ದಾಳಿಂಬೆ ಧಾಮ
ಈ ಬಿರು ಬಿಸಿಲಿನಲ್ಲೂ ಮುಧೋಳದ ಗೋವಿಂದಕೊಪ್ಪ ಗ್ರಾಮದ ನಗು ಮಾತ್ರ ಆರುವುದೇ ಇಲ್ಲ.

ಈ ಬಿರು ಬೇಸಿಗೆಯಲ್ಲಿ ಬಾಗಲಕೋಟೆಯ ಹಿನ್ನೀರು ಹೊರತಾದ ಭೂಮಿಯೆಲ್ಲ ಕಾದು ಕೆಂಡದಂತಾಗಿರುತ್ತದೆ. ಇಂಥ ಬಿಸಿಲಿನಲ್ಲೂ ಮುಧೋಳ ತಾಲೂಕು ಗೋವಿಂದಕೊಪ್ಪ ಗ್ರಾಮದ ನಗು ಮಾತ್ರ ಆರುವುದೇ ಇಲ್ಲ. ಅಲ್ಲಿನ ರಸಭರಿತ, ಮುತ್ತಿನಂತ ಬೀಜ ಹೊಂದಿದ ದಾಳಿಂಬೆ ಹಣ್ಣು ಗ್ರಾಮದ ನಗುವಿನಲ್ಲಿ ಬೆಳಕು ತುಂಬಿ ಥಳಥಳಿಸುವಂತೆ ಮಾಡಿದೆ.
ಇದು ನಿಜಕ್ಕೂ ದಾಳಿಂಬೆ ಊರು. ಕುರುಚಲು ಗುಡ್ಡದಲ್ಲಿ ನೆಲೆ ನಿಂತಿರುವ ಈ ಗ್ರಾಮ ಹಿಂದೆ ಬರಗಾಲ, ಬಡತನಕ್ಕೆ ಹೆಸರುವಾಸಿ. ಆದರೆ, ಇಂದು ಗ್ರಾಮದ ಯಾವುದೇ ದಿಕ್ಕಿಗೆ ಹೆಜ್ಜೆ ಹಾಕಿದರೂ ದಾಳಿಂಬೆ ವನ ಕಾಣುತ್ತವೆ. ಆ ಗಿಡದಲ್ಲಿ ಪೋಣಿಸಿದಂತೆ ಕಾಣುವ ದಾಳಿಂಬೆ ಹಣ್ಣುಗಳು ಕೈಬೀಸಿ ಕರೆಯುತ್ತವೆ. ಒಂದಕ್ಕಿಂತ ಮತ್ತೊಂದು ರುಚಿ. ಈ ತೋಟದ ಮೇಲೆ ತೀಡಿ ಬರುವ ಗಾಳಿಯಲ್ಲಿನ ಸುವಾಸನೆ ಕಾಲುಗಳು ಕದಲದಂತೆ ನಿಲ್ಲುವಂತೆ ಮಾಡುತ್ತದೆ.
ಅಜಮಾಸು ಈ ಗ್ರಾಮದಲ್ಲಿ 200 ಕುಟುಂಬಗಳಿವೆ. ಒಬ್ಬಿಬ್ಬರನ್ನು ಬಿಟ್ಟರೆ ಎಲ್ಲರೂ ದಾಳಿಂಬೆ ಬೆಳೆಗಾರರು. ಬೆಳಗಾದರೆ ಸಾಕು, ವನಿತೆಯರು ಪ್ಲಾಸ್ಟಿಕ್ ಟ್ರೇ ಹಿಡಿದು ಹಣ್ಣು ಕೀಳುತ್ತಿರುತ್ತಾರೆ. ಪುರುಷರು ಅವುಗಳನ್ನು ಸ್ವಚ್ಛಗೊಳಿಸಿ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡುತ್ತಾರೆ. ತೋಟದ ಅಂಚಿಗೆ ನಿಂತ ವಾಹನಕ್ಕೆ ಲೋಡ್ ಮಾಡಿ ಗರಿ ಗರಿ ನೋಟು ಎಣಿಸುತ್ತಿರುತ್ತಾರೆ. ಹಗಲು- ರಾತ್ರಿ ಇಲ್ಲಿನ ಜನಕ್ಕೆ ದಾಳಿಂಬೆ ಧ್ಯಾನ!
ಮಾರುಕಟ್ಟೆ ಕೊರತೆಯಿಲ್ಲ
ಚೆನ್ನೈ, ಕೋಲ್ಕೊತಾ, ಮುಂಬೈ, ಪುಣೆ, ಹೈದರಾಬಾದ್ ಇವರ ಪ್ರಮುಖ ಮಾರುಕಟ್ಟೆ. ಬಹಳಷ್ಟು ರೈತರು ತಾವೇ ನೇರವಾಗಿ ಮಾರಾಟ ಮಾಡಿದರೆ, ಕೆಲವರು ಮಧ್ಯವರ್ತಿಗಳನ್ನು ಅವಲಂಬಿಸಿದ್ದಾರೆ. ಇಲ್ಲಿ ಬೆಳೆಯುವ ಸಿಂಧೂರ ತಳಿಯ ದಾಳಿಂಬೆ ಶ್ರೇಷ್ಠ, ಉತ್ಕೃಷ್ಟ. ತೋಟಗಾರಿಕೆ ಇಲಾಖೆ 2005ರಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಮೂಲಕ ಪ್ರೋತ್ಸಾಹಧನ, ರಿಯಾಯಿತಿ, ಹನಿ ನೀರಾವರಿಗಾಗಿ ನೆರವು ನೀಡಲು ಮುಂದಾದ ಬಳಿಕವಂತೂ ಗ್ರಾಮಸ್ಥರು ಫುಲ್‌ಖುಷ್.
ಸಜ್ಜೆ ಬೆಳೆಯುವ ಹೊಲ
ಅರವತ್ತರ ಆಸುಪಾಸಿನ ಸಿದ್ದಪ್ಪ ತೋಟದ ತಮ್ಮೂರಿನ ಕೃಷಿಯ ಬದಲಾವಣೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ ಬಂದವರು. ಸ್ವತಃ ತಮ್ಮದೆ ಎರಡೂವರೆ ಎಕರೆ ಬೆಣಚುಕಲ್ಲಿನ ಖರಾಬು ಜಮೀನಿನಲ್ಲಿ ರಸಪೂರಿತ ದಾಳಿಂಬೆ ಹಣ್ಣು ಬೆಳೆದು ದೇಶ- ವಿದೇಶಕ್ಕೆ ರಫ್ತು ಮಾಡುವ ಪ್ರಗತಿಪರ ರೈತರಾಗಿದ್ದಾರೆ.
ಊರ ಮುಂದಿನ ಈ ಬೆಣಚು ಕಲ್ಲಿನ ಹೊಲ ದನಗಳು ನಿಲ್ಲಲು, ಹಿಂಗಾರಿಯಲ್ಲಿ ಸಜ್ಜೆ ಬೆಳೆಯಲು ಮಾತ್ರ ಬಳಕೆಯಾಗುತ್ತಿತ್ತು. ಮಳೆ ಬಂದರೆ ಬೆಳೆ, ಇಲ್ಲದಿದ್ದರೆ ಗುಳೆ ಎನ್ನುವ ಪರಿಸ್ಥಿತಿ. ನಾಲ್ಕು ಚೀಲ ಸಜ್ಜೆ ಬೆಳೆದರೆ, ಒಂದು ಚಕ್ಕಡಿ ಮೇವು ಬಂದರೆ ಅದೇ ದೊಡ್ಡ ಪುಣ್ಯ. ತಮ್ಮ ಬಡತನಕ್ಕೆ ಅದೇ ವರ್ಷದ ಗಂಜಿ ಎಂದು ನಂಬಿ ಬದುಕುತ್ತಿದ್ದ ಈ ಸಿದ್ದಪ್ಪನ ಬದುಕನ್ನು ದಾಳಿಂಬೆ ತನ್ನ ಬೀಜದಂತೆ ಥಳಥಳಿಸುವಂತೆ ಮಾಡಿದೆ.
ಈ ಪುಟ್ಟ ಜಮೀನಿನಲ್ಲಿ ಈತ ಪ್ರತಿವರ್ಷ ಏನಿಲ್ಲವೆಂದರೂ ಐದು ಲಕ್ಷ ರು. ಬಾಚುತ್ತಿದ್ದಾರೆ. ತಾನೇ ಮುಂದಾಗಿ ಮಾರುಕಟ್ಟೆ ಮಾಡಿದರೆ ಇನ್ನೂ ತುಸು ಹೆಚ್ಚಿನ ಕಾಸು ಗಳಿಸಬಹುದು. ಸದಾ ಈ ತೋಟದಲ್ಲಿ ಹಣ್ಣಿನ ಗಿಡಗಳ ಆರೈಕೆಯಲ್ಲಿರುವ ಇವರನ್ನು ಕಂಡು 'ಹ್ಯಾಂಗಿದ್ದೀರಿ ಯಜಮಾನ್ರೆ' ಎಂದು ಯಾರಾದರೂ ಪ್ರಶ್ನಿಸಿದರೆ ತಲೆಗೆ ಟವೆಲ್ ಸುತ್ತಿ ಮೀಸೆ ಮೇಲೆ ಕೈ ಹಾಕುತ್ತ 'ಸಜ್ಜೀ ಬೆಳಿಯೂ ಹೊಲಾ ಇದು. ಇಂದ ಲಕ್ಷ ಲಕ್ಷ ರೊಕ್ಕಾ ಕೊಡ್ತೈತಿ ಅಂದ್ರ ಇನ್ನೇನ ಬೇಕ್ರಿ. ದೇವ್ರು ದೊಡ್ಡಾವ. ಚಂದಾಗಿ ಇಟ್ಟಾನ, ತಗೋರಿ ಯಾಡ್ ಹಣ್' ಎನ್ನುತ್ತ ಗಿಡದಲ್ಲಿ ರಸತುಂಬಿ ನಿಂತ ದಾಳಿಂಬೆ ಹಣ್ಣುಗಳನ್ನು ಕಿತ್ತು ಕೈಗಿಡುತ್ತಾರೆ ಸಿದ್ದಪ್ಪ.
ವಲಸೆ ಬಂದು ನೆಲೆಯೂರಿದರು
ಅತ್ಯಂತ ಹೆಚ್ಚು, ಕಡಿಮೆ ಖರ್ಚಿನಲ್ಲಿ ಹೆಚ್ಚು ದಾಳಿಂಬೆ ಉತ್ಪಾದನೆ ಮಾಡುವ ಬಳೂಲದ ಕುಟುಂಬ ಇಡೀ ಗೋವಿಂದಕೊಪ್ಪಕ್ಕೆ ಸಿಂಧೂರ ಇದ್ದಂತೆ. ತೋಟಗಾರಿಕೆ ಬೆಳೆಯಲ್ಲಿ ಏನೇ ಸಮಸ್ಯೆ ಎದುರಾದರೂ ರೈತರು ಬಂದು ಸಲಹೆ ಪಡೆಯುವುದು ಇವರಲ್ಲೆ. ದಾಳಿಂಬೆ ಬೆಳೆಯಲ್ಲಿ, ಮಾರುಕಟ್ಟೆ ಕಂಡುಕೊಳ್ಳುವಲ್ಲಿ ಇವರು ಎಂದೂ ಕೈ ಸುಟ್ಟುಕೊಂಡವರಲ್ಲ. ಹಾಗಾಗಿ ಈ ಪ್ರದೇಶದಲ್ಲಿ ದಾಳಿಂಬೆ ಎಂದೊಡನೆ ನೆನಪಿಗೆ ಬರುವುದು ಇದೇ ಕುಟುಂಬ.
ಮೂಲತಃ ಇವರು ಕಲಾದಗಿಯವರು. ಮೂರ್ನಾಲ್ಕು ದಶಕದಿಂದ ದಾಳಿಂಬೆ ಬೆಳೆಯುವುದು, ಸಗಟು ಖರೀದಿಸಿ ಮಾರುವುದು ಇವರ ಉದ್ಯೋಗ. ತಮ್ಮೂರಲ್ಲಿ ಸರಿಯಾದ ತೋಟ ಸಿಗದ ಕಾರಣ ದಾಳಿಂಬೆ ಬೆಳೆಯಲು ಉತ್ತಮ ಹವಾಗುಣ, ನೆಲ ಹೊಂದಿರುವ ಈ ಗೋವಿಂದಕೊಪ್ಪಕ್ಕೆ ವಲಸೆ ಬಂದು ಐದು ಎಕರೆ ಹೊಲ ಖರೀದಿಸಿ ತೋಟ ಮಾಡುವ ಮೂಲಕ ಉಳಿದವರಿಗೂ ಹಣ್ಣಿನ ರುಚಿ ಹಚ್ಚಿಸಿದ್ದಾರೆ. ಇವರ ತೋಟದಲ್ಲಿ ಅತ್ಯಂತ ಉತೃಷ್ಟ ಹಣ್ಣುಗಳು ಬೆಳೆಯುತ್ತವೆ. ಹಾಗಿದೆ ಇವರ ಕೃಷಿ ಆರೈಕೆ.
ಬ್ರಿಟಿಷರ ಬಳುವಳಿ
ದಾಳಿಂಬೆ ವಿದೇಶಿ ತಳಿ. ಇದನ್ನು ಭಾರತಕ್ಕೆ ಅದರಲ್ಲೂ ಸ್ವಾತಂತ್ರ್ಯ ಪೂರ್ವದ ಮುಂಬೈ ಕರ್ನಾಟಕಕ್ಕೆ ಪರಿಚಯಿಸಿದವರು ಬ್ರಿಟಿಷರು. ಇಂದಿನ ಬಾಗಲಕೋಟೆ ಜಿಲ್ಲೆಯ ಕಲಾದಗಿ ಹೋಬಳಿ ಅಂದಿನ ಬಿಜಾಪುರ ಜಿಲ್ಲೆಯ (ಅವಿಭಜಿತ) ಜಿಲ್ಲಾ ಕೇಂದ್ರವಾಗಿತ್ತು. ಬ್ರಿಟಿಷರಿಗೆ ಅಡುಗೆ ಭಟ್ಟನಾಗಿ ಬಂದಿದ್ದ ಅರಬ್ ರಾಷ್ಟ್ರದ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ತಾಯ್ನೆಲದಲ್ಲಿ ಅತ್ಯಂತ ಪ್ರಸಿದ್ಧವಾಗಿದ್ದ ಈ ದಾಳಿಂಬೆ ಹಣ್ಣುಗಳನ್ನು ಬ್ರಿಟಿಷ್ ಅಧಿಕಾರಿಗಳಿಗಾಗಿ ತಂದಿದ್ದನಂತೆ. ಆ ಹಣ್ಣುಗಳನ್ನು ಸವಿದ ಅವರು ಬೀಜ ಸಂರಕ್ಷಿಸಿ ನಾಟಿ ಮಾಡಿದರಂತೆ. ಅವು ಮೊಳಕೆಯೊಡೆದು ಗಿಡವಾಗಿ ಹಣ್ಣು ನೀಡುತ್ತ ಬಂದಂತೆ ಇಡೀ ಕಲಾದಗಿ ಪ್ರದೇಶ ಆವರಿಸಿತು. ಹಾಗಾಗಿ ಕಳೆದ ಐದಾರು ದಶಕದಿಂದ ಕಲಾದಗಿ ದಾಳಿಂಬೆ ಹಣ್ಣಿಗೆ ಪ್ರಸಿದ್ಧಿ ಹೊಂದಿದೆ.
-ಮಲ್ಲಿಕಾರ್ಜುನ ಸಿದ್ದಣ್ಣವರ
ಫೋಟೋ: ಮಂಜುನಾಥ ಸುಳ್ಳೊಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


