ಹನಿ ಹನಿ ಕೂಡಿದರೆ ಮನಿ!
ನೀರು ಎಲ್ಲದಕ್ಕೂ ಎಲ್ಲರಿಗೂ ಅತ್ಯಮೂಲ್ಯ. ಮಳೆ ಇದ್ದರೆ ಬೆಳೆ, ಮಳೆ ಇಲ್ಲದಿದ್ದರೆ ನೀರಿಲ್ಲ...

ನೀರು ಎಲ್ಲದಕ್ಕೂ ಎಲ್ಲರಿಗೂ ಅತ್ಯಮೂಲ್ಯ. ಮಳೆ ಇದ್ದರೆ ಬೆಳೆ, ಮಳೆ ಇಲ್ಲದಿದ್ದರೆ ನೀರಿಲ್ಲ. ನೀರಿಲ್ಲದಿದ್ದರೆ ಬೆಳೆ ಹೇಗೆ? ಎಂದು ತಲೆ ಮೇಲೆ ಕೈ ಹೊತ್ತು ಕೂರುವ ರೈತರೇ ಹೆಚ್ಚು.
ಆದರೆ, ಇರುವ ಅಲ್ಪ ನೀರಿನಲ್ಲೇ ಕೆಲ ರೈತರು ಆಧುನಿಕ ಕೃಷಿ ಪದ್ಧತಿಯಲ್ಲೊಂದಾದ ಹನಿ ನೀರಾವರಿ ಅಳವಡಿಸಿಕೊಂಡು ಪ್ರತಿ ವರ್ಷವೂ ಉತ್ತಮ ಬೆಳೆ ತೆಗೆಯುತ್ತಾ ನೀರಾವರಿ ಪ್ರದೇಶವಲ್ಲದ ಭೂಮಿಯಲ್ಲೂ ಬೆಳೆ ತೆಗೆಯಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
ಹೌದು. ಬೆಳೆಗಾವಿ ಜಿಲ್ಲೆಯಲ್ಲೇ ತೀವ್ರ ಬರಪೀಡಿತ ಪ್ರದೇಶವಾದ ಅಥಣಿ ತಾಲೂಕಿನ ರೈತರು ತೋಟಗಾರಿಕೆ ಬೆಳೆಗಾಳಾದ ದ್ರಾಕ್ಷಿ, ದಾಳಿಂಬೆ, ಅರಿಶಿಣ, ಕಬ್ಬು ಸೇರಿದಂತೆ ಇತರೆ ತರಕಾರಿ ಬೆಳೆಗಳಿಗೆ ಡ್ರಿಪ್ ಅಳವಡಿಸಿ, ಬರಡು ಭೂಮಿಯಲ್ಲೇ ನಾಲ್ಕೈದು ವರ್ಷಗಳಿಂದ ಉತ್ತಮ ಬೆಳೆ ಬೆಳೆಯುತ್ತಿದ್ದಾರೆ.
ಮಳೆ ಆಧರಿಸಿ ಕೇವಲ ಜೋಳ, ಗೋವಿನಜೋಳ, ಸಜ್ಜೆ, ಶೇಂಗಾ ಮತ್ತಿತರ ಬೆಳೆಗಳನ್ನಷ್ಟೇ ಬೆಳೆಯುತ್ತಿದ್ದರಿಂದ ಅದು ಜೀವನ ನಿರ್ವಹಣೆಗೆ ಮಾತ್ರ ಸಾಕಾಗುತ್ತಿತ್ತು. ಆದರೀಗ ದ್ರಾಕ್ಷಿ, ದಾಳಿಂಬೆ ಸೇರಿದಂತೆ ಹೆಚ್ಚು ಆದಾಯ ತರುವ ಬೆಳೆಗಳನ್ನು ಬೆಳೆಯುತ್ತಿದ್ದು, ಅವರು ಆರ್ಥಿಕ ಸಬಲತೆ ಹೊಂದಲು ಸಹಕಾರಿಯಾಗಿದೆ.
ಹನಿ ನೀರಾವರಿಗೆ ಪ್ರೋತ್ಸಾಹ
ರೈತರು ಹನಿ ನೀರಾವರಿ ಅಳವಡಿಸಿ ಉತ್ತಮ ಬೆಳೆ ಬೆಳೆಯಲಿ ಎಂಬ ಉದ್ದೇಶ ಸರ್ಕಾರದ್ದು. ಪ್ರಸ್ತುತ ಸಹಾಯಧನವನ್ನು ಶೇ.90ಕ್ಕೆ ಏರಿಸಿದೆ. ಕೃಷಿ ಅಧಿಕಾರಿಗಳ ಮಾಹಿತಿ, ಸರ್ಕಾರದ ಸೌಲಭ್ಯದ ಸದುಪಯೋಗ ಪಡೆದು ಇನ್ನೂ ಹೆಚ್ಚಿನ ರೈತರು ಹನಿ ನೀರಾವರಿ ಅಳವಡಿಸಿಕೊಂಡು ಕೃಷಿ ಮಾಡಲು ಮುಂದಾಗಬೇಕಿದೆ.
1270 ಹೆಕ್ಟೇರ್ ಪ್ರದೇಶದಲ್ಲಿ ಡ್ರಿಪ್
ಅಥಣಿ ತಾಲೂಕಿನಲ್ಲಿ ಕಳೆದ ಸಾಲಿನ ಅಂತ್ಯಕ್ಕೆ 1270 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ, ದಾಳಿಂಬೆ ಸೇರಿದಂತೆ ಇತರೆ ಬೆಳೆಗಳಿಗಾಗಿ ರೈತರು ಸಹಾಯಧನ ಪಡೆದಿದ್ದಾರೆ. ಅಲ್ಲದೆ, ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಡ್ರಿಪ್ ಅಳವಡಿಸಿಕೊಳ್ಳಲು ರೈತರು ಮುಂದಾಗಿದ್ದಾರೆ. ಇದೇ ರೀತಿ ಎಲ್ಲ ರೈತರೂ ನೀರಿನ ಸದ್ಬಳಕೆ ಮಾಡಿಕೊಂಡು ಬೆಳೆ ತೆಗೆದರೆ ಅವರ ಬದುಕು ಬಂಗಾರ.
ಭಾಳ ಅನುಕೂಲ ಐತ್ರಿ...
ಮಾಮೂಲಿಯಾಗಿ ನೀರು ಹಾಯಿಸಿ 1 ಎಕರೆ ನೀರಾವರಿ ಮಾಡುವಲ್ಲಿ, ಹನಿ ನೀರಾವರಿ ಮೂಲಕ 2- 3 ಎಕರೆ ಜಮೀನಿಗೆ ನೀರುಣಿಸಬಹುದು. ಒಮ್ಮೆಲೆ ನೀರು ಹಾಯಿಸುವುದರಿಂದ 4-5 ದಿನದೊಳಗಾಗಿ ತೇವಾಂಶದ ಕೊರತೆಯಿಂದ ಬೆಳೆ ಬಾಡಲಾರಂಭಿಸುತ್ತದೆ. ಮತ್ತೆ ನೀರಿನ ತೊಂದರೆ ಎದುರಾಗುತ್ತದೆ. ಆದರೆ, ಹನಿ ನೀರಾವರಿ ಮೂಲಕ ನಿತ್ಯ 1ರಿಂದ 2 ಗಂಟೆ ನೀರು ಬಿಟ್ಟರೆ ಬೆಳೆಯ ಬುಡಕಷ್ಟೇ ಹನಿ ಹನಿಯಾಗಿ ಬಿದ್ದು ತೇವಾಂಶ ಕಾಪಾಡುತ್ತದೆ. ಅಲ್ಲದೆ, ಹನಿ ನೀರಾವರಿಯಲ್ಲಿ ಗೊಬ್ಬರವನ್ನು ಮಿಶ್ರಣ ಮಾಡಿ (ವೆಂಚುರಿ) ಮೂಲಕ ಬೆಳೆಗೆ ಸಿಂಪಡಿಸಲಾಗುತ್ತದೆ. ಇದರಿಂದ ಶೇ. 60ರಷ್ಟು ಗೊಬ್ಬರ ಉಳಿತಾಯವಾಗುತ್ತದೆ ಮತ್ತು ಕೆಲಸಗಾರರ ಸಮಸ್ಯೆಯೂ ಇರದು.
ಹನಿ ನೀರಾವರಿಯಲ್ಲಿ ಬೆಳೆಗೆ ಮಾತ್ರ ನೀರು ಪೂರೈಸುವುದರಿಂದ ಅಲ್ಲಿ ಮಾತ್ರ ಕಳೆ ಏಳುತ್ತದೆ. ಜಮೀನಿನಲ್ಲಿ ಹೆಚ್ಚಿನ ಪ್ರಮಾಣದ ಕಳೆ ತೆಗೆಯುವ ತೊಂದರೆಯೂ ಇಲ್ಲ. ಇದೇ ರೀತಿ ಇನ್ನೂ ಹೆಚ್ಚಿನ ಅನುಕೂಲತೆಗಳಿದ್ದು, ಎಲ್ಲ ರೈತರೂ ಹನಿ ನೀರಾವರಿ ಅಳವಡಿಸಿಕೊಂಡು ಉತ್ತಮ ಬೆಳೆ ತೆಗೆದರೆ ರಾಜ್ಯದ ಆರ್ಥಿಕ ಸ್ಥಿತಿ ಗಟ್ಟಿಗೊಳ್ಳಲು ಸಹಕಾರಿ ಎನ್ನುತ್ತಾರೆ ಎನ್ನುತ್ತಾರೆ ರೈತರು ಹಾಗೂ ಡ್ರಿಪ್ ಅಳವಡಿಕೆಯಲ್ಲಿ ಪರಿಣತರಾಗಿರುವ ಬಡಚಿ ಗ್ರಾಮದ ಕಲ್ಲಪ್ಪ ಬ. ಆಜೂರ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ, ಮೊ. 9945529601.
ಹನಿ ನೀರಾವರಿಯಿಂದ ಆಗುವ ಅನುಕೂಲತೆಗಳನ್ನು ರೈತರು ಮನಗಂಡಿದ್ದಾರೆ. ಅವರ ಬರಡು ಭೂಮಿಗಳು ಬೆಳೆಯಿಂದ ಕಂಗೊಳಿಸುತ್ತಿವೆ. ಸರ್ಕಾರವು ಸದ್ಯ ಹನಿ ನೀರಾವರಿಗೆ ಶೇ.90ರಷ್ಟು ಸಹಾಯಧನ ನೀಡುತ್ತಿದೆ. ಈ ಸೌಲಭ್ಯದ ಸದುಪಯೋಗ ಪಡೆದು ಹೆಚ್ಚಿನ ಬೆಳೆ ಬೆಳೆಯಲಿ ಎನ್ನುವುದೇ ನಮ್ಮ ಆಶಯ.
- ಎಂ.ಎಲ್. ಜನಮಟ್ಟಿ, ಅಥಣಿ ತಾಲೂಕು ತೋಟಗಾರಿಕೆ ಇಲಾಖೆ ಅಧಿಕಾರಿ
- ಮಹಾಂತೇಶ ಕುಳ್ಳೊಳ್ಳಿ
mantu97350@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


