ಹೊಗೆಮನೆ
ನೆರೆಯ ಕೇರಳದಲ್ಲಿ ರಬ್ಬರ್ ಬೆಳೆ ಹೇರಳ. ಅದರ ನಂಟು ಗಡಿಪ್ರದೇಶವಾದ ಅವಿಭಜಿತ...

ನೆರೆಯ ಕೇರಳದಲ್ಲಿ ರಬ್ಬರ್ ಬೆಳೆ ಹೇರಳ. ಅದರ ನಂಟು ಗಡಿಪ್ರದೇಶವಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನೂ ಬಿಟ್ಟಿಲ್ಲ. ಇಲ್ಲಿನ ಕೃಷಿಕರು ರಬ್ಬರ್ ಬೆಳೆಯುತ್ತಾ ವರುಷಗಳೇ ಕಳೆದವು. ಬೆಳೆಗಾರರನ್ನು ಕಾಡುತ್ತಿದ್ದ ಸಮಸ್ಯೆಗಳಲ್ಲಿ ರಬ್ಬರ್ ಹಾಳೆಯನ್ನು ಒಣಗಿಸುವುದು ಕೂಡಾ ಒಂದು.
ಇದಕ್ಕೆ ಪರಿಹಾರವೆಂಬಂತೆ ರೂಪುಗೊಂಡಿರುವುದು ಸ್ಮೋಕ್ ಹೌಸ್ ಅರ್ಥಾತ್ ಹೊಗೆಮನೆ. ಅತ್ಯಂತ ಕಡಿಮೆ ಸಮಯದಲ್ಲಿ, ಕಡಿಮೆ ಇಂಧನ ಉಪಯೋಗಿಸಿ ರಬ್ಬರ್ ಹಾಳೆಯನ್ನು ಉತ್ತಮ ಗುಣಮಟ್ಟದಲ್ಲಿರುವಂತೆ ಒಣಗಿಸುವ ಸಾಂಪ್ರದಾಯಿಕ ತಂತ್ರಜ್ಞಾನ.
ಕೇರಳದಲ್ಲಿ ವಿಫುಲವಾಗಿ ಕಾಣಸಿಗುವ ಸ್ಮೋಕ್‌ಹೌಸ್ ರೂಪುರೇಷೆಯನ್ನು ಇಲ್ಲಿನ ಪರಿಸರಕ್ಕೆ ಒಪ್ಪುವ ರೀತಿಯಲ್ಲಿ ಬದಲಿಸಿ ಯಶಸ್ವಿಯಾಗಿದ್ದಾರೆ ಬಳ್ಪದ ಕೃಷಿಕ ಬಿ. ವಿಶ್ವೇಶ್ವರ ಭಟ್.
ಸಿಮೆಂಟ್ ಬ್ಲಾಕ್ ಬಳಕೆ
ಸ್ಮೋಕ್ ಹೌಸ್ ಬಗ್ಗೆ ಮೊದಲು ಮಾಹಿತಿ ನೀಡಿದ್ದು ರಬ್ಬರ್ ಮಂಡಳಿಯವರು. ಅದನ್ನು ಅನುಸರಿಸಿ ಮನೆಯಲ್ಲಿ ಸಿಮೆಂಟ್ ಬ್ಲಾಕ್ ಬಳಸಿ ನಿರ್ಮಿಸಿದೆ. ಆದರೆ, ಸಿಮೆಂಟ್ ಬ್ಲಾಕ್‌ಗಳು ಶಾಖ ಬಿಟ್ಟುಕೊಡುವುದರಿಂದ ಹಾಳೆಗಳು ಒಣಗಲು 3- 4 ದಿನ ತಗುಲುತ್ತಿತ್ತು. ಮತ್ತು ಇಂಧನವಾಗಿದ್ದ ಕಟ್ಟಿಗೆಯ ಅಪವ್ಯಯವಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಸ್ಮೋಕ್‌ಹೌಸ್‌ನ ಗಾತ್ರ ಮತ್ತು ವಿನ್ಯಾಸದಲ್ಲಿ ಬದಲಾವಣೆ ಮಾಡಿ ಈಗ ಸುಸಜ್ಜಿತವಾಗಿ ನಿರ್ಮಿಸಿದೆ ಎನ್ನುತ್ತಾರೆ ಭಟ್ಟರು.
ಇಂದು ಸುಳ್ಯ, ಪುತ್ತೂರು ಪರಿಸರದಲ್ಲಿ 30ಕ್ಕೂ ಹೆಚ್ಚು ಕಡೆ ಹೊಗೆಮನೆಗಳನ್ನು ಭಟ್ಟರು ನಿರ್ಮಿಸಿಕೊಟ್ಟಿದ್ದಾರೆ. ಕೃಷಿ ಮೇಳಗಳಲ್ಲೂ ಇದರ ಮಾದರಿ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.
ಹೀಗಿದೆ ಹೊಗೆಮನೆ...
ಸುಮಾರು 138 ಇಂಚು ಎತ್ತರವಿರುವ ಇದು ಸಣ್ಣ ಕೋಣೆಯ ಆಕೃತಿಯಲ್ಲಿದೆ. ಹೊರ ಮೈಯನ್ನು ಸಂಪೂರ್ಣವಾಗಿ ಮಣ್ಣಿನ ಮೌಲ್ಡೆಡ್ ಇಟ್ಟಿಗೆ ಬಳಸಿ ಕಟ್ಟಲಾಗಿದೆ. ಒಂದು ಪಾರ್ಶ್ವದ ತಳಭಾಗದಲ್ಲಿ ಶಾಖಕ್ಕಾಗಿ ಬೆಂಕಿ ಹಾಕುವ ವ್ಯವಸ್ಥೆಯಿದೆ. ನೆಲದಿಂದ ತಳಭಾಗದಲ್ಲಿ 32 ಇಂಚು ಎತ್ತರದವರೆಗೆ ಒಳಭಾಗದಲ್ಲಿ ಮರಳು ಹಾಗೂ ಅದರ ಮೇಲೆ ಬೆಣಚು ಕಲ್ಲುಗಳನ್ನು ಜೋಡಿಸಿ ಶಾಖ ಕಾಪಿಡುವಂತೆ ನಿರ್ಮಿಸಿದ್ದಾರೆ. ಆಮ್ಲಜನಕ ಸುಲಭ ಸಂಚಾರಕ್ಕಾಗಿ 11 x 2 ಇಂಚಿನಷ್ಟು ಎಡೆಯಿದೆ. ರಬ್ಬರ್ ಹಾಳೆ ನೇತು ಹಾಕಲು ಪ್ರತಿ 8 ಇಂಚು ಅಂತರದಲ್ಲಿ ಕಬ್ಬಿಣದ ಸಲಾಕೆಗಳನ್ನು ಸಮಾನಾಂತರವಾಗಿ ಅಳವಡಿದ್ದಾರೆ. ಮೇಲ್ಭಾಗವನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಹೆಚ್ಚಿನ ಹೊಗೆ ಹೊರಹೋಗುವಂತೆ ಸಣ್ಣ ಕಿಂಡಿಯಂಥ ರಚನೆ ಇದೆ.
ದುಬಾರಿಯೇನಲ್ಲ...
ನಿರ್ಮಾಣಕ್ಕೆ ಬೇಕಿರುವುದು ಕೇವಲ ಒಂದು ದಿವಸ. ತಗುಲುವ ವೆಚ್ಚ ರು. 23,000ದಿಂದ 28,000. ಇದನ್ನು ನಿರ್ಮಿಸಿಕೊಡಲು ತುಂಬಾ ಬೇಡಿಕೆ ಇದೆ ಎನ್ನುವ ಭಟ್ಟರು (ಮೊ. 09731568221, 08257- 278228) ಉದ್ಯಮ ಎಂದು ಇದನ್ನು ಪರಿಗಣಿಸದೆ ತಾವೇ ನಿರ್ಮಿಸುತ್ತೇವೆ ಅನ್ನುವವರಿಗೆ ಸಂಪೂರ್ಣವಾಗಿ ಇದರ ಮಾಹಿತಿ ನೀಡುತ್ತಾರೆ ಮತ್ತು ಅಗತ್ಯವಿದ್ದಲ್ಲಿ ನಿರ್ಮಾಣ ಸಮಯದಲ್ಲಿ ಸಲಹೆ ಸೂಚನೆ ನೀಡುತ್ತಿರುವುದು ಗಮನಾರ್ಹ.
ಉತ್ತಮ ಗ್ರೇಡಿಂಗ್
ನಾನು ಬಳಸುತ್ತಿದ್ದ ಸಾಂಪ್ರದಾಯಿಕ ಶೈಲಿಯ ಸ್ಮೋಕ್‌ಹೌಸ್‌ಗಳಲ್ಲಿ ಹಾಳೆ ಒಣಗಲು 3- 4 ದಿನಗಳು ಬೇಕಾಗುತಿತ್ತು ಹಾಗೂ ತುಂಬಾ ಕಟ್ಟಿಗೆಯ ಅವಶ್ಯವಾಗಿತ್ತು. ಈ ಮಾದರಿಯಲ್ಲಿ 2 ಕಟ್ಟಿಗೆ ತುಂಡುಗಳು ಸಾಕಾಗುತ್ತಿವೆ ಹಾಗೂ ಮೊದಲಿಗಿಂತಲೂ ಉತ್ತಮ ಗ್ರೇಡಿಂಗ್ ದೊರೆಯುತ್ತಿದೆ.
- ತಾರಾನಾಥ, ಕೃಷಿಕ
- ಶ್ರೀವತ್ಸ ಎಸ್. ಬಾಯಾರು
(ಮೊ. 9743721274)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


