ಮಾವು ಮದ್ದು
ಮಾವಿನ ಕಾಂಡ ಕೊರಕ, ಮರಕ್ಕೆ ಕಾಡುವ ಕೀಟಗಳಲ್ಲಿ ಅತ್ಯಂತ ಹಾನಿಕರ ಕೀಟ. ಏಕೆಂದರೆ ಸಕಾಲದಲ್ಲಿ ಈ ಕೀಟದ ಹಾವಳಿ ಗುರುತಿಸಿ, ಸೂಕ್ತ ಹತೋಟಿ ಕ್ರಮ ಕೈಗೊಳ್ಳದಿದ್ದರೆ...

ಮಾವಿನ ಕಾಂಡ ಕೊರಕ, ಮರಕ್ಕೆ ಕಾಡುವ ಕೀಟಗಳಲ್ಲಿ ಅತ್ಯಂತ ಹಾನಿಕರ ಕೀಟ. ಏಕೆಂದರೆ ಸಕಾಲದಲ್ಲಿ ಈ ಕೀಟದ ಹಾವಳಿ ಗುರುತಿಸಿ, ಸೂಕ್ತ ಹತೋಟಿ ಕ್ರಮ ಕೈಗೊಳ್ಳದಿದ್ದರೆ ಹಾನಿಯಾದ ಮರ ಸಂಪೂರ್ಣ ಒಣಗಿ ಹೋಗುತ್ತದೆ. ಇದು ಒಂದು ದುಂಬಿ ಜಾತಿಯ ಪಂಗಡಕ್ಕೆ ಸೇರಿದ ಕೀಟ. ಹೆಚ್ಚಾಗಿ ಬಾದಾಮಿ ತಳಿಯ ಮರಗಳಿಗೆ ಬಾಧೆಯನ್ನುಂಟು ಮಾಡುತ್ತವೆ.
ಲಕ್ಷಣಗಳೇನು?
ಪ್ರೌಢ ದುಂಬಿ ಸಾಮಾನ್ಯವಾಗಿ ಕಾಂಡ ಅಥವಾ ಬಲಿತ ರೆಂಬೆಗಳ ಮೇಲಿನ ಸಡಿಲವಾದ ತೊಗಟೆಯ ಸಂದಿಯಲ್ಲಿ ಅಥವಾ ಗಾಯವಾದ ಭಾಗದಲ್ಲಿ ಮೊಟ್ಟೆಯನ್ನಿಡುತ್ತದೆ. ಮೊಟ್ಟೆಯಿಂದ ಹೊರಬಂದ ಮರಿಹುಳು ಮೊದಲು ತೊಗಟೆಯ ಭಾಗ ತಿಂದು ನಂತರ ಕಾಂಡದ ಭಾಗದ ಮೇಲೆ ರಂಧ್ರ ಮಾಡಿ ಒಳಗೆ ಪ್ರವೇಶಿಸಿ ಅಂಕುಡೊಂಕಾದ ಸುರಂಗ ಮಾಡಿಕೊಂಡು ಕಾಂಡದ ಒಳಭಾಗ ತಿನ್ನುತ್ತದೆ. ಇದರಿಂದ ಮರಕ್ಕೆ ನೀರು ಮತ್ತು ಆಹಾರ ಪದಾರ್ಥಗಳ ಸರಬರಾಜಿನಲ್ಲಿ ಅಡೆತಡೆ ಬಂದು ಮರ ಒಂದೆರಡು ವರ್ಷದಲ್ಲಿ ಒಣಗಿ ಹೋಗುತ್ತದೆ. ಹಾನಿಗೊಳಗಾದ ಕೊಂಬೆ ಮರದ ಮೇಲ್ಭಾಗದ ಹಳದಿ ಬಣ್ಣಕ್ಕೆ ತಿರುಗುತ್ತದೆ. ಕಾಂಡದ ಮೇಲೆ ಕೊರೆದ ರೀತಿಯ ಚಿನ್ಹೆ, ಅಥವಾ ರಂಧ್ರ ಕಂಡು ಬರುತ್ತದೆ. ಮರದ ಬುಡದಲ್ಲಿ ಬಿಳಿ ಬಣ್ಣದ ಪುಡಿ ಕಾಡಬಹುದು. ಹಲವು ಬಾರಿ ಹುಳು ಕೊರೆದ ರಂಧ್ರದಿಂದ ಕಂದು ಬಣ್ಣದ ರಸ ಸುರಿಯುವುದನ್ನು ಕಾಣಬಹುದು.
ಹತೋಟಿ ಕ್ರಮಗಳೇನು?
ಹಾನಿಗೊಳಗಾದ ಮರದ ಭಾಗ ಅಥವಾ ಮರ ಸಂಪೂರ್ಣ ಒಣಗಿದ್ದರೆ ಅಂತಹ ಮರವನ್ನು ನಾಶಪಡಿಸಬೇಕು. ಕಬ್ಬಿಣದ ಸಲಾಕೆ ಬಳಸಿ ರಂಧ್ರದೊಳಗಿರುವ ಮರಿ ಹುಳುಗಳನ್ನು ಚುಚ್ಚಿ ಸಾಯಿಸುವುದು ಅಥವಾ ಹೊರ ತೆಗೆದು ಸಾಯಿಸಬಹುದು. ಹತ್ತಿಯನ್ನು ಡೈಕ್ಲೋರಾವಾಸ್ ಕೀಟನಾಶಕದಲ್ಲಿ ನೆನೆಸಿ ಅದನ್ನು ಕೊರೆದ ರಂಧ್ರದೊಳಗೆ ಹಾಕಿ ಒದ್ದೆ ಮಣ್ಣು ಅಥವಾ ಸಿಮೆಂಟ್ ಬಳಸಿ ಮುಚ್ಚಬೇಕು. ಕಾಂಡ ಕೊರಕದ ಬಾಧೆಯಿಂದ ತೋಟಗಳಲ್ಲಿ ಎಲ್ಲಾ ಮರದ ಕಾಂಡ ಭಾಗಕ್ಕೆ ಪೀಡೆನಾಶಕ ಮಿಶ್ರಣದ ಉಪಚಾರ ಮಾಡಬೇಕು. ಡೈಕ್ಲೋರಾವಾಸ್ 10 ಮಿಲೀ, ಕ್ಲೋರಫೈರಿಪಾಸ್ 10 ಮಿಲೀ, ಕಾಪರ್ ಆಕ್ಸಿಕ್ಲೋರೈಡ್ 25 ಗ್ರಾಂ. ಅಥವಾ 1 ಲೀಟರ್ ನೀರಿಗೆ ಮಿಶ್ರಣ ಮಾಡಿಕೊಂಡು ಸಿಂಪಡಿಸಬೇಕು.
ಇತ್ತೀಚೆಗೆ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ದಿಪಡಿಸಿರುವ ಸೀಲರ್ ಮತ್ತು ಹೀಲರ್ ಬಳಸಿಯೂ ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು.
ಬಳಸುವ ವಿಧಾನ
ಹಾನಿಯಾದ ಕಾಂಡದ ರೆಂಬೆಯ ಮೇಲಿನ ಸಡಿಲಾದ ಅಥವಾ ತೊಗಟೆ ತೆಗೆದು ಆ ಭಾಗಕ್ಕೆ 5 ಮಿಲಿ ಡೈಕ್ಲೋರಾವಾಸ್ ಮತ್ತು 40 ಗ್ರಾ. ಕಾಪರ್ ಆಕ್ಸಿಕ್ಲೋರೆಡ್ ಕೀಟನಾಶಕವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಬ್ರಶ್ ಸಹಾಯದಿಂದ ಕೀಟನಾಶಕದ ದ್ರಾವಣ ಲೇಪಿಸುವುದು.
ಎಚ್ಚರ ಅಗತ್ಯ
ಯಾವುದೇ ಕಾರಣಕ್ಕೂ ಕಾಂಡದ ಸುತ್ತ ಶೇ. 50ಕ್ಕಿಂತ ಹೆಚ್ಚಿನ ಭಾಗದ ತೊಗಟೆ ತೆಗೆಯದಂತೆ ಎಚ್ಚರ ವಹಿಸಬೇಕು. ನಂತರ ಪ್ರತಿ ಲೀಟರ್ ನೀರಿಗೆ 5 ಮಿಲಿ ಡೈಕ್ಲೋರಾವಾಸ್ ಮತ್ತು 40 ಗ್ರಾಂ. ತಾಮ್ರದ ಅಕ್ಸಿಕ್ಲೋರೈಡ್ ಬೆರೆಸಿ ಇಕ್ಕೆಸೀಲರ್ ಕ್ಲೋರೊಮ್ಹೀಲರ್ ಪುಡಿ ಮಿಶ್ರಣ ಮಾಡಿ ಕಾಂಡದ ಮೇಲೆ ತೊಗಟೆ ತೆಗೆದ ಭಾಗಕ್ಕೆ ಲೇಪಿಸಬೇಕು.
-ಕೆ.ಮುರಳಿಮೋಹನ್
ಕೃಷಿ ವಿಜ್ಞಾನ ಕೇಂದ್ರ, ಮಾಗಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


