ಮಾಲಂಗಿ ಬತ್ತ

'ಬೆಳೆಗಳನ್ನು ಬರೀ ಲಾಭಕ್ಕಾಗಿ ಬೆಳೆಯುವುದಲ್ಲ. ಬೆಳೆಗಳ ಮೂಲಕವೇ ರೈತರಿಗೆ ಏನಾದರೂ ಸಂದೇಶ ನೀಡಬೇಕು' ಅನ್ನೋದು ಈ ರೈತನ ಹಂಬಲ.
ಕೊಳ್ಳೇಗಾಲ ತಾಲ್ಲೂಕು ಮಾಲಂಗಿಯ ರೈತ ರೇಚಣ್ಣ ಎಂಬವರೇ ಇಂಥದ್ದೊಂದು ಉದ್ದೇಶವಿಟ್ಟುಕೊಂಡು ಕೃಷಿ ಮಾಡುತ್ತಿದ್ದಾರೆ. ಅವರು ಕಳೆದ ಹತ್ತಾರು ವರ್ಷಗಳಿಂದಲೂ ಸಾವಯವ ಕೃಷಿ ಪದ್ಧತಿಯಡಿ ಬೇಸಾಯ ಮಾಡುತ್ತಿದ್ದಾರೆ. ತಮ್ಮ 6 ಎಕರೆ ಜಮೀನಿನ ಪೈಕಿ ಮೂರು ಎಕರೆ ಜಮೀನಿನಲ್ಲಿ ಬೇಸಾಯ. ಜಮೀನಿನಲ್ಲಿ ಒಂದೊಂದು ವರ್ಷವೂ ಉತ್ತಮ ರೀತಿಯ ಹಲವು ರೋಗ ನಿರೋಧಕ ಶಕ್ತಿ ಇರುವ ಮಿಶ್ರ ಬತ್ತದ 30ರಿಂದ 40 ಬಗೆಯ ಮಿಶ್ರ ತಳಿಗಳ ಬತ್ತದ ಬೆಳೆ ಬೆಳೆದು ಸುತ್ತಮುತ್ತಲಿನ ರೈತರ ಗಮನ ಸೆಳೆದಿದ್ದಾರೆ. ಇವರು 2013- 2014ನೇ ಸಾಲಿನಲ್ಲಿ ಕೇವಲ 1 ಎಕರೆ ಜಮೀನಿನಲ್ಲಿ ಮಾತ್ರ 28 ಬತ್ತದ ತಳಿ ಬೆಳೆದಿದ್ದಾರೆ! ಕಳೆದ ವರ್ಷ 60 ಬಗೆಯ ಬತ್ತದ ತಳಿ ಬೆಳೆದಿದ್ದ ಇವರು ಈ ಬಾರಿ 28 ತಳಿ ಮಾತ್ರ ಬೆಳೆದಿದ್ದಾರೆ. ಅದೂ ಸಾವಯವ ಪದ್ಧತಿಯಿಂದ ಎಂಬುದು ಗಮನಾರ್ಹ.
ಯಾವ್ಯಾವ ತಳಿ?
ರತ್ನಚೂಡಿ, ಚಿನ್ನಪೊನ್ನಿ, ಗಿಡ್ಡಗೌರಿ, ಸೇಲಂ ಸಣ್ಣ, ಚಂಪಾ, ಕರಿಗಜವಿಲೆ, ಸಷ್ಟಿಕಶಾಲೆ, ಗಂಧಶಾಲಿ, ಬಂಗಾರಚೂಡಿ, ಡಾಂಬರ್‌ಸಾಲಿ, ರಾಜಭೋಗ ಸೇರಿದಂತೆ ಒಟ್ಟು 28 ತಳಿಗಳು ಅವರ ಗದ್ದೆಯಲ್ಲಿ ನಳನಳಿಸುತ್ತಿವೆ.
ಬೀಜೋತ್ಪಾದನೆಗೆ ಮಿಶ್ರ ತಳಿ
ಮಾಲಂಗಿ ರೇಚಣ್ಣ ಅವರು ತಾವು ಬತ್ತ ಬೆಳೆಯುತ್ತಿರುವುದು ಲಾಭಕ್ಕಾಗಿ ಅಥವಾ ಮಾರಾಟ ಮಾಡುವುದಕ್ಕಲ್ಲ. ತಾವು ಬೆಳೆದಿರುವ ಒಂದೊಂದು ಬತ್ತದ ತಳಿಗೂ ರೋಗ ನಿರೋಧಕ ಶಕ್ತಿ ಇದೆ ಎಂಬುದನ್ನು ಪರಿಚಯಿಸುವುದು ಅವರ ಉದ್ದೇಶ. ಆ ಮೂಲಕ ಸಾವಯವ ಬೇಸಾಯ, ಮಿಶ್ರ ತಳಿ ಬತ್ತ ಬೆಳೆಗೆ ಯುವ ಪೀಳಿಗೆ ಹಾಗೂ ಯುವ ರೈತರಲ್ಲಿ ಅರಿವು ಮೂಡಿಸುವ ಆಶಯ ಹೊಂದಿದ್ದಾರೆ. ಅಲ್ಲದೆ, ತಾವು ಬೆಳೆದ ತಳಿಯನ್ನು ಬೀಜೋತ್ಪಾದನೆಗೆ ಬಳಕೆ ಮಾಡುತ್ತಾರೆ. ಮತ್ತೊಂದು ಅಚ್ಚರಿ ಎಂದರೆ ಇವರು ಬೆಳೆದ ಬತ್ತದ ತಳಿಯ ಅಕ್ಕಿ ಬಲು ರುಚಿ.
ರೈತರಿಗೆ ಸ್ಫೂರ್ತಿ
ಮಾಲಂಗಿ ರೇಚಣ್ಣ ಅವರ ಮಿಶ್ರ ತಳಿಯ ಬತ್ತ ಬೆಳೆಗೆ ಕೆಲವು ಯುವ ರೈತರು ಹಾಗೂ ಹಿರಿಯ ರೈತರು ಆಸಕ್ತಿ ತೋರಿದ್ದಾರೆ. ಇವರ ಪದ್ಧತಿಯಡಿ ತಾಲೂಕಿನ ತೇರಂಬಳ್ಳಿಯ ಭೂಪತಿ ನಾಯ್ಡು, ಜಗದೀಶ, ಶಿವಸ್ವಾಮಿ, ಮಹದೇವ, ರೇವಣ್ಣಸ್ವಾಮಿ, ಎನ್. ಬಸಪ್ಪ, ಜವರನಾಯಕ, ಮಹದೇವಪ್ಪ, ನಟೇಶ, ಮಾಲಿಂಗಸ್ವಾಮಿ, ಎಸ್. ಮೂರ್ತಿ, ಸತೀಶ್, ಬಿ.ರವಿ, ಮಹದೇವ ಸೇರಿದಂತೆ ಹಲವು ರೈತರು ಮಾಲಂಗಿ ರೇಚಣ್ಣ ಅವರಿಂದ ಮಿಶ್ರತಳಿ ಬತ್ತದ ಬೀಜ ಖರೀದಿಸಿ ಬತ್ತ ಬೆಳೆಯುತ್ತಿದ್ದಾರೆ. ತಾಲೂಕಿನಾದ್ಯಂತ ಹಲವು ರೈತರಿಗೆ ರೇಚಣ್ಣ(ಮೊ. 9481321530) ಅವರು ಸ್ಫೂರ್ತಿಯಾಗಿದ್ದಾರೆ.
ಪ್ರಶಸ್ತಿಗಳ ಸರಮಾಲೆ
ರೇಚಣ್ಣ ಅವರಿಗೆ 2013ರಲ್ಲಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅಂತಾರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ- ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.
ಹನ್ನೆರಡು ವರ್ಷದಿಂದಲೂ ಮಿಶ್ರತಳಿಯ ಬತ್ತವನ್ನು ಸಾವಯವ ಕೃಷಿ ಪದ್ಧತಿಯಡಿ ಬೆಳೆಯುತ್ತಿದ್ದೇನೆ. ಪ್ರಸ್ತುತ ರಾಸಾಯನಿಕ ಬಳಸಿ ಬತ್ತ ಬೆಳೆಯುವ ಸಂಖ್ಯೆ ಶೇ. 90ರಷ್ಟಿರುವ ಪ್ರಸ್ತುತ ಸಂದರ್ಭ ಮನಗಂಡು ನಮ್ಮ ಕುಟುಂಬಕ್ಕಾದರೂ ವಿಷಮುಕ್ತ ಆಹಾರ ದೊರೆಯಲಿ ಎಂಬ ಕಾರಣಕ್ಕೆ ಮೊದಲು ನಮ್ಮ ಕುಟುಂಬಕ್ಕಾಗುವಷ್ಟು ಬತ್ತ ಬೆಳೆದೆ. ನಂತರದ ದಿನಗಳಲ್ಲಿ ಇತರೆ ರೈತರು ಬೀಜ ಉತ್ಪಾದನೆಗೆ, ಊಟಕ್ಕಾಗಿಯೂ ಬತ್ತ ಬೆಳೆಯುತ್ತಿದ್ದೇನೆ.
= ಮಾಲಂಗಿ ರೇಚಣ್ಣ
ಮಾದರಿ ಮನೆ
ರೇಚಣ್ಣ ಅವರು ತಮ್ಮ ಮನೆಯನ್ನು ರೈತರಿಗೆ ಮಾದರಿಯಾಗುವಂತೆ ಇರಿಸಿಕೊಂಡಿದ್ದಾರೆ. ಮನೆಗೆ ಬಳಸಿರುವ ಬಣ್ಣ, ಮನೆಯಲ್ಲಿ ಇಡಲಾಗಿರುವ ಸ್ವದೇಶಿ ವಸ್ತುಗಳು ಎಲ್ಲವೂ ಇವರ ರೈತಪ್ರೇಮಿ ಎಂಬುದನ್ನು ಸಾರಿ ಹೇಳುವಂತಿದೆ. ಇವರು ಮನೆಯ ಗೃಹ ಪ್ರವೇಶದಲ್ಲೂ ರೈತ ತತ್ವಗಳಡಿಯಲ್ಲಿ ಆಹ್ವಾನ ಪತ್ರಿಕೆ ಮುದ್ರಿಸಿ ಗಮನ ಸೆಳೆದಿದ್ದರು.
-ಎನ್. ನಾಗೇಂದ್ರಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


