿಕ್ಕಾಗ, 'ಇಲ್ಲಿ ಇಳುವರಿ ಬರೋಲ್ಲ. ಸುಮ್ನೆ ವೇಸ್ಟ್ ಮಾಡ್ತಿದ್ದಾನೆ' ಅಂತ ಅಪ್ಪ ಗೊಣಗಾಡಿಕೊಂಡ್ರು. ಈಗ ಉತ್ತಮ ಇಳುವರಿ ಬಂದಾಗ ಅಪ್ಪ ಬೆನ್ನು ತಟ್ಟಿದ್ರು- ಖುಷಿ ಹಂಚಿಕೊಳ್ಳುತ್ತಾರೆ ವಿನಯ್. ಚಂದ್ರಶೇಖರ್ ತೋಟದಲ್ಲಿ ಮಣ್ಣಿಗೆ ಜೀವಾಮೃತ ಉಣಿಸುವುದನ್ನು ವಿನಯ ನೋಡಿದ್ದರು. ಜೀವಾಮೃತ ಪಾಕವನ್ನು ಅವರಿಂದ ದಾಖಲಿಸಿಕೊಂಡು, ತಾನೂ ತಯಾರಿಸಿ ಗಿಡಗಳಿಗೆ ಉಣಿಸಿದರು.
ಈ ಭಾಗದಲ್ಲಿ ಮಡಕೆಯಲ್ಲಿ ಜೇನು ಸಾಕಣೆ ಪಾರಂಪರಿಕ ಪದ್ಧತಿ. ಓದಿದ, ನೋಡಿದ ಅನುಭವ ಮಾತ್ರ. ಹೆಚ್ಚಿನ ತರಬೇತಿ ಪಡೆದಿರಲಿಲ್ಲ. ಮಡಕೆ (ಕೊಡಪಾನ) ಗಾತ್ರದ ದೊಡ್ಡ ಮಣ್ಣಿನ ಪಾತ್ರೆ. ಅದರ ಬಾಯಿಯ ಹತ್ತಿರ ನಾಣ್ಯದಷ್ಟು ದೊಡ್ಡ ನಾಲ್ಕು ತೂತುಗಳು. ಹಳೆ ಕೊಡಪಾನವಾದರೆ ಒಳ್ಳೆಯದು. ಹೊಸತಾದರೆ ಮಣ್ಣಿನ ಪರಿಮಳಕ್ಕೆ ಹುಳುಗಳು ಒಳಬರುವುದಿಲ್ಲ. ಮಡಕೆಯ ಒಳಮೈಗೆ ಜೇನು ಮೇಣ ಸವರುತ್ತಾರೆ. ಹುಳಗಳನ್ನಾಕರ್ಷಿಸಲು ಮೇಣದ ಮೇಲೆ ಜೇನು ತುಪ್ಪದ ಲೇಪನ. ತೋಟದ ಮಧ್ಯೆ ಅಲ್ಲಲ್ಲಿ ನೆಲ ಶುಚಿಗೊಳಿಸಿ, ಮರದ ನೆರಳು ಸಿಗುವಂತೆ, ಮಡಕೆ ಕವುಚಿಟ್ಟು ಬಿಡುತ್ತಾರೆ. ಮೂವತ್ತು ಮಡಕೆ ಇಟ್ಟರೆ 20ರಲ್ಲಿ ಸಂಸಾರ ಮಾಡ್ತವೆ. ಸಂಸಾರ ಆರಂಭಿಸಿದ ತಿಂಗಳಲ್ಲಿ ಮಡಕೆಯನ್ನು ಮನೆ ಹತ್ರ ತಂದಿಡುತ್ತಾರೆ, ಕೆಲವೊಂದು ಸಲ ಪೆಟ್ಟಿಗೆಗೆ ತುಂಬುತ್ತಾರೆ.
ಜೇನು ಸಂಸಾರ ಅಪೇಕ್ಷಿಸಿ ಬಂದವರಿಗೆ ಮಡಕೆಯಿಂದ ಪೆಟ್ಟಿಗೆಗೆ ಶಿಫ್ಟ್ ಮಾಡಿ ತಕ್ಷಣ ಕೊಡ್ತಾರೆ. ಆದರೆ, ಬೇಕಾದಾಗಲೆಲ್ಲಾ ಕೊಡುವಷ್ಟು ಜೇನು ಸಂಸಾರವಿಲ್ಲ. ಇದೊಂದು ಆಸಕ್ತಿಯಷ್ಟೇ. ಮಡಕೆಯಿಂದ ಹುಳಗಳನ್ನು ಪೆಟ್ಟಿಗೆಗೆ ಶಿಫ್ಟ್ ಮಾಡುವಾಗ ಹುಳುಗಳಿಂದ ರಕ್ಷಣೆಗೆಂದು ಕೆಲವರು ಕೈಗೆ ಗ್ಲೌಸ್ ಹಾಕುವುದುಂಟು. ಇನ್ನೂ ಕೆಲವರು ಬರಿಗೈಯಲ್ಲಿ ಹುಳಗಳನ್ನು ಬಾಚುತ್ತಾರೆ. ನನ್ಗೆ ಸ್ಟೀಲಿನ ಸೌಟಿನಲ್ಲಿ ಹುಳುಗಳನ್ನು ಬಾಚುವುದು ರೂಢಿಯಾಗ್ಬಿಟ್ಟಿದೆ. ಇದು ಇಷ್ಟ ಮತ್ತು ಸುಲಭ. ಮಡಕೆ ಜೇನು ಕೃಷಿ ಹವ್ಯಾಸಕ್ಕೆ ಓಕೆ. ಮಾರುಕಟ್ಟೆ ದೃಷ್ಟಿಯಿಂದ ಪೆಟ್ಟಿಗೆಯಲ್ಲೇ ಸೀರಿಯಸ್ ಆಗಿ ಮಾಡ್ಬೇಕೆಂದಿದೆ, ಎನ್ನುತ್ತಾರೆ.
ನಾಲ್ಕು ವರ್ಷ ಹಿಂದೆ 'ಏಲಕ್ಕಿ ನೀನೆ ಬೆಳಿ. ರೊಕ್ಕ ಇಸ್ಕೋ' ಅಪ್ಪನಿಂದ ಹಸಿರು ನಿಶಾನೆ. ಕೈಗೆ ದುಡ್ಡು ಬಂದ್ರೆ, ಮನೆಯಲ್ಲಿ ಕೇಳೋದು ತಪ್ಪುತ್ತೆ ಎಂದು ವಿನಯ್ 300 ಏಲಕ್ಕಿ ಗಿಡ ಹಾಕಿದ್ರು. ಇದರಿಂದ 50 ಕಿಲೋ ಒಣ ಏಲಕ್ಕಿ ಸಿಕ್ಕಿತಂತೆ.
ಕೃಷಿ ತೋಟಗಳ ವೀಕ್ಷಣೆ, ಕೃಷಿ ಪತ್ರಿಕೆಗಳ ಓದು, ವಾಹಿನಿಗಳಲ್ಲಿ ಬರುವ ಕೃಷಿ ಮಾಹಿತಿ ನೋಡುವುದು, ದಾಖಲಿಸುವ ಆಸಕ್ತಿ ನಿರಂತರ. ಹೀಗೆ ಸಿಕ್ಕ ಮಾಹಿತಿಗಳಲ್ಲಿ ಕೆಲವನ್ನಾದರೂ ಪ್ರಯೋಗ ಮಾಡುವ ಕುತೂಹಲಿ. ಕಾಫಿಗೆ ಸಕತ್ ರೇಟ್ ಬಂತಲ್ವಾ. ಹಾಂಗಾಗಿ ಇತರ ಕೃಷಿಯತ್ತ ರೈತರು ಗಮನ ಕೊಡ್ತಾ ಇಲ್ಲ ಎಂಬ ವಾಸ್ತವ ಹೇಳುತ್ತಾರೆ.

- ನಾ. ಕಾರಂತ ಪೆರಾಜೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.