ಪ್ರಶಾಂತ ಭೂಮಿ
ದೇಶದ ಬೆನ್ನೆಲುಬು ರೈತ. ಅದೇ ರೀತಿ ದೇಶದ ಗಡಿ ಕಾಯುವವರು ಸೈನಿಕರು. ಇದೇ ಕಾರಣಕ್ಕಾಗಿ...

ದೇಶದ ಬೆನ್ನೆಲುಬು ರೈತ. ಅದೇ ರೀತಿ ದೇಶದ ಗಡಿ ಕಾಯುವವರು ಸೈನಿಕರು. ಇದೇ ಕಾರಣಕ್ಕಾಗಿಯೇ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಎಂದರು. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೊಸವೀಡುವಿನ ಮಲ್ಲಿಕಾರ್ಜುನಪ್ಪ ಅವರ ಪುತ್ರ ಎಚ್.ಎಂ. ಪ್ರಶಾಂತ ಜೈ ಜವಾನ್ ಎನ್ನುವ ಬದಲು ಜೈ ಕಿಸಾನ್ ಎನ್ನುತ್ತಾ ಮಾದರಿಯಾಗಿದ್ದಾರೆ.
ಮೈಸೂರು ವಿವಿವಿಯಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ರಾಷ್ಟ್ರ ಭಾಷಾ ವಿಶಾರದ ಪದವಿ ಜೊತೆಗಿರಿಸಿಕೊಂಡಿದ್ದ ಪ್ರಶಾಂತ 2001ರಲ್ಲಿ ಭಾರತೀಯ ಸೇನೆಗೆ ಸೆಕ್ಷನ್ ಆಫೀಸರ್ ಆಗಿ ಆಯ್ಕೆಯಾದರು. ಸೇನೆ ಸೇರಬೇಕು, ಆ ಮೂಲಕ ದೇಶ ಸೇವೆ ಮಾಡಬೇಕು ಎಂಬುದು ಅವರ ಬಹುದಿನಗಳ ಕನಸು. ಇದೇ ಕಾರಣಕ್ಕಾಗಿ ಆರ್‌ಬಿವಿ ಓದಿ, ಹಿಂದಿಯ ಜ್ಞಾನ ಗಳಿಸಿದ್ದರು. ಆದರೆ, ಮಗ ಸೇನೆಗೆ ಸೇರುವ ವಿಷಯ ತಿಳಿದು ಅಪ್ಪ ಬಿಲ್‌ಕುಲ್ ಒಪ್ಪಲಿಲ್ಲ. 'ದೇಶ ಸೇವೆ ಮಾಡುವುದೂ ಒಂದೇ, ಭೂಮಿತಾಯಿ ಸೇವೆ ಮಾಡುವುದೂ ಒಂದೇ' ಎಂದರು.
ಭೂತಾಯಿ ಸೇವೆ
ಅಪ್ಪನ ಆಸೆಯಂತೆ ಭೂತಾಯಿಯ ಸೇವೆಗೆ ಮುಂದಾದರು ಪ್ರಶಾಂತ್. ಮಳವಳ್ಳಿ ತಾಲೂಕು ಸರಗೂರು ಬಳಿ ಮೂರೂವರೆ ಎಕರೆ ಜಮೀನಿನಲ್ಲಿ ಬಾಳೆ ಬೆಳೆದರು. ಪ್ರತಿಗೊನೆ ಸರಾಸರಿ 48 ಕೆ.ಜಿ. ತೂಗಿದವು. ನಂತರ ಪ್ರಶಾಂತ ಕೃಷಿ ಬಗ್ಗೆ ವಿಶೇಷ ಆಸಕ್ತಿ ತೋರಿ, ಹೈಟೆಕ್ ಫ್ಲೋರಿಕಲ್ಚರ್ ತರಬೇತಿ ಪಡೆದರು. ಡಾ. ಸುಕದ ಮೋಹನದಾಸ್, ಡಾ. ಬಾಲಕೃಷ್ಣ ನೆರವು ನೀಡಿದರು.
72 ಟನ್ ಅರಿಶಿನ
ಪ್ರಶಾಂತ ನಂತರ ಹೊಸವೀಡುವಿನಲ್ಲೇ ವ್ಯವಸಾಯ ಮಾಡಲು ಮುಂದಾದರು. ನೀರಿನ ಕೊರತೆಯ ನಡುವೆಯೂ ಒಂದೂವರೆ ಎಕರೆಯಲ್ಲಿ 72 ಟನ್ ಅರಿಶಿನ, ಅರ್ಧ ಎಕರೆಯಲ್ಲಿ 18 ಟನ್ ಕಲ್ಲಂಗಡಿ, ನೇಂದ್ರ ಬಾಳೆ ಬೆಳೆದರು. ಅದೇ ಸಂದರ್ಭದಲ್ಲಿ ಹುಸ್ಕೂರು ಗ್ರಾಮದ ರಾಜಶೇಖರಮೂರ್ತಿ ಕಲ್ಲಂಗಡಿ ಬೆಳೆದಿದ್ದರು. ಸಾಮಾನ್ಯವಾಗಿ ಕಲ್ಲಂಗಡಿ 22 ದಿನಗಳಿಗೆ ನಿಂಬೆ ಗಾತ್ರದ ಕಾಯಿ ಬರಬೇಕು. 37 ದಿನಗಳಿಗೆ ದೊಡ್ಡ ಗಾತ್ರದ ಕಾಯಿ ಬರಬೇಕು. ಆದರೆ, 30- 35 ದಿನಗಳಾದರೂ ಸರಿಯಾಗಿ ಕಲ್ಲಂಗಡಿ ಬಂದಿರಲಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿದ ಪ್ರಶಾಂತ ಗಿಡದ ಮಾದರಿಗಳನ್ನು ಸೂಕ್ಷ್ಮ ಜೀವಿಶಾಸ್ತ್ರಜ್ಞ ಹರೀಶ್‌ರಾವ್ ಅವರ ಬಳಿ ತೆಗೆದುಕೊಂಡು ಹೋದರು. ಅವರು ಡಾ. ಕೊಟ್ಟೂರ ಎಂಬವರ ಬಳಿಗೆ ಶಿಫಾರಸು ಮಾಡಿದರು. ಅಂತಿಮವಾಗಿ ಎಲ್ಲವೂ ಸುಖಾಂತ್ಯವಾಗಿ ರಾಜಶೇಖರಮೂರ್ತಿ ಅವರ ಜಮೀನಿನಲ್ಲಿ 49 ಟನ್ ಕಲ್ಲಂಗಡಿ ಇಳುವರಿ ಬಂದು, ಕೈತುಂಬಾ ಕಾಸು ಬಂತು.
ಬೆಲೆ ಕುಸಿದರೂ ಲಾಭ
ಪ್ರಶಾಂತ ತಾವು ಕಲಿತ ಕೃಷಿ ಪರಿಹಾರಗಳನ್ನು ಇತರರಿಗೂ ದಾಟಿಸುತ್ತಾರೆ. ಹಗಿನವಾಳು ರವಿ ಎಂಬವರ ಟೊಮೇಟೊ ಬೆಳೆಯ ಸಮಸ್ಯೆಯನ್ನು ಇವರು ನಿವಾರಿಸಿದರು. ಅವರಿಗೆ ಉತ್ತಮ ಫಸಲು ಬಂತು. ಆದರೆ, ಮಾರುಕಟ್ಟೆಯಲ್ಲಿ ದರ ಕುಸಿಯಿತು. ಇಷ್ಟಾದರೂ ರವಿ ಅವರಿಗೆ ರು. 28 ಸಾವಿರ ಲಾಭ ಬಂದಿತ್ತು. ಹಂಡುವಿನಹಳ್ಳಿಯ ಮಹದೇವಸ್ವಾಮಿ ಜಮೀನಿನಲ್ಲಿ ಉತ್ತಮ ಕಬ್ಬು ಮತ್ತು ಬಾಳೆ ಬರುವಂತೆ ಪ್ರಶಾಂತ ಸಲಹೆ ಮಾಡಿದ್ದಾರೆ. ಪ್ರಶಾಂತ ಅವರ ಈ ಕಾರ್ಯಕ್ಕೆ ಮೈಸೂರಿನ ಡಾ. ವಸಂತಕುಮಾರ್ ತಿಮಕಾಪುರ ಸಾಥ್ ನೀಡುತ್ತಿದ್ದಾರೆ. ಪ್ರಶಾಂತ ಅವರ ಸಲಹೆ- ಸೂಚನೆ ಪಡೆದು, ನಂಜನಗೂಡು, ಎಚ್.ಡಿ. ಕೋಟೆ ಹಾಗೂ ಮೈಸೂರು ತಾಲೂಕುಗಳ ನೂರಾರು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ಇಳುವರಿಯನ್ನು ಶೇ.20- 30ರಷ್ಟು ಹೆಚ್ಚಿಸಿಕೊಂಡಿದ್ದಾರೆ.
ಆಸಕ್ತ ರೈತರನ್ನು ಬನವಾಸಿಯ ಡಾ. ಅಬ್ದುಲ್ ರವೂಫ್ ಅವರ ಜಮೀನಿಗೆ ಕರೆದುಕೊಂಡು, ಅವರು ಯಾವ ರೀತಿ ಕೃಷಿ ನಡೆಸುತ್ತಿದ್ದಾರೆ ಎಂಬುದನ್ನೂ ತೋರಿಸಿದ್ದಾರೆ. ಇತ್ತೀಚೆಗೆ ಹುಸ್ಕೂರು ಗ್ರಾಮದ ರಾಜಶೇಖರ ಮೂರ್ತಿ ಹಾಗೂ ಶಾಂಭುಮೂರ್ತಿ ಅವರ ಜಮೀನಲ್ಲೂ ಪ್ರಾತ್ಯಕ್ಷಿಕೆ ನಡೆಸಿದ್ದಾರೆ. ಪ್ರಶಾಂತ ಅವರ ಸಂಪರ್ಕಕ್ಕೆ ಮೊ. 9740128896.
- ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


