ಕಾರ್ಮಿಕರ ಕೊರತೆಗೆ ಸಹಕಾರಿ ಕೃಷಿಯ ಉತ್ತರ

ಸಹಕಾರಿ ಕೃಷಿ ಎಂಬುದು ಈ ದಿನಗಳಲ್ಲಿ ಬರೀ ಸಿದ್ಧಾಂತವಾಗಿದೆ. ಆದರೆ ತುರುವೇಕೆರೆ ತಾಲೂಕು ದಬ್ಬೆಗಟ್ಟದ ಇಬ್ಬರು ಕೃಷಿಕರು ಸದ್ದಿಲ್ಲದೆ ಸಹಕಾರಿ ಕೃಷಿ ಮಾಡುತ್ತಾ ಯಶ ಕಂಡಿದ್ದಾರೆ. ಅಕ್ಕ- ಪಕ್ಕದಲ್ಲಿ ಜಮೀನುಳ್ಳ ಇವರು ಉಳುಮೆ, ಕಟಾವು, ಕಳೆ ತೆಗೆಯುವುದು, ನಾಟಿ, ಮಾರುಕಟ್ಟೆಗೆ ಸರಕು ಒಯ್ಯುವುದು, ಹೈನುಗಾರಿಕೆ ಮುಂತಾದ ಕೆಲಸಗಳನ್ನು ಒಟ್ಟಿಗೆ ಮಾಡುತ್ತಾ ಕಾರ್ಮಿಕರ ಕೊರತೆಗೆ ಪರಿಹಾರ ಕಂಡುಕೊಂಡಿದ್ದಾರೆ. ಅವರೇ ನಾಗರಾಜು ಮತ್ತು ಚಲುವೇಗೌಡ. ಇವರಿಗೆ ಅನುಕ್ರಮವಾಗಿ ಏಳೂವರೆ ಎಕರೆ ಹಾಗೂ ಐದು ಎಕರೆ ಜಮೀನಿದೆ. ಅಡಕೆ, ತೆಂಗು, ಸಪೋಟ, ಬಾಳೆ, ಹಲಸು, ರಾಗಿ ಮುಂತಾದ ಬೆಳೆಗಳನ್ನು ಹಾಕುತ್ತಾರೆ.
ನಾಗರಾಜು ಅವರಿಗೆ ಹನ್ನೆರಡು ಜಾನುವಾರುಗಳಿವೆ. ತೋಟದಲ್ಲೇ ಮನೆಯಿದ್ದು, ಸದಾ ಕೆಲಸದಲ್ಲಿ ನಿರತ. ಇವರು ತಮ್ಮ ಒಂದೂಮುಕ್ಕಾಲು ಎಕರೆ ತೆಂಗಿನ ತೋಟದಲ್ಲಿ ಸದಾ ಒಂದಿಲ್ಲೊಂದು ದ್ವಿದಳ ಧಾನ್ಯಗಳನ್ನು ಮಿಶ್ರ ಬೆಳೆಯಾಗಿ ಹಾಕುತ್ತಲೇ ಇರುತ್ತಾರೆ. ಮುಂಗಾರಿನಲ್ಲಿ ಹೆಸರುಕಾಳು, ಮಳೆಗಾಲದಲ್ಲಿ ಅವರೆ, ತೊಗರಿ ಹೀಗೆ. ಇದು ತೋಟಕ್ಕೆ ಮುಚ್ಚಿಗೆಯಾಗುತ್ತದೆ, ಫಲವತ್ತತೆಯನ್ನು ಹೆಚ್ಚಿಸುತ್ತದೆ. 2011ರಲ್ಲಿ 18 ಕ್ವಿಂಟಲ್ ಹೆಸರುಕಾಳು ಸಿಕ್ಕಿದ್ದರೆ 2012ರಲ್ಲಿ ಮಳೆಯ ಅಭಾವದ ನಡುವೆಯೂ 6 ಕ್ವಿಂಟಲ್ ಇಳುವರಿ ಬಂದಿತ್ತು. ತೋಟದ ತುಂಬಾ ಟ್ರಂಚ್‌ಗಳನ್ನು ಮಾಡಿ ಕೃಷಿ ತ್ಯಾಜ್ಯಗಳನ್ನು ತುಂಬಿದ್ದಾರೆ. ಇದು ನೀರು ಹಿಡಿದಿಡಲು ಸಹಕಾರಿಯಾಗಿದೆ. ಜೊತೆಗೆ ಗೊಬ್ಬರವನ್ನೂ ಪೂರೈಸುತ್ತದೆ.
ಇವರಿಗೆ ಎರಡು ಕೊಟ್ಟಿಗೆಗಳಿದ್ದು, ಎರಡಕ್ಕೂ ಅಟ್ಯಾಚ್ಡ್ ಗಂಜಲದ ಗುಂಡಿಗಳಿವೆ. ಸುಮಾರು 25 ಬಿಂದಿಗೆ ಗಂಜಲ ಹಿಡಿಸುವ ಸಾಮರ್ಥ್ಯವಿದೆ. ಸಂಗ್ರಹವಾದ ಗಂಜಲವನ್ನು ನೇರವಾಗಿ ತೆಂಗು, ಬಾಳೆ, ಅಡಕೆ ಮರಗಳಿಗೆ ತಲಾ ಒಂದು ಬಿಂದಿಗೆಯಂತೆ ಹಾಕುತ್ತಾರೆ. ಬುಡದಿಂದ ತುಸು ದೂರಕ್ಕೆ ಹಾಕುವುದರಿಂದ ಯಾವುದೇ ತೊಂದರೆ ಇಲ್ಲವೆನ್ನುವುದು ಇವರ ಅನುಭವ. ತುಂಬಾ ವರ್ಷಗಳಿಂದ ಈ ಕ್ರಮವನ್ನು ಅನುಸರಿಸುತ್ತಿದ್ದಾರೆ. ಗಿಡಗಳಿಗೆ ಯಾವುದೇ ತೊಂದರೆಯಾಗಿಲ್ಲ. ಬದಲಾಗಿ ಗಂಜಲದ ಸಾರ ಪಡೆದ ಗಿಡಗಳು ಸೊಂಪಾಗಿ ಬೆಳೆದು ಉತ್ತಮ ಫಸಲನ್ನೇ ಕೊಡುತ್ತಿವೆ. ಬಾಳೆ ತೋಟ ಮನೆಯಿಂದ ಸ್ವಲ್ಪ ದೂರವಿದೆ. ಅಲ್ಲಿಗೆ ಗಂಜಲ ಹೊತ್ತೊಯ್ಯಲು ಒಂದು ಅಡ್ಡೆಯನ್ನು ಮಾಡಿಕೊಂಡಿದ್ದಾರೆ. ಅದರ ಮೇಲೆ ಎರಡು ಬಿಂದಿಗೆ ಹಾಕಿಕೊಂಡು ಗಂಜಲ ಸಾಗಿಸುತ್ತಾರೆ.
ಅಲ್ಲದೆ ಗಂಜಲದ ಯೂರಿಯಾ ಮಾಡುವುದು ಇವರ ಮತ್ತೊಂದು ಪದ್ಧತಿ. ಒಂದು ತೊಟ್ಟಿಗೆ ಮರಳು ತುಂಬಿ ಅದಕ್ಕೆ ಗಂಜಲ ಸುರಿಯುತ್ತಾರೆ. ಮರಳು ಪೂರಾ ನೆನೆಯುವಷ್ಟು ಗಂಜಲ ಹಾಕುತ್ತಾರೆ. 20 ದಿವಸಗಳ ನಂತರ ಗಂಜಲವನ್ನು ಹೀರಿಕೊಂಡ ಮರಳು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅದನ್ನು ತೆಗೆದು ನೆರಳಲ್ಲಿ ಒಣಗಿಸಿ ರಾಸಾಯನಿಕ ಯೂರಿಯಾ ಬಳಸಿದಂತೆಯೇ ಬಳಸುತ್ತಾರೆ.
ಕಳೆದ ವರ್ಷ ಸರ್ಕಾರದ ವತಿಯಿಂದ ತಮ್ಮೂರಿನ ಕೆರೆ ಹೂಳು ತೆಗೆಯುವಾಗ ಇಬ್ಬರೂ ನೂರಾರು ಲೋಡ್ ಹೂಳನ್ನು ತಂದು ತಮ್ಮ ಹೊಲದ ಪಕ್ಕ ಎರಡು ಗುಡ್ಡೆ ಹಾಕಿಕೊಂಡಿದ್ದಾರೆ. ತಂದ ಕೂಡಲೇ ಬಳಸದೆ ಅದನ್ನು ಕಳಿಯಲು ಬಿಟ್ಟಿದ್ದಾರೆ. ಅವಕಾಶವಾದಾಗಲೆಲ್ಲ ಹೂಳಿನ ಗುಡ್ಡೆಗೆ ಗಂಜಲ ಸುರಿಯುತ್ತಾರೆ. ಗಂಜಲವನ್ನು ಹೀರಿದ ಹೂಳು ಟೀ ಪುಡಿಯಂತೆ ಮೃದುವಾಗುತ್ತಿದೆ. ಹೀಗೆ ಕಳಿತ ಹೂಳನ್ನು ಅಗತ್ಯವಿರುವಾಗ ತೋಟಕ್ಕೆ ಹಾಕುತ್ತಾರೆ.
ಚಲುವೇಗೌಡರು ಒಂಭತ್ತು ಮೇಕೆಗಳನ್ನು ಸಾಕಿಕೊಂಡಿದ್ದಾರೆ. ಇವರ ಮಗಳು ನಾಗರತ್ನರಿಗೆ ಹೈನುಗಾರಿಕೆಯಲ್ಲಿ ತುಂಬಾ ಆಸಕ್ತಿ. ಹತ್ತು ಹಸುಗಳನ್ನು ಸಾಕಿಕೊಂಡಿದ್ದು, ವ್ಯವಸ್ಥಿತವಾಗಿ ಸ್ವಂತ ಡೈರಿಯನ್ನೇ ನಡೆಸುತ್ತಿದ್ದಾರೆ. ಪ್ರತಿದಿನ 40 ಲೀಟರ್‌ನಷ್ಟು ಹಾಲು ಉತ್ಪಾದಿಸುತ್ತಾರೆ.
ಈ ಇಬ್ಬರೂ ಸಹ ಕಡಿಮೆ ನೀರಿನಲ್ಲೇ ತೋಟ ಹಾಗೂ ಆಹಾರ ಬೆಳೆಗಳನ್ನು ಬೆಳೆಯುತ್ತಾ ನೆಮ್ಮದಿಯಿಂದಿದ್ದಾರೆ. ಆರಂಭ ಆರು ದಿವಸ ಎನ್ನುವ ಚಲುವೇಗೌಡರು ಕಾಲಕ್ಕೆ ಸರಿಯಾಗಿ ಯಾವ ರೀತಿ ವ್ಯವಸಾಯ ಮಾಡಬೇಕೆಂಬುದನ್ನು ಅರಿತು ಮಾಡಿದರೆ ಅಷ್ಟೇ ಸಾಕು, ಕೆಲವರು ನೀರಿಲ್ಲ, ಕರೆಂಟಿಲ್ಲ ಎಂಬ ಕಾರಣಗಳನೊಡ್ಡಿ ಏನೂ ಮಾಡುವುದಿಲ್ಲ. ಆದರೆ ಅದನು ನಾವು ಒಪ್ಪುವುದಿಲ್ಲ ಎನ್ನುತ್ತಾರೆ ಈ ಇಬ್ಬರು.
- ಮಲ್ಲಿಕಾರ್ಜುನ ಹೊಸಪಾಳ್ಯ
krushikaimara@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


