ಬಾಳೆ ಬಂಗಾರ

ಒಂದು ಬೆಳೆ ಕೈಕೊಟ್ಟಿತೆಂದು ಕೈಕಟ್ಟಿ ಕುಳಿತರೆ ಬದುಕು ಹಸನಾಗಲ್ಲ. ಅದಕ್ಕೊಂದು ಪರಿಹಾರೋಪಾಯ ಕಂಡುಕೊಳ್ಳಬೇಕು. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ಹನಸಿಯ ಎ.ಎಂ. ಗಂಗಾಧರಯ್ಯಸ್ವಾಮಿ ಪಪ್ಪಾಯಿ ಬೆಳೆಯಿಂದ ಲಾಭ ರುಚಿ ಕಾಣುವಾಗಲೇ ಕೈಸುಟ್ಟುಕೊಂಡರು. ಆಗ ಎದೆಗುಂದಲಿಲ್ಲ. ಪಪ್ಪಾಯಿಗೆ ಮಾಡಿದ ತಯಾರಿ, ಯೋಜನೆಗೆ ಹೊಂದುವ ಇತರೆ ಬೆಳೆ ಬೆಳೆದರು. ಇದರಿಂದ ಕಡಿಮೆ ಖರ್ಚು, ಶ್ರಮದ ಮೂಲಕ ಮಿಶ್ರ ತೋಟಗಾರಿಕೆ ಬೆಳೆ ಬೆಳೆದು ಬಂಪರ್ ಲಾಭ ಮಾಡಬಹುದು ಎಂಬುವುದನ್ನು ತೋರಿಸಿದರು.
ಗಂಗಾಧರಯ್ಯಸ್ವಾಮಿ ಬಿ.ಕಾಂ. ಪದವೀಧರ. ಭವಿಷ್ಯ ಕಂಡುಕೊಂಡಿದ್ದು ಬೇಸಾಯದಲ್ಲಿ. 5 ಎಕರೆ ಜಮೀನಿನಲ್ಲಿ ಇವರು ತೋಟಗಾರಿಕೆ, ವಾಣಿಜ್ಯ ಬೆಳೆ ಬೆಳೆಯುವುದೇ ಹೆಚ್ಚು. ಎರಡು ವರ್ಷದ ಕೆಳಗೆ ಐದು ಎಕರೆಗೆ ಪಪ್ಪಾಯಿ ತುಂಬಿಸಿದರು. ಇನ್ನೇನು ಫಸಲು ಕೈಗೆ ಬಂತು ಎನ್ನುವಷ್ಟರಲ್ಲಿ ರೋಗಬಾಧೆಗೆ ತುತ್ತಾಯಿತು. ಇದರಿಂದ ವಿಚಲಿತರಾದ ಗಂಗಾಧರಯ್ಯ ಅವರಿಗೆ ಗ್ರಾಮದ ಇತರರು ಪಪ್ಪಾಯಿ ಬಿಟ್ಟು ಅಲ್ಪಾವಧಿ ಬೆಳೆ ಬೆಳೆಯುವಂತೆ ಕಿವಿಮಾತು ಹೇಳಿದರು. ಆದರೆ, ಪಪ್ಪಾಯಿಗೆ ಸರಿಹೊಂದುವಂತೆ ಹದಮಾಡಿ ಸಿದ್ಧಮಾಡಿದ್ದ ಜಮೀನು, ಅಳವಡಿಸಿದ್ದ ಹನಿ ನಿರಾವರಿ ವ್ಯವಸ್ಥೆ ಸೇರಿದಂತೆ ಇದರ ಖರ್ಚು- ವೆಚ್ಚ ಲಕ್ಷದ ಗಡಿ ದಾಟಿತ್ತು. ಹೀಗಾಗಿ ಇದೇ ಸೌಲಭ್ಯ ಬಳಸಿ ಬೆಳೆ ತೆಗೆಯುವತ್ತ ಚಿತ್ತ ಹರಿಸಿದರು.
ಬಾಳೆ ಬದುಕು
ಬಾಳೆ ಇದಕ್ಕೆ ಸೂಕ್ತ ಎಂಬ ನಿರ್ಧಾರಕ್ಕೆ ಬಂದರು. ಅತ್ತ ಪಪ್ಪಾಯಿಗೆ ಅಂಟಿಕೊಂಡ ರೋಗ ನಿಯಂತ್ರಿಸುತ್ತಾ ಇತ್ತ ಪಪ್ಪಾಯಿ ಗಿಡಗಳ ಮಧ್ಯೆ ನಿರ್ದಿಷ್ಟ ಅಂತರದಲ್ಲಿ ಜಿ- 9 ತಳಿಯ ಬಾಳೆ ಗಿಡ ಐದು ಎಕರೆಗೆ ಹಾಕಿದರು. ಪಪ್ಪಾಯಿ ಮತ್ತು ಬಾಳೆಗೆ ಸಮಾನವಾಗಿ ನೀರು ಸಿಗುವಂತೆ ಡ್ರಿಪ್ ಅಳವಡಿಸಿದರು.
ಕೆಲ ಕಾಲ ನಂತರ ಪಪ್ಪಾಯಿ ಭಾಗಶಃ ನೆಲಕಚ್ಚಿದ್ದರಿಂದ ಬಾಳೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟರು. ಪಪ್ಪಾಯಿಗೆ ಪೂರಕವಾಗಿ ಭೂಮಿ ಸಿದ್ಧಪಡಿಸಿದ್ದರಿಂದ ಕಳೆ, ಗೊಬ್ಬರಕ್ಕೆ ಮಾತ್ರ ಹಣ ವ್ಯಯಿಸಿದರು. ಬಾಳೆಗೆ ಸಾವಯವ ಪದ್ಧತಿ ಅನುಸರಿಸಿದರು. ಬಾಳೆಗೆ ಹೊಂದಿಕೊಡಂತೆ ಬದುವಿನಲ್ಲಿ ಒಂದು ಅಡಿ ಆಳ ತೆಗ್ಗು ತೆಗೆದು ಅದಕ್ಕೆ ಕುರಿ, ಕೊಟ್ಟಿಗೆ, ಎರೆ ಹುಳ ಗೊಬ್ಬರ ಮಿಶ್ರಣ ಮಾಡಿ ಹಾಕಿದರು.
ಬೆಳೆಯ ನಡುವೆ ಕಂಡ ಖಾಲಿ ಜಾಗಕ್ಕೆ ಪಪ್ಪಾಯಿ, ಬಾಳೆಯ ಒಣಗಿದ ಎಲೆ ಹರವಿದ್ದರಿಂದ ಭೂಮಿ ತೇವಾಂಶ ಹಿಡಿದಿಟ್ಟುಕೊಳ್ಳಲು ನೆರವಾಯಿತು. ಅಲ್ಲದೆ, ಫಲವತ್ತತೆ ವೃದ್ಧಿಯಾಗಿತು. ಇದರಿಂದ ಬಾಳೆಯ ಫಸಲಿನಲ್ಲಿ ನಿರೀಕ್ಷೆ ಮೀರಿ ಇಳುವರಿ ಬಂತು.
ಮೊದಲ ಫಸಲು ಬಹುತೇಕ ಕೈಸೇರಿದೆ. ಎರಡನೇ ಫಸಲು ಸಿಗುವ ಹಂತದಲ್ಲಿದೆ. ಇನ್ನೇನು ಇನ್ನೊಂದು ಫಲ ಕಂಡರೆ ಬಾಳೆಗೆ ಭವಿಷ್ಯವಿಲ್ಲ. ಹೀಗಾಗಿ ಈ ಬಾಳೆ ಹೊಲ ಹಾಳಾಗುವ ವೇಳೆಗೆ ಮತ್ತೊಂದು ಬೆಳೆ ಕೈಗೆ ಬರುವಂತೆ ಯೋಜನೆ ರೂಪಿಸಿದ್ದಾರೆ. ಬಾಳೆಯ ನಡುವೆ ತಮ್ಮ ಸ್ವಂತ ಜಮೀನಿನಲ್ಲಿ 20 ್ಢ 20 ಅಂತರದಲ್ಲಿ 100 ನಿಂಬೆ, 8 ್ಢ 8 ಅಂತರದಲ್ಲಿ 900 ಅಡಕೆ ಗಿಡ ತುಂಬಿಸಿ ವರ್ಷ ಕಳೆಯತ್ತಾ ಬಂದಿದೆ. ಇವುಗಳಿಗೂ ಬಾಳೆಗೆ ಹಾಕಿರುವ ಡ್ರಿಪ್‌ಗಳಿಂದ ನೀರು ಒದಗುವಂತೆ ಮಾಡಿದ್ದಾರೆ. ಹೀಗಾಗಿ ಇಲ್ಲಿಯೂ ಹಣದ ಉಳಿತಾಯ.
ಯಶಸ್ಸಿನ ಬೆನ್ನೇರಿ...
ಪಪ್ಪಾಯಿಯಲ್ಲಿ ಕಂಡ ನಷ್ಟವನ್ನು ಬಾಳೆಯಲ್ಲಿ ಸರಿದೂಗಿಸಿಕೊಂಡು ಮತ್ತೆರಡು ತೋಟಗಾರಿಕೆ ಬೆಳೆಗೆ ಕೈ ಹಾಕಿ ಯಶಸ್ಸಿನ ಬೆನ್ನೇರಿದ್ದಾರೆ. ಪಪ್ಪಾಯಿ ಬೆಳೆ ತೆಗೆಯಲು ಮಾಡಿದ ತಯಾರಿ ಹಾಗೂ ಹಾಕಿದ ಬಂಡವಾಳ ವ್ಯರ್ಥವಾಗದಂತೆ ನೋಡಿಕೊಂಡು ಇತರೆ ಬೆಳೆಗಳನ್ನು ನಿರಾಯಾಸವಾಗಿ ತೆಗೆಯುತ್ತಿದ್ದಾರೆ. ಸಂಪರ್ಕ: 9880591639.
-ಸ್ವರೂಪಾನಂದ. ಎಂ. ಕೊಟ್ಟೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


