ಹಬ್ಬುತ್ತಿದೆ ಹಾರಕವೆಂಬ ಸಿರಿಧಾನ್ಯ

ಕೆಲವು ದಿನಗಳ ಹಿಂದೆ ತುಮಕೂರಿನಲ್ಲಿ ಕೃಷಿ ಚಿಂತನೆಯ ಒಂದು ಸಭೆ. ಹೊಸದಾಗಿ ಆಯ್ಕೆಯಾದ ಶಾಸಕರು, ಅಧಿಕಾರಿಗಳು, ವಿಚಾರವಾದಿಗಳು, ನಾಗರಿಕರು ಭಾಗವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಕಿರುಧಾನ್ಯಗಳನ್ನು ಹೆಚ್ಚೆಚ್ಚು ಬೆಳೆಸುವ ಬಗ್ಗೆ ಹಾಗೂ ಯುವಕರನ್ನು ಹಳ್ಳಿಗಳಲ್ಲಿ ಉಳಿಸುವ ಬಗ್ಗೆ ಮಾತನಾಡುತ್ತಾ ಒಂದು ಹಳ್ಳಿಯನ್ನು ಪ್ರಸ್ತಾಪಿಸಿ, 'ನನಗೆ ತುಂಬಾ ಜನ ಆ ಹಳ್ಳಿ ಬಗ್ಗೆ ಹೇಳಿದ್ದಾರೆ, ಮಾಧ್ಯಮಗಳಲ್ಲೂ ನೋಡಿದ್ದೇನೆ, ನಶಿಸಿ ಹೋಗ್ತಾ ಇರೋ ಹಾರಕವನ್ನ ಯುವಕರು ಸೇರಿ ಉಳಿಸ್ತಾ ಇದಾರೆ' ಎಂದರು. ಆ ಊರಿನ ಹೆಸರು ಗೋಪಾಲನಹಳ್ಳಿ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಪುಟ್ಟ ಗ್ರಾಮ.
1980ರ ದಶಕದಲ್ಲಿ ಈ ಹಳ್ಳಿ ಹಾರಕಕ್ಕೆ ಹೆಸರುವಾಸಿ. ಆದರೆ ಆಧುನಿಕ ಕೃಷಿಯ ಭರಾಟೆಯಲ್ಲಿ ಎಲ್ಲ ಸಾಂಪ್ರದಾಯಿಕ ಬೆಳೆಗಳೆಂತೆಯೇ ಹಾರಕವೂ ನಶಿಸಿತು. 2009ರಲ್ಲಿ ಕೆಲ ಯುವಕರು ಮತ್ತೆ ಹಾರಕ ಬೆಳೆಯುವ ಉಮೇದು ತೋರಿದರು. ಅಂದು ಮೂವರು ರೈತರ ಹೊಲಗಳಲ್ಲಿ ಮರುಹುಟ್ಟು ಪಡೆದ ಹಾರಕ ಇಂದು ರಾಜ್ಯದ ಗಮನ ಸೆಳೆಯುತ್ತದೆಂಬ ಕಲ್ಪನೆ ಯಾರಿಗೂ ಇರಲಿಲ್ಲ. ಒಂದೆರಡು ವರ್ಷ ಬೆಳೆದು ನಂತರ ಕೈಬಿಡುತ್ತಾರೆಂದೇ ಎಲ್ಲರೂ ಭಾವಿಸಿದ್ದರು. ಆದರೆ ಹಾಗಾಗಿಲ್ಲ. ಮೊದಲು ಮೂವರಿಂದ ಶುರುವಾದ ಕೆಲಸ ನಂತರದ ವರ್ಷ ಐದಕ್ಕೇರಿತು, ಮರು ವರ್ಷ 20 ರೈತರು ಕೈಜೋಡಿಸಿದರು, 2013ರಲ್ಲಿ ಗೋಪಾಲನಹಳ್ಳ್ಳಿ ಮತ್ತು ಸುತ್ತ-ಮುತ್ತಲ ಹಳ್ಳಿಗಳೂ ಸೇರಿ ಐವತ್ತಕ್ಕೂ ಹೆಚ್ಚು ರೈತರು ಹಾರಕ ಬೆಳೆಯುತ್ತಿದ್ದಾರೆ. ಒಂದು ಹಳ್ಳಿಯಲ್ಲಿ ಪ್ರಾರಂಭವಾದ ಪ್ರಯತ್ನ ಹತ್ತಾರು ಹಳ್ಳಿಗಳಿಗೆ ಹಬ್ಬಿದೆ. ಇಂದು ಯಾವುದೇ ಕೃಷಿ ಮೇಳ, ಸಿರಿಧಾನ್ಯ ಮೇಳ ನಡೆದರೂ ಅಲ್ಲಿ ಗೋಪಾಲನಹಳ್ಳಿಯ ಹಾರಕ ಬೆಳೆಗಾರರ ಸಂಘದ ಬ್ಯಾನರ್ ಕಾಯಂ.
2013ರಲ್ಲಿಯೇ ಸುಮಾರು 12 ಕ್ವಿಂಟಾಲ್ ಹಾರಕ ಬಿತ್ತನೆ ಬೀಜವನ್ನು ರಾಜ್ಯದ ವಿವಿಧ ಜಿಲ್ಲೆಗಳ ರೈತರು ಪಡೆದಿದ್ದಾರೆ. ಆಂಧ್ರದ ಅನಂತಪುರ ಜಿಲ್ಲೆಯ ರೈತರೇ ಐದು ಕ್ವಿಂಟಾಲ್ ತೆಗೆದುಕೊಂಡು ಹೋಗಿದ್ದಾರೆ. ಉಡುಪಿ, ಕುಂದಾಪುರ, ಹಾಸನ, ಅರಸೀಕೆರೆ, ಕುಣಿಗಲ್, ಗುಬ್ಬಿ, ಮೈಸೂರು, ತುಮಕೂರು, ಮಂಡ್ಯ ಮುಂತಾದ ಕಡೆ ಗೋಪಾಲನಹಳ್ಳಿ ಹಾರಕ ಹಬ್ಬಿದೆ. ಕುಣಿಗಲ್ ಮತ್ತು ಗುಬ್ಬಿ ತಾಲ್ಲೂಕುಗಳಲ್ಲಿ ಇವರಿಂದ ಬೀಜ ಪಡೆದ ರೈತರು 55 ಎಕರೆಯಲ್ಲಿ ಬಿತ್ತಿದ್ದಾರೆ. ಒಟ್ಟಾರೆ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಆಂಧ್ರದ ಕನಿಷ್ಠ ನೂರೈವತ್ತು ಎಕರೆಯಲ್ಲಾದರೂ ಗೋಪಾಲನಹಳ್ಳಿಯ ಹಾರಕ ಬೆಳೆಯುತ್ತಿದೆ.
ಮೊದಲ ಮೂರು ವರ್ಷ ಇವರ ಪ್ರಯತ್ನವನ್ನು ಉದಾಸೀನದಿಂದಲೇ ಗಮನಿಸುತ್ತಿದ್ದ ಅಕ್ಕ-ಪಕ್ಕದ ಹಳ್ಳಿಯವರಿಗೆ ನಾಲ್ಕನೇ ವರ್ಷ ಸುಮ್ಮನಿರಲಾಗಿಲ್ಲ. ಈ ವರ್ಷ ಆಸು-ಪಾಸಿನ ಕೆಂಕೆರೆ, ಮಲ್ಲಿಗೆರೆ, ನವಿಲೆ, ಚಿಕ್ಕಮರಸನಹಳ್ಳಿ, ವಡೇರಹಳ್ಳಿ, ಶೆಟ್ಟಿಕೆರೆ, ಸಾಸಲು, ವಾಸುದೇವರಹಳ್ಳಿಯ 25 ರೈತರು ಸುಮಾರು 15 ಎಕರೆಯಲ್ಲಿ ಹಾರಕ ಬಿತ್ತಿದ್ದಾರೆ. ರಾಜ್ಯದ ಬೇರೆ-ಬೇರೆ ಜಿಲ್ಲೆಯವರು ಬೀಜ ಪಡೆದಿದ್ದಕ್ಕಿಂತಲೂ ನಮ್ಮ ಸುತ್ತಮುತ್ತಿನ ರೈತರು ಬೀಜ ಪಡೆದು ಬೆಳೀತಾ ಇರೋದು ಹೆಚ್ಚು ಸಂತೋಷ ತಂದಿದೆ ಎಂಬುದು ಗೋಪಾಲನಹಳ್ಳಿಯಲ್ಲಿ ಹಾರಕ ಬೆಳೆಯುತ್ತಿರುವ ಯುವಕರ ಅನಿಸಿಕೆ.
ಹಾರಕ ಬೆಳೆಗಾರರ ಸಂಘ ರಚಿಸಿಕೊಂಡು ಅದರ ಮೂಲಕ ಹಾರಕದ ಬೀಜ, ಅಕ್ಕಿ ಹಾಗೂ ಚಕ್ಕುಲಿ, ಕೋಡುಬಳೆ, ರವೆ ಮುಂತಾದ ಮೌಲ್ಯವರ್ಧನೆಗೂ ಸಣ್ಣಪ್ರಮಾಣದಲ್ಲಿ ಕೈಹಾಕಿದ್ದಾರೆ. ಕಳೆದ ವರ್ಷ ಸುಮಾರು ಒಂದು ಕ್ವಿಂಟಾಲ್ ಅಕ್ಕಿ ಮಾರಾಟವಾಗಿದೆ. ಅಕ್ಕಿಗೆ ಹೆಚ್ಚು ಬೇಡಿಕೆ ಇದ್ದರೂ ಸಹ ಬೀಜದ ಸರಬರಾಜಿಗೆ ಹೆಚ್ಚು ಒತ್ತು ನೀಡಿದ್ದಾರೆ. ಸಾಕಷ್ಟು ರೈತರು ಬೆಳೆಯುವಂತಾದರೆ ನಂತರ ಅಕ್ಕಿ ಹಾಗೂ ಇನ್ನಿತರೆ ಮೌಲ್ಯವರ್ಧಿತ ಪದಾರ್ಥಗಳನ್ನು ದೊಡ್ಡಮಟ್ಟದಲ್ಲಿ ಮಾಡುವುದು ಇವರ ಆಲೋಚನೆ.
ಈ ನಾಲ್ಕು ವರ್ಷಗಳಲ್ಲಿ ಮಳೆಯ ಏರು-ಪೇರಿನ ನಡುವೆಯೂ ಹಾರಕ ಚೆನ್ನಾಗಿ ಬೆಳೆದಿದೆ. 2012ರಲ್ಲಿ ಸಕಾಲದಲ್ಲಿ ಮಳೆ ಆಗಲಿಲ್ಲ. ಆ ವರ್ಷ ಭತ್ತ, ಹೂವು, ಧನಿಯ ಮುಂತಾದ ವಾಣಿಜ್ಯ ಬೆಳೆಗಳು ಸಂಪೂರ್ಣ ನಶಿಸಿದರೂ ಹಾರಕ ಶೇ 40 ರಷ್ಟು ಇಳುವರಿ ನೀಡಿತ್ತು. ಈ ನಾಲ್ಕು ವರ್ಷಗಳಲ್ಲಿ ಹಾರಕಕ್ಕೆ ಕೀಟ-ರೋಗದ ಬಾಧೆಯೇ ಬಂದಿಲ್ಲ. ಅಲ್ಪ ಮಳೆಯಾದರೂ ಕಿರುಧಾನ್ಯಗಳು ಬೆಳೆಯಬಲ್ಲವು ಎಂಬುದನ್ನು ಅರಿತ ಯುವಕರು 2013ರಲ್ಲಿ ಸಾವೆ, ನವಣೆ, ಕೊರಲೆ ಮುಂತಾದ ಇತರ ಕಿರುಧಾನ್ಯಗಳನ್ನೂ ಬೆಳೆದಿದ್ದಾರೆ.
ವಿವಿಧ ಮಾಧ್ಯಮಗಳಿಂದ ಹಾಗೂ ಜನರಿಂದ ಜನರಿಗೆ ಇವರ ಕೆಲಸ ಹಬ್ಬಿ ಕೃಷಿ ವಿಶ್ವ ವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ನಬಾರ್ಡ್ ಮುಂತಾದವುಗಳಲ್ಲದೆ, ಐ.ಡಿ.ಎಫ್., ಬೈಫ್, ತುಮಕೂರು ವಿಜ್ಞಾನ ಕೇಂದ್ರ ಇತ್ಯಾದಿ ಸಂಸ್ಥೆಗಳೂ ಈ ಹಳ್ಳಿಗೆ ಭೇಟಿ ನೀಡಿ ಪ್ರೇರಣೆ ಪಡೆದಿವೆ. ಕೃಷಿ ಮಾಧ್ಯಮ ಕೇಂದ್ರವು ಈ ಊರಿನ ಯಶೋಗಾಥೆಯ ಬಗ್ಗೆ ಪುಸ್ತಕವೊಂದನ್ನು ಪ್ರಕಟಿಸಿದೆ.
ಹಾರಕ ಸಂಸ್ಕರಣೆಗಾಗಿ ಒಂದು ಮಿಲ್ ಹಾಕಿಸಲೇಬೇಕೆಂದು ಈ ಹಳ್ಳಿಯ ಯುವಕರು ಪಣ ತೊಟ್ಟಿದ್ದಾರೆ. ಭೇಟಿ ನೀಡಿದ ಪ್ರತಿಯೊಬ್ಬರ ಬಳಿಯೂ ಈ ಬಗ್ಗೆ ಬೇಡಿಕೆ ಇಟ್ಟಿದ್ದಾರೆ. ಕೃಷಿ ಇಲಾಖೆಗೆ ನಿರಂತರ ಭೇಟಿ ಇತ್ತು ಮನವಿ ಸಲ್ಲಿಸಿದ್ದಾರೆ. ಪರಿಣಾಮವಾಗಿ ಇಲಾಖೆಯು ಸದ್ಯಕ್ಕೆ ರಾಗಿ ಮಿಲ್ ಮಂಜೂರು ಮಾಡಿದೆ. ಆದರೆ ಹಾರಕ ಬೆಳೆಯುವವರ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿರುವುದರಿಂದ ಹಾರಕದ ಅಕ್ಕಿ ಮಾಡುವ ಮಿಲ್ ಅಗತ್ಯವಾಗಿ ಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.
- ಮಲ್ಲಿಕಾರ್ಜುನ ಹೊಸಪಾಳ್ಯ
krushikaimara@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


