ಕಲ್ಲಂಗಡಿ

ಹೊಟ್ಟೆ ತಣ್ಣಗಾಗಿಸುವ ಹಣ್ಣು ಬೆಳೆಯಲು ಸಕಾಲ
ರಾಜ್ಯದ ನೀರಾವರಿ ಬೆಳೆಗಳಲ್ಲಿ ಕಲ್ಲಂಗಡಿ ಪ್ರಮುಖ. ಉಷ್ಣವಲಯದ ಬೆಳೆಯಾದ ಇದನ್ನು ರಾಜ್ಯದ ಹಲವು ಪ್ರದೇಶಗಳಲ್ಲಿ ಬೆಳೆಯುತ್ತಾರೆ. ಬೇಸಿಗೆಯಲ್ಲಿ ಬೇಡಿಕೆ ಹೆಚ್ಚಾಗುವುದರಿಂದ ಕಲ್ಲಂಗಡಿ ಬೆಳೆಯಲು ಪ್ರಶಸ್ತ ಕಾಲವಿದು.
ಬೆಳೆಯುವ ವಿಧಾನ
ಕಲ್ಲಂಗಡಿ ಬೀಜ ಊರುವುದಕ್ಕಿಂತ ಪೂರ್ವದಲ್ಲಿ ಭೂಮಿಯನ್ನು ಎರಡ್ಮೂರು ಬಾರಿ ಚೆನ್ನಾಗಿ ಹರಗಿ ಹದ ಮಾಡಿರಬೇಕು. 2.5 ಮೀಟರ್ ಅಂತರದಲ್ಲಿ ಸಾಲು ಮಾಡಬೇಕು. ಬಳಿಕ 1 ಮೀಟರ್ ಅಂತರದಲ್ಲಿ ಪಾತಿ ಮಾಡಬೇಕು. ಅದಕ್ಕೆ ಅಗತ್ಯಕ್ಕನುಗುಣವಾಗಿ ಗೊಬ್ಬರ ಹಾಕಿ ನೀರು ಹಾಯಿಸಬೇಕು. ನಂತರ ಪ್ರತಿ ಗುಣಿಯಲ್ಲಿ 4- 5 ಬೀಜ ಹಾಕಬೇಕು. ಹೀಗೆ ಆಗಾಗ ನೀರು, ಗೊಬ್ಬರ ಹಾಕುತ್ತಾ ಆರೈಕೆ ಮಾಡಬೇಕು. ಬಿತ್ತಿದ ಒಂದು ತಿಂಗಳ ನಂತರ ಚಿಗುರನ್ನು ಚಿವುಟಬೇಕು. ಇದರಿಂದ ಬಳ್ಳಿ ಮತ್ತಷ್ಟು ಕವಲುಗಳಾಗಿ ಹಬ್ಬಲು ಅನುಕೂಲವಾಗುತ್ತದೆ. ಬಿತ್ತನೆ ಮಾಡಿದ ಸರಾಸರಿ ಮೂರು ತಿಂಗಳಿಗೆ ಫಸಲು ಕೈಗೆ ಬರುತ್ತದೆ. ಹೆಕ್ಟೇರ್‌ಗೆ ಒಂದೂವರೆ ಕೆಜಿಯಷ್ಟು ಕಲ್ಲಂಗಡಿ ಬೀಜ ಬೇಕಾಗುತ್ತದೆ. ನವೆಂಬರ್‌ನಿಂದ ಫೆಬ್ರವರಿವರೆಗೆ ಕಲ್ಲಂಗಡಿ ಬೀಜ ನಾಟಿಗೆ ಅತ್ಯಂತ ಪ್ರಶಸ್ತ ಕಾಲ. ಚೆನ್ನಾಗಿ ನಿರ್ವಹಣೆ ಮಾಡಿದರೆ ಹೆಕ್ಟೇರ್‌ಗೆ ಏನಿಲ್ಲವೆಂದರೂ 25ರಿಂದ 30 ಟನ್ ಮತ್ತು ಹೈಬ್ರಿಡ್ ತಳಿಗಳಾದರೆ 45ರಿಂದ 50 ಟನ್‌ಗಳವರೆಗೆ ಇಳುವರಿ ಪಡೆಯಬಹುದು.
ತಳಿಗಳು
ಆರ್ಕಾ ಮಾಣಿಕ್, ಪಿಕೆಎಂ- 1, ಸುಗರ್ ಬೇಬಿ, ಆರ್ಕಾ ರಾಜಹಂಸ, ಆರ್ಕಾ ಜ್ಯೋತಿ, ಎಫ್- 1 ಹೈಬ್ರಿಡ್ ಮತ್ತು ವಿಶಾಲ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ತಳಿಗಳಾಗಿವೆ.
ಮಣ್ಣು
ಸಾಮಾನ್ಯವಾಗಿ ಎಲ್ಲ ನಮೂನೆಯ ಮಣ್ಣಲ್ಲಿ ಕಲ್ಲಂಗಡಿ ಬೆಳೆಯುತ್ತದೆ. ನೀರು ಬಸಿದು ಹೋಗುವಂಥ ಮರಳು ಮಿಶ್ರಿತ ಮಣ್ಣು ಇದ್ದರೆ ಕಲ್ಲಂಗಡಿ ಹುಲುಸಾಗಿ ಬೆಳೆಯುತ್ತದೆ. 6.5ರಿಂದ 7.5 ರಸಸಾರವಿರಬೇಕು.
ರೋಗಗಳು
ಚಿಬ್ಬು ರೋಗ, ಕಾಂಡಕೊಳೆ ರೋಗ, ಎಲೆ ಸೊರಗು ರೋಗ ಬರಬಹುದು. ಹಣ್ಣು ನೊಣ, ಎಲೆ ಸುರಂಗ ಹುಳು ಪ್ರಮುಖವಾಗಿ ಕಾಡುವ ಕೀಟಗಳು.
ಹೆಚ್ಚಿನ ಮಾಹಿತಿಗೆ ಬೆಂಗಳೂರು ತೋಟಗಾರಿಕೆ ಇಲಾಖೆಯಲ್ಲಿ ವಿಷಯ ತಜ್ಞೆಯಾಗಿರುವ ಚೈತ್ರಾ (080-22742103) ಅವರನ್ನು ಸಂಪರ್ಕಿಸಬಹುದು.
-ಮಹೇಶ್ ಅರಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


