ಕೃಷಿ-ಪರಿಸರ

ಥರ ಥರ ತರಕಾರಿ

ಥರ ಥರ ತರಕಾರಿ
Published On :

ಅದು ಪೇಟೆಯ ಪ್ರಭಾವವೋ, ಆಧುನಿಕತೆಯ ಹಂಬಲವೋ... ಅಂತೂ ಹೆಣ್ಣು ಮಕ್ಕಳು ಹಾಗೆ ಯೋಚಿಸುತ್ತಿರುವುದಂತೂ ಸತ್ಯ. ಹಳ್ಳಿಗಳಲ್ಲೂ ಮಹಿಳೆಯರಿಗೆ ಮನೆಯಿಂದ ಹೊರಗೆ ಹೋಗಿ ದುಡಿದರೆ ಮಾತ್ರ ಸಂಪಾದನೆ ಎನ್ನುವ ಭ್ರಮೆ. ದುಡಿಯಲು ಮನೆಯಿಂದ ಹೊರಗೇಕೆ ಹೋಗಬೇಕು ಎಂದು ಪ್ರಶ್ನಿಸುವವರು ಗಳಿಕೆ ಮಾರ್ಗ ಮನೆಯಲ್ಲಿಯೇ ಇದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ತಾವು ಮನೆಯಲ್ಲಿ ಮಾಡುವ ಉಳಿತಾಯವೂ ಸಂಪಾದನೆಯೇ ಎಂಬ ಇಂಥ ದಿಟ್ಟೆಯರ ಸಮರ್ಥನೆಯನ್ನು ಒಪ್ಪಲೇಬೇಕಲ್ಲ?
ಶಿರಸಿ ತಾಲೂಕಿನ ಚಿಪಗಿ ಸೋಮನಳ್ಳಿಯ ಶೈಲಜಾ ಹೆಗಡೆ ಇಂಥ ಸ್ವಾಭಿಮಾನಿಗಳಲ್ಲಿ ಒಬ್ಬರು. ಅವರು ಮತ್ತವರ ತಂಗಿ ಅವಿಭಕ್ತ ಕುಟುಂಬದಲ್ಲಿದ್ದು ಕೆಲಸದವರನ್ನು ಅವಲಂಬಿಸದೆ ಉಳಿಕೆಯ ಜತೆಗೆ ಗಳಿಕೆಯನ್ನೂ ತೋರಿಸುತ್ತಾರೆ. ಮನೆಗೆಲಸ, ಕೊಟ್ಟಿಗೆ ಕೆಲಸ ನಿಭಾಯಿಸಿಕೊಂಡು ಹೋಗೋದು ಸಹಜ ಬಿಡಿ. ಆದರೆ, ಅದರ ಜತೆ ಏನಾದರೂ ಹೊಸತನ್ನು ಸಾಧಿಸೋದು ಹೆಚ್ಚುಗಾರಿಕೆ. ಅಂಥ ಹೆಚ್ಚುಗಾರಿಕೆ ಈ ಸೋದರಿಯರದ್ದು.
ವರ್ಷದ ಎಲ್ಲ ಸಮಯದಲ್ಲೂ ಕಾಲಕ್ಕೆ ಅನುಕೂಲವಾಗುವಂತೆ ಮನೆಯ ಅಂಗಳದಲ್ಲಿ ಬೀನ್ಸ್, ಬೆಂಡೆ, ನವಿಲುಕೋಸು, ಕ್ಯಾಲಿಫ್ಲವರ್, ಗಡ್ಡೆಕೋಸು, ಬಿಟ್ರೂಟ್, ಸೌತೆಕಾಯಿ, ವಿವಿಧ ರೀತಿಯ ಸೊಪ್ಪುಗಳು ಮುಂತಾದ ತರಕಾರಿಗಳನ್ನು ಬೆಳೆದುಕೊಳ್ಳುತ್ತಾರೆ. ಸಸಿಗಳನ್ನು ನೆಡುವಾಗ ಮಣ್ಣು ಹಾಕಿಕೊಡುವುದು ಮತ್ತು ಗೊಬ್ಬರ ಹಾಕುವ ಸಂದರ್ಭಗಳಲ್ಲಿ ಮಾತ್ರ ಮನೆಯ ಗಂಡಸರು ನೆರವಾಗುತ್ತಾರೆ. ಇವರ ಮನೆಯಲ್ಲಿ ಪೇಟೆಯಿಂದ ತರಕಾರಿ ತರುವುದು ಇಲ್ಲವೇ ಇಲ್ಲ ಎಂದರೆ ಉತ್ಪ್ರೇಕ್ಷೆ ಆಗಲಾರದು.
'ಹೊರಗೆ ಸಿಗುವ ರಾಸಾಯನಿಕ ಗೊಬ್ಬರ, ಔಷಧಿ ಬಳಸಿದ ತರಕಾರಿಗಳನ್ನು ಒಂದಕ್ಕೆ ಎರಡು ಬೆಲೆ ಕೊಟ್ಟು ತಂದು ಬೇಸರದಿಂದ ತಿನ್ನುವುದಕ್ಕಿಂತ ನಾವೇ ಬೆಳೆದುಕೊಳ್ಳುವ ತಾಜಾ ತರಕಾರಿಗಳನ್ನು ಉಪಯೋಗಿಸಿ ಮಾಡಿದ ಅಡುಗೆ ಉಣ್ಣುವಾಗ ಸಿಗುವ ಖುಷಿಯೇ ಬೇರೆ. ಇಲ್ಲಿ ರುಚಿಯೂ ಜಾಸ್ತಿ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಅಲ್ಲದೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಅದರಲ್ಲೂ ಸ್ವಲ್ಪ ಹೊಗಳಿಕೆ ಸಿಕ್ಕಿದಾಗಂತೂ ಉತ್ಸಾಹ ಇಮ್ಮಡಿಸುತ್ತದೆ' ಎನ್ನುತ್ತಾರೆ ಶೈಲಜಾ. ಏನೇ ಹೇಳಿ ಗೃಹಿಣಿಯರು ಇಂಥ ಹವ್ಯಾಸ ಬೆಳೆಸಿಕೊಂಡರೆ ಎಲ್ಲಾ ರೀತಿಯಿಂದಲೂ ಅನುಕೂಲವೇ ಅಲ್ಲವೇ?

-   ಕಲ್ಪನಾ ಹೆಗಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.