ಕೃಷಿ-ಪರಿಸರ

ಮತ್ತಿ ಅವರೆ

ಮತ್ತಿಯ ಮರ ಯಾರಿಗೆ ಗೊತ್ತಿಲ್ಲ. ಗುಟ್ಟಿಮುಟ್ಟಾದ ಬಾಳಿಕೆ ಬರುವ ಕಟ್ಟಿಗೆ, ನಾಲ್ಕು ಮೂಲೆ...

ಮತ್ತಿ ಅವರೆ
Published On :

ಮತ್ತಿಯ (ಟರ್ಮಿನೆಲಿಯ ಟೊಮೆಂಟೋಸಾ) ಮರ ಯಾರಿಗೆ ಗೊತ್ತಿಲ್ಲ. ಗುಟ್ಟಿಮುಟ್ಟಾದ ಬಾಳಿಕೆ ಬರುವ ಕಟ್ಟಿಗೆ, ನಾಲ್ಕು ಮೂಲೆ ಹೊಂದಿರುವ ಅದರ ಕಾಯಿ ಚಿರಪರಿಚಿತ. ಆದರೆ, ಮತ್ತಿಯ ಮರದಲ್ಲಿ ಬಿಡುವ ಕಾಯಿಯಂತೆ ನಾಲ್ಕು ಮೂಲೆಗಳೊಂದಿಗೆ ರೆಕ್ಕೆಯಂತೆ ಕಾಣುವ ಉದ್ದನೆಯ ಅವರೆಕಾಯಿ ತನ್ನ ವಿಶಿಷ್ಟ ಪರಿಮಳ ಮತ್ತು ರುಚಿಯಿಂದ ಬಾಯಲ್ಲಿ ನೀರೂರಿಸುತ್ತದೆ. ಅದೇ ಮತ್ತಿ ಅವರೆ ಅಥವಾ ಕರಗಸದವರೆ.
ಸಸ್ಯಶಾಸ್ತ್ರದಲ್ಲಿ ಇದನ್ನು Psphocarpus tetragonolobus ಎಂದು ಕರೆಯುತ್ತಾರೆ. ಇದು ಫ್ಯಾಬೇಸಿ ಕುಟುಂಬಕ್ಕೆ ಸೇರಿದೆ.
ಉಳಿದ ಅವರೆ ಗಿಡಗಳಂತೆ ಇದೂ ಉದ್ದನೆಯ ಬಳ್ಳಿಯಾಗಿ ಬೆಳೆಯುತ್ತದೆ. ಗಿಡವನ್ನು ಬೀಜ ಅಥವಾ ಗಡ್ಡೆಗಳಿಂದ ಬೆಳೆಯಬಹುದು. ತಂಪು ಹವಾಗುಣದಲ್ಲಿ ಬೆಳೆಯುವ ಈ ತರಕಾರಿ ಗಿಡ ಮಲೆನಾಡಿನ ಭಾಗದಲ್ಲಿ ಚೆನ್ನಾಗಿ ಫಸಲು ನೀಡುತ್ತದೆ.

ಕೃಷಿ ಹೇಗೆ?
ಆಯ್ದ ಬಲಿತ ಮತ್ತಿ ಅವರೆ ಕಾಯಿಯ ಬೀಜವನ್ನು ಸುಮಾರು ಎರಡು ಇಂಚು ಮಣ್ಣಿನಾಳದಲ್ಲಿಟ್ಟು ಸರಿಯಾಗಿ ನೀರು, ಗೊಬ್ಬರ ನೀಡಿದರೆ ಬಳ್ಳಿ ಹುಲುಸಾಗಿ ಬೆಳೆಯುತ್ತದೆ. ಅಥವಾ ಹಿಂದಿನ ವರ್ಷ ನೆಟ್ಟ ಗಿಡದ ಗಡ್ಡೆ ಚಿಗುರಿ ಹೊಸ ಬಳ್ಳಿ ಬೆಳೆಯುತ್ತದೆ. ಬಳ್ಳಿ ಸರಿಯಾಗಿ ಹಬ್ಬಲು ಚಪ್ಪರ ಹಾಕಬೇಕು. ಗಿಡ ನೆಟ್ಟು ಮೂರು ತಿಂಗಳಿನಲ್ಲಿಯೇ ಬಳ್ಳಿಯಲ್ಲಿ ಕಾಯಿ ಕಟ್ಟಿಕೊಳ್ಳುತ್ತದೆ. ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಜನವರಿ ಕೊನೆಯವರೆಗೂ ಕಾಯಿ ಬಿಡುತ್ತಲೇ ಇರುತ್ತದೆ. ಒಂದು ಬಳ್ಳಿಯಿಂದ ಒಂದು ಸೀಸನ್‌ಗೆ 200ರಿಂದ 250 ಕಾಯಿ ದೊರೆಯುತ್ತದೆ.

ಪಲ್ಯ ಬಲು ರುಚಿ...
ಈ ಅವರೆ ಬಳ್ಳಿಯ ಎಲ್ಲಾ ಭಾಗವನ್ನೂ ಆಹಾರವಾಗಿ ಬಳಸಲಾಗುತ್ತದೆ. ಇದರ ಎಳೆಯ ಎಲೆ ಮತ್ತು ಹೂವನ್ನು ಸಾಂಬಾರ್, ಪಲ್ಯ, ಚಟ್ನಿ ಮಾಡಲು ಬಳಸುತ್ತಾರೆ. ಮತ್ತಿ ಅವರೆ ಕಾಯಿಯು 15- 30 ಸೆಂ.ಮೀ. ಉದ್ದಕ್ಕೆ ಬೆಳೆಯುತ್ತದೆ. ಎಳೆಯ ಕಾಯಿಯ ಸಾಂಬಾರ್, ಪಲ್ಯ ಅತ್ಯಂತ ಸ್ವಾದಿಷ್ಟಕರ. ಮತ್ತಿ ಅವರೆ ಕಾಯಿ ಬೇಯಿಸಿದಾಗ ಅದು ಶತಾವರಿ (ಅಸ್ಪರಾಗಸ್) ಗಡ್ಡೆಯ ಪರಿಮಳ ಹೋಲುತ್ತದೆ. ಉಳಿದ ಅವರೆ ಗಿಡಗಳ ಬೇರುಗಳಂತಿರದ ಇದರ ಬೇರುಗಳು ಗಡ್ಡೆಗಳಾಗಿ ಮಾರ್ಪಾಡಾಗಿರುತ್ತದೆ. ಗಡ್ಡೆ ರುಚಿಯಲ್ಲಿ ಬಟಾಟೆಗಳಂತಿದ್ದು, ತರಕಾರಿಯಾಗಿ ಬಳಸಬಹುದು.
ಮತ್ತಿ ಅವರೆ ಕಾಯಿಯಲ್ಲಿ ಶೇ.35 ಪ್ರೊಟೀನ್ ಅಂಶವಿದ್ದು, ಕಡಿಮೆ ಪ್ರಮಾಣದಲ್ಲಿ ಕೊಬ್ಬಿನಂಶವಿದೆ. ಜೊತೆಗೆ ವಿಟಮಿನ್ 'ಎ' ಮತ್ತು 'ಸಿ' ಅಂಶವನ್ನೂ ಒಳಗೊಂಡಿದೆ.

ಮಾರುಕಟ್ಟೆ
ಇದೊಂದು ದುಬಾರಿ ಮತ್ತು ಅಪರೂಪದ ಅವರೆ. ಇದರ ಕಾಯಿ ಮಾರುಕಟ್ಟೆಯಲ್ಲಿ ಕೆಜಿಗೆ ರು. 50-80ರ ವರೆಗೆ ಮಾರಾಟವಾಗುತ್ತದೆ. ಒಟ್ಟಿನಲ್ಲಿ ಇಂಥ ರುಚಿಕಟ್ಟಾದ, ಆರೋಗ್ಯಪೂರ್ಣ ಹಾಗೂ ಅಪರೂಪದ ತರಕಾರಿಯನ್ನು ರೈತರು ದೊಡ್ಡ ಪ್ರಮಾಣದಲ್ಲಿ ಬೆಳೆದು, ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಗಳಿಸಬಹುದು.

- ಪ್ರೊ. ಶಿವಾನಂದ ಎಸ್. ಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.