ಅಡ್ಡೂರು ಆದರ್ಶ

ಅಡ್ಡೂರು ಶಿವಶಂಕರ ರಾವ್ (91) ಕೃಷಿಕ, ಸಾಮಾಜಿಕ ಕಾರ್ಯಕರ್ತ. ತನ್ನಿಬ್ಬರು ಚಿರಂಜೀವಿಗಳಿಗೆ ಪಿತ್ರಾರ್ಜಿತ ಭೂಮಿಯನ್ನು ಪಾಲು ಮಾಡಿ ಹಂಚಲು ನಿರ್ಧರಿಸಿದ್ದರು. ಸರ್ವೆಯರ್ ಬಂದು ಭೂಮಿಯನ್ನು ಅಳೆದಾಗ ಒಂದೆಕರೆ ನಾಪತ್ತೆ ಮಾರಾಟ ಮಾಡಿಲ್ಲ, ಭೂಗಳ್ಳರು ಬಂದಿಲ್ಲ, ಭೂಮಾಫಿಯ ಇಲ್ಲವೇ ಇಲ್ಲ. ಹಾಗಾದರೆ ಜಾಗ ಏನಾಯಿತು ಎಂದು ಪ್ರಶ್ನಿಸಿದಾಗ ಆಗಸ ದಿಟ್ಟಿಸುತ್ತಾ ಅಡ್ಡೂರು ಮೌನವಾದರು.
ನಮ್ಮ ತೋಟದ ಎರಡೂ ಬದಿಯಲ್ಲಿ ರಸ್ತೆಗಾಗಿ ಜಾಗವನ್ನು ಬಿಟ್ಟುಕೊಟ್ಟೆ ಎಂದಾಗ ಎಲ್ಲರೂ ದಂಗು. ಜಾಗ ಬಿಟ್ಟು ಕೊಟ್ಟಿರುವುದರಿಂದ ರಸ್ತೆ ನಿರ್ಮಾಣವಾಯಿತು. ವಾಹನಗಳ ಓಡಾಟಕ್ಕೆ ಅನುಕೂಲವಾಯಿತು. ಜನರಿಗೆ ಉಪಕಾರವಾಯಿತು. ಗ್ರಾಮಾಭಿವೃದ್ಧಿಯ ಪರಿಕಲ್ಪನೆ ಸರ್ಕಾರದ್ದಲ್ಲ, ಪ್ರತಿಯೊಬ್ಬ ಪ್ರಜೆಯೂ ತ್ಯಾಗದ ಮೂಲಕ ಅಭಿವೃದ್ಧಿಗೆ ನೆರವಾಗಬೇಕೆನ್ನುವ ಸಂದೇಶ. ಅಷ್ಟೂ ಜಾಗವನ್ನು ನಗದೀಕರಿಸಿದರೆ ಕೋಟಿ ರುಪಾಯಿಗೂ ಮಿಕ್ಕಿದ ಮೌಲ್ಯ.
ಹಳ್ಳಿಗಳ, ರೈತರ ಉದ್ಧಾರವೇ ನಿಜವಾದ ಗ್ರಾಮಾಭಿವೃದ್ಧಿ. ಕೃಷಿಯು ಕೈಗಾರಿಕೆಯಾದರೆ ದೇಶದಲ್ಲಿ ಕೃಷಿ ನಾಶವಾಗಲು ಹೆಚ್ಚು ದೂರ ಸಾಗಬೇಕಾಗಿಲ್ಲ ಎಂಬ ಸತ್ಯದ ಚಿಂತನೆ ಅವರಲ್ಲಿತ್ತು. ಹೊಸ ಹೊಸ ಕೃಷಿ ಪ್ರಯೋಗಗಳಿಗೆ ತನ್ನನ್ನು ಒಡ್ಡಿಸಿಕೊಳ್ಳುತ್ತಾ, ಗೆದ್ದಾಗ ಸಂತಸ ಹಂಚಿಕೊಳ್ಳುತ್ತಿದ್ದರು, ಸೋತಾಗ ಮೌನವಾಗಿ, ಯಾಕೆ ಸೋತಿತು ಎಂಬ ಜಿಜ್ಞಾಸೆ, ಪೋಸ್ಟ್ ಮಾರ್ಟಂ.
ಶಿವಶಂಕರ ರಾಯರು ಸಾಮಾಜಿಕ ಸೇವೆಯಿಂದ ಹೊರಗೆ ಬಂದು 1952ರಿಂದ ಕೃಷಿಯಲ್ಲಿ ತೊಡಗಿದರು. ಅವರಿಗೆ ಅಡಕೆ ಕೃಷಿಯಲ್ಲಿ ಮೋಹವಿರಲಿಲ್ಲ. ಆಗಷ್ಟೇ ಪ್ರಸಿದ್ಧಿಗೆ ಬರುತ್ತಿದ್ದ ವಿವಿಧ ತೆಂಗು ತಳಿಗಳ ಅಭಿವೃದ್ಧಿ. ಮಾವು ಮತ್ತು ಇತರ ತಳಿಗಳ ಹಣ್ಣುಗಳ ಗಿಡಗಳ ನಾಟಿ. ಜಪಾನ್ ಕೃಷಿ ಪದ್ಧತಿಯಲ್ಲಿ ಬತ್ತದ ಕೃಷಿ. ಕರಾವಳಿ ಭಾಗಕ್ಕೆ ಅಪರೂಪದ್ದಾದ ನೆಲಗಡಲೆ, ಹತ್ತಿ, ಜೋಳ, ರಾಗಿ, ಕಬ್ಬು, ಕಲ್ಲಂಗಡಿ ಕೃಷಿ. ಹಸಿರೆಲೆ ಗೊಬ್ಬರ ಗ್ಲಿರಿಸಿಡಿಯಾ ಪ್ರಚಾರ. ಅಡ್ಡೂರರ ಕೃಷಿ ಭೂಮಿ ಇವುಗಳ ಪ್ರಯೋಗಶಾಲೆ. ಕೃಷಿಯ ವೈಜ್ಞಾನಿಕ ವಿಚಾರ ಓದುತ್ತಿದ್ದರು. ಕೃಷಿಕರಿಗೆ ಹೇಳುತ್ತಿದ್ದರು.
ಇಲಾಖೆಗಳೊಂದಿಗೆ ನಿರಂತರ ಸಂಪರ್ಕ. ಅಧಿಕಾರಿಗಳ ಜತೆ ಮಾತುಕತೆ. ಸಭೆಗಳ ಪ್ರಶ್ನೋತ್ತರ ಸಮಯ ಸದುಪಯೋಗಪಡಿಸಿಕೊಳ್ಳುತ್ತಿದ್ದರು. ಖಂಡಿಸುವಂಥ ವಿಚಾರಗಳಲ್ಲಿ ನಿಷ್ಠುರ. ಹಾಗಾಗಿ ಇವರಿದ್ದ ಸಭೆಗಳಲ್ಲಿ ಅಧಿಕಾರಿಗಳು ಸದಾ ಎಚ್ಚರ. ರಾಸಾಯನಿಕ ಗೊಬ್ಬರ, ಸಿಂಪಡಣೆಯತ್ತ ಮೊದಲು ಒಲವಿದ್ದರೂ ಅದರ ದುಷ್ಪರಿಣಾಮ ಅರಿತ ಶಿವಶಂಕರ ರಾಯರು ಸಾವಯವ ಕೃಷಿ ಮಾಡುವತ್ತ, ಇತರ ಕೃಷಿಕರು ಆಸಕ್ತರಾಗುವತ್ತ ತಮ್ಮ ವಿಚಾರ ಬದಲಿಸಿಕೊಂಡರು. ಕೃಷಿಯಲ್ಲಿ ಯಾವುದೇ ಹೊಸದು ಬಂದರೂ ಅದು ತನ್ನೂರಿನಲ್ಲಿ ಅನುಷ್ಠಾನವಾಗಬೇಕೆಂಬ ಹಪಾಹಪಿ.
ಕಮ್ಯೂನಿಸ್ಟ್ ಸಂಘಟನೆಯಲ್ಲಿದ್ದಾಗ ಪುಸ್ತಕ ಓದುವ ಗೀಳಿದ್ದ ರಾಯರಿಗೆ, ಬದುಕಿನ ಕೊನೆ ತನಕವೂ ಪುಸ್ತಕವೇ ಸಂಗಾತಿ. ಮೂರು ಸಾವಿರಕ್ಕೂ ಮಿಕ್ಕಿದ ಪುಸ್ತಕ ಸಂಗ್ರಹ, ದಿನಪತ್ರಿಕೆಗಳ ಕಟ್ಟಿಂಗ್ಸ್ ಅವರ ಜ್ಞಾನ ಹಸಿವಿನ ದ್ಯೋತಕ. ಹಾಗಾಗಿ ಯಾವುದೇ ವಿಚಾರಗಳ ಪ್ರಸ್ತುತಿಯಲ್ಲಿ ಸೋಲುತ್ತಿರಲಿಲ್ಲ. ಕೃಷಿ ಸಂವಹನಕಾರನಾಗಿ ಅಡ್ಡೂರು ಹಳ್ಳಿಯಲ್ಲಿದ್ದುಕೊಂಡೇ ಮಾಹಿತಿ ಹಂಚತೊಡಗಿದರು.
ಸರಳ ಬದುಕು, ಉಡುಗೆ ತೊಡುಗೆ. ಉಚ್ಚ ವಿಚಾರ. ಶುಚಿ ಜೀವನ. ತನ್ನ ಕಾಲ ಮೇಲೆ ನಿಲ್ಲುವ ಛಾತಿ. ಕೊನೆ ಕಾಲದಲ್ಲಿ ದೇಹದ ಕಸುವು ಮಾಗಿದಾಗ ಊರುಗೋಲನ್ನು, ಇನ್ನೊಬ್ಬರ ಅವಲಂಬನೆ ನಿರಾಕರಿಸುತ್ತಿದ್ದ ಸ್ವಾಭಿಮಾನಿ. ಬದುಕಿನ ರೀತಿ, ನೀತಿಯಲ್ಲಿ ರಾಜಿಯಾಗದ ನಿರ್ಭಿಡೆ ವ್ಯಕ್ತಿತ್ವ. ಬದುಕಿನ ಕೊನೆಯವರೆಗೂ ತನ್ನ ತಾರ್ಕಿಕ ವಿಚಾರ ಮಂಥನದಲ್ಲಿದ್ದ ಶಿವಶಂಕರರು ಕಳೆದ ಫೆಬ್ರವರಿಯಲ್ಲಿ ದೈವಾಧೀನರಾದರು.
ಬದುಕಿನ ಒಂದು ಕಾಲಘಟ್ಟದಲ್ಲಿದ್ದ ವಿಚಾರಗಳು ಬರುಬರುತ್ತಾ ಢಾಳಾಗುವುದನ್ನು ಕಂಡಿದ್ದೇವೆ. ಸಿದ್ಧಾಂತಗಳನ್ನು ತಮಗೆ ಬೇಕಾದಂತೆ ರಿನ್ಯೂವಲ್ ಮಾಡುವ ವ್ಯಕ್ತಿಗಳನ್ನು ನೋಡುತ್ತಿದ್ದೇವೆ. ತಾನೇ ಅಡಿಪಾಯ ಹಾಕಿ ಏರಿಸಿದ ಸೌಧವನ್ನು ಉರುಳಿಸುವ ನಾಯಕರು ನಮ್ಮ ಮುಂದಿದ್ದಾರೆ. ಆದರೆ, ಆರೇಳು ದಶಕಗಳ ಕಾಲ ಒಂದೇ ಸಿದ್ಧಾಂತವನ್ನು ತಪ್ಪಸ್ಸಿನಂತೆ ಅಡ್ಢೂರು ಅನುಷ್ಠಾನಿಸಿದ್ದರು.
ನಮ್ಮ ಅಪ್ಪಾಮ್ಮ ನಮಗೆ ಆದರ್ಶಪ್ರಾಯರು. ಸಮಾಜದಲ್ಲಿ ಹೇಗೆ ಬದುಕಬೇಕಂತ ಹೇಳಿಕೊಟ್ಟರು. ಜ್ಞಾನ ತೃಷೆಯನ್ನು ಹೆಚ್ಚಿಸಿದರು. ಓದುವಂತೆ ಪ್ರೇರೇಪಿಸಿದರು. ಸವಾಲುಗಳಿಗೆ ಎದೆಯೊಡ್ಡುವ ಕ್ರಮ ಕಲಿಸಿದರು. ಇದಕ್ಕಿಂತ ಹೆಚ್ಚು ಹೆತ್ತವರಿಂದ ಏನನ್ನು ನಿರೀಕ್ಷಿಸಬಹುದು, ಅಡ್ಡೂರರ ಚಿರಂಜೀವಿಗಳಾದ ಕೃಷ್ಣ ರಾವ್ ಮತ್ತು ಸೂರ್ಯನಾರಾಯಣ ರಾವ್ ಹೆತ್ತವರ ಬಗ್ಗೆ ಕೃತಜ್ಞರು. ಇಂಥ ಮನಸ್ಸುಗಳು ಬೇಕಾಗಿವೆ. ಅದನ್ನು ಬೇರೆಲ್ಲೂ ಹುಡುಕಬೇಕಿಲ್ಲ. ನಮ್ಮೊಳಗಿವೆ.
- ನಾ. ಕಾರಂತ ಪೆರಾಜೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


