ಪ್ಯಾಡಿ ಕೇರ್

ಭತ್ತದ ಸಸಿಗಳನ್ನು (ಮೊಳಕೆ ಭರಿಸುವುದು) ಸಿದ್ಧ ಮಾಡುವುದಕ್ಕೂ ಕೌಶಲ್ಯ ಬೇಕು. ಮೊಳಕೆ ಭರಿಸುವ ವಿಧಾನದಲ್ಲಿ ಮಲೆನಾಡಿನ ಕೃಷಿಕರು ಸಾಂಪ್ರದಾಯಿಕ ಪದ್ಧತಿ ಮುಂದುವರಿಸಿರುವುದು ವಿಶೇಷ.
ಅಗೆ ಸಿದ್ಧಮಾಡುವ ಕೆಲಸ ಒಂದೆರಡು ದಿನಗಳಲ್ಲಿ ಮುಗಿಯದು. ಅತ್ತ ಗದ್ದೆಯಲ್ಲಿ ಬೀಜದ ಭತ್ತ ಹಾಕುವ ಗದ್ದೆಯನ್ನು ವ್ಯವಸ್ಥಿತವಾಗಿ ಸಿದ್ಧಮಾಡಿಕೊಂಡಿರಬೇಕು. ಗದ್ದೆಯಲ್ಲಿ ನೀರು ನಿಲ್ಲದಂತೆ ಪುಟ್ಟ ಕಾಲುವೆ ಮಾಡಿ ಮಡಿ ಮಾಡಿಕೊಂಡು ಗದ್ದೆ ಸಿದ್ಧಮಾಡಬೇಕು.
ವಿಭಿನ್ನ ವಿಧಾನ
ಇತ್ತ ಮನೆಯಲ್ಲಿ ನಾಟಿ ಮಾಡುವ ಯೋಗ್ಯ ಭತ್ತದ ಬೀಜವನ್ನು ನೀರಿನಲ್ಲಿ ನೆನೆ ಹಾಕಬೇಕು. ಈ ವಿಧಾನದಲ್ಲಿ ರೈತರು ವಿಭಿನ್ನ ವಿಧಾನ ಅನುಸರಿಸುತ್ತಾರೆ. ಕೆಲವರು ಭತ್ತವನ್ನು 24 ಗಂಟೆ ನೀರಿನಲ್ಲಿ ನೆನೆಸಿಡುತ್ತಾರೆ. ಮತ್ತೆ ಕೆಲವರು ಮೂವತ್ತಾರು ತಾಸು ನೀರಿನಲ್ಲಿ ಬತ್ತದ ಬೀಜ ನೆನೆಸಿಡುವ ಕ್ರಮ ಅನುಸರಿಸುತ್ತಾರೆ.
ಆಮೇಲೆ ನೆನೆ ಹಾಕಿದ ಬೀಜದ ಭತ್ತ ತೊಳೆದು, ನೀರು ಬಸಿದು ಹೋಗುವ ಪಾತ್ರೆಯಲ್ಲಿ ತೋಡಿ ಹಾಕಬೇಕು. ಹೆಡಗೆಗೆ ಬಾಳೆಎಲೆ ಹಾಕಿಕೊಂಡರೆ ಬೀಜದ ಬತ್ತ ನೆಲಕ್ಕೆ ಬಿದ್ದು ಹಾನಿಯಾಗದಂತೆ ತಡೆಯಬಹುದು ಎನ್ನುತ್ತಾರೆ ಕೃಷಿಕರು. ನಂತರ ಅದಕ್ಕೆ ಸಾಕಷ್ಟು ಪ್ರಮಾಣದ ಭಾರದ ವಸ್ತುಗಳನ್ನು (ಕಾವು ಬರುವ ಕಾರಣಕ್ಕಾಗಿ) ಇರಿಸಿ, ಎರಡು ದಿನ ಕಾಯಬೇಕು. ಪಾತ್ರೆಯಲ್ಲಿ ತೋಡಿ ಹಾಕಿದ ಮರುದಿನ ಉಗುರು ಬೆಚ್ಚಗಿನ ಬಿಸಿ ನೀರನ್ನು ಹಾಯಿಸಿದರೆ ಬೀಜದ ಭತ್ತವು ಉತ್ತಮವಾಗಿ ಮೊಳಕೆ ಬರುತ್ತದೆ ಎಂದು ಅನುಭವಸ್ಥ ಕೃಷಿಕರ ಮಾತು.
ಮೊಳಕೆ ಬಂದ ಬೀಜಗಳನ್ನು ಸಿದ್ಧ ಮಾಡಿದ ಗದ್ದೆಯಲ್ಲಿ ಸೋಕುವ ಮುನ್ನ ವ್ಯವಸ್ಥಿತವಾಗಿ ಬಿಡಿಸಿಕೊಳ್ಳಬೇಕು. ಹೀಗೆ ಮಾಡಿಕೊಳ್ಳದಿದ್ದರೆ ಮೊಳಕೆ ಬೀಜಗಳು ಗುಂಪು- ಗುಂಪಾಗಿಯೇ (ಜಡೆ ರೂಪದಲ್ಲಿ) ಇರುತ್ತದೆ. ಅದನ್ನು ಹಾಗೆಯೇ ಬಿತ್ತಿದರೂ ಸಸಿ ಕೀಳುವಾಗ ಸಮಸ್ಯೆ ಆಗುತ್ತದೆ. ಮೊಳಕೆ ಬೀಜಗಳನ್ನು ಬಹಳ ನಾಜೂಕಿನಿಂದ ಬಿಡಿಸಿಕೊಂಡು, ಮೊದಲೇ ಮಡಿ ಮಾಡಿಕೊಂಡ ಗದ್ದೆಯಲ್ಲಿ ಒಂದು ಪ್ರಮಾಣದಲ್ಲಿ (ಬೀಜವನ್ನು ದಪ್ಪಗೆ ಹಾಕಿದರೂ ಕಷ್ಟ) ನಾಜೂಕಾಗಿ ಬಿತ್ತಬೇಕು. ಆ ಕಾರ್ಯಕ್ಕೆ ಅಗೆ ಸೋಕುವುದು ಅಂತ ಕರೆಯುವ ಪದ್ಧತಿ. ಈ ದಿನದಲ್ಲಿಯೂ ಚಾಲ್ತಿಯಲ್ಲಿದೆ.
ಹಕ್ಕಿ ಕಾಟ
ಬೀಜ ಬಿತ್ತಿದ ಒಂದೆರಡು ದಿನ ಹಕ್ಕಿಗಳ ಕಾಟ ಇರುತ್ತೆ. ಈ ಹಕ್ಕಿಗಳನ್ನು ಓಡಿಸುವ ಬಗ್ಗೆಯೂ ಚಿಂತಿಸಬೇಕು. ಆ ಕೆಲಸವನ್ನು ಚಿಣ್ಣರು ಸಂತೋಷದಿಂದ ನಿಭಾಯಿಸುತ್ತಿದ್ದರು. ಆದರೆ, ಈ ದಿನಗಳಲ್ಲಿ ಹಕ್ಕಿಗಳನ್ನು ಕಾಯುವ ಕೆಲಸ ಬಹುತೇಕ ಕಣ್ಮರೆಯಾಗಿದೆ. ನಾಟಿ ಬೀಜದ ಸಸಿಯನ್ನು ತಿಂಗಳದ ನಂತರ (ಕೆಲವು ತಳಿಯ ಬೀಜದ ಸಸಿಯನ್ನು 20- 22 ದಿನಗಳಿಗೆ ಕೀಳುವುದು ಇದೆ) ಕಿತ್ತು ನಾಟಿ ಮಾಡುತ್ತಾರೆ. ಈ ಅಗೆ ಹಾಕುವ ಪ್ರತಿಯೊಂದು ಹಂತವು ಸೂಕ್ಷ್ಮ ಆಗಿರುವುದರಿಂದ ಆ ಕೆಲಸ ಮಾಡುವವರಿಗೂ ಕೌಶಲ್ಯವೂ ಬೇಕು. <
- ಗಣಪತಿ ಹಾಸ್ಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


