ದೊಡ್ಡ ತಪಸ್ವಿ

ಇತ್ತೀಚೆಗೆ ಚಿಕ್ಕ ಹಿಡುವಳಿದಾರರೇ ಹೆಚ್ಚಾಗುತ್ತಿದ್ದಾರೆ. ಪುಟ್ಟ ಜಮೀನಲ್ಲೇ ಹೆಚ್ಚು ಲಾಭ ಗಳಿಸೋದು ಹೇಗೆ ಎಂಬುದು ಬಹಳಷ್ಟು ರೈತರಿಗೆ ಗೊತ್ತಿಲ್ಲ. ಕಾರಣ ಕೃಷಿಗೆ ಹತ್ತಾರು ಎಕರೆ ಜಮೀನು ಇರಬೇಕು, ದೊಡ್ಡ ಪ್ರಮಾಣದಲ್ಲಿ ಬಂಡವಾಳ ತೊಡಗಿಸಿದರೆ ಲಾಭದಾಯಕ ಎಂಬ ಮನಸ್ಥಿತಿಯುಳ್ಳವರು ಹೆಚ್ಚುತ್ತಿದ್ದಾರೆ. ಆದರೆ, ಇಲ್ಲೊಬ್ಬರು ಕೇವಲ ಎರಡು ಕಾಲು ಎಕರೆ ಜಮೀನಲ್ಲಿ ವರ್ಷಕ್ಕೆ 10 ಲಕ್ಷ ನಿವ್ವಳ ಆದಾಯ ಗಳಿಸುತ್ತಿದ್ದಾರೆ!
ಇಂಥದ್ದೊಂದು ಅಪರೂಪದ ಸಾಧನೆ ಮಾಡಿದವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತಪಸ್ಸಿಹಳ್ಳಿ ಗ್ರಾಮದ ಎಚ್. ಸದಾನಂದ.
ಸಾಧನೆಯ ಹಾದಿ
ಸದಾನಂದರ ಯಶಸ್ಸಿನ ಹಿಂದೆ ಒಂದು ಕತೆ ಇದೆ. ಅವರು ಓದಿದ್ದು ಕೇವಲ ಎಸ್ಸೆಸ್ಸೆಲ್ಸಿ. 20 ವರ್ಷಗಳ ಹಿಂದೆ ಬೆಂಗಳೂರಿನ ಯಲಹಂಕದ ಫ್ಯಾಕ್ಟರಿಯೊಂದರಲ್ಲಿ ಮೆಷಿನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ತಿಂಗಳಿಗೆ ರು. 4 ಸಾವಿರ ಪಗಾರ. ಆದರೆ, ಅದರಲ್ಲಿ ಅವರಿಗೆ ತೃಪ್ತಿ ಇರಲಿಲ್ಲ. ಇನ್ನೊಬ್ಬರ ಕೈಕೆಳಗೆ ಇನ್ನೆಷ್ಟು ದಿನ ಹೀಗೆ ದುಡಿಯಬೇಕು ಎಂಬ ಭಾವ. ತಾನೇಕೆ ಕೃಷಿಯಲ್ಲಿ ತೊಡಗಿಸಿಕೊಳ್ಳಬಾರದು ಎಂದು ಆಲೋಚಿಸಿದರು. ಕಡೆಗೊಮ್ಮೆ ಗಟ್ಟಿ ನಿರ್ಧಾರ ಮಾಡಿ ಕೆಲಸಕ್ಕೆ ರಾಜೀನಾಮೆ ಕೊಟ್ಟುಬಂದರು. ಆಗ ಸಹೋದ್ಯೋಗಿಗಳು ಕೆಲಸ ಬಿಟ್ಟು ಹೋಗಬ್ಯಾಡ ಅಂದರು, ಕೃಷಿಯಲ್ಲಿ ಲಾಭವಿಲ್ಲ ಎಂದು ಬುದ್ಧಿಮಾತು ಹೇಳಿದರು. ಅದಕ್ಕೆ ಸದಾನಂದ ಕಿವಿಗೊಡಲಿಲ್ಲ. ಆದದ್ದಾಗಲಿ ಎಂದು ಕೊನೆಗೂ ತಮ್ಮ ಹಠ ಸಾಧಿಸಿಬಿಟ್ಟರು. ತಮ್ಮ ಎರಡು ಕಾಲು ಎಕರೆ ತುಂಡು ಜಮೀನಲ್ಲಿ ಕೃಷಿ ಕೈಂಕರ್ಯ ಶುರುಹಚ್ಚಿಕೊಂಡರು. ಆರಂಭದಲ್ಲಿ ಅಷ್ಟೇನು ಲಾಭ ಬರಲಿಲ್ಲ. 8 ವರ್ಷಗಳ ಹಿಂದೆ ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡರು. ಆಗ ಸದಾನಂದರ ಖದರ್ರೇ ಬದಲಾಯಿತು.
ಈಗ ಅವರ ತೋಟವೇ ಒಂದು ಪ್ರಯೋಗಾಲಯ. ಹಲವು ಪ್ರಯೋಗ ನಡೆಸಿ ಯಶಸ್ಸು ಕಂಡರು ಸದಾನಂದ. ಸದಾನಂದರಿಗೆ ಬೆನ್ನೆಲುಬಾಗಿ ಅವರ ಪತ್ನಿ ಅಶ್ವತ್ಥಮ್ಮ, ಮಗ ರಘು ಎಲ್ಎಲ್ಬಿ ಓದಿದರೂ ತೋಟದಲ್ಲಿ ಅಪ್ಪನಿಗೆ ಸಹಾಯ ಮಾಡುತ್ತಾರೆ. ಈಗ ಇವರ ಕೃಷಿಯ ಪರಿ ನೋಡಿ ಫ್ಯಾಕ್ಟರಿಯ ನೌಕರರೂ ಕೆಲಸ ಬಿಟ್ಟು ಉತ್ತಮ ಮಾರ್ಗ ಕಂಡುಕೊಂಡೆ ಅನ್ನುತ್ತಿದ್ದಾರೆ. ಅಷ್ಟೇ ಅಲ್ಲ, ಅವರ ಫ್ಯಾಕ್ಟರಿ ಮ್ಯಾನೇಜರ್ ಕೂಡ ತೋಟಕ್ಕೆ ಖುದ್ದು ಭೇಟಿ ನೀಡಿ ಸದಾನಂದರ ಸಾಹಸಕ್ಕೆ ಶಹಭಾಷ್ಗಿರಿ ನೀಡಿದ್ದಾರೆ.
ಏನೇನಿದೆ?
ತೋಟದಲ್ಲಿ ಗುಲಾಬಿಯೇ ಮುಖ್ಯ ಬೆಳೆ. ಚರಿಷ್ಮಾ ಬಟನ್ಸ್ ರೋಸ್ ಅನ್ನು 15 ಗುಂಟೆ ಜಾಗದಲ್ಲಿ ಹಾಕಿದ್ದಾರೆ. ನಿತ್ಯ 40 ಕೆಜಿ ಇಳುವರಿ. ಕೆಜಿಗೆ ರು. 50ನಂತೆ ಮಾರಾಟ. ಇದು ವರ್ಷದಲ್ಲಿ 10 ತಿಂಗಳು ಹೂವು ಕೊಡುತ್ತದೆ. ಅದೇ ರೀತಿ ತಾಜ್ಮಹಲ್ ತಳಿಯ ಗುಲಾಬಿಯನ್ನು 10 ಗುಂಟೆ ಜಾಗದ ಪಾಲಿಹೌಸ್ನಲ್ಲಿ ಬೆಳೆದಿದ್ದಾರೆ. ದಿನಕ್ಕೆ 800 ಹೂವುಗಳು ಬಿಡುತ್ತವೆ. ಒಂದು ಹೂವಿಗೆ 4ರಿಂದ 12 ರವರೆಗೆ ಮಾರಾಟವಾಗುತ್ತದೆ.
ಇನ್ನು ಅಡಕೆ, ತೆಂಗು, ಮಾವು, ಸೇಬು, ಪಪ್ಪಾಯಿ, ನಿಂಬೆ, ಚಕೋತಾ, ಹಲಸು, ನುಗ್ಗೆ, ಸಪೋಟ, ಶುಂಠಿ, ಬಾಳೆ, ಬೀನ್ಸ್, ಹಿರೇಕಾಯಿ, ಸೀಬೆ, ಸೀತಾಫಲ, ಟೀಕ್, ಕ್ಯಾಪ್ಸಿಕಂ, ಈರುಳ್ಳಿ ಬೆಳ್ಳುಳ್ಳಿ, ಸೊಪ್ಪು, ಕೊತ್ತಂಬರಿ, ಅಜೋಲಾ ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹಸುಗಳಿಗಾಗಿ 4 ಗುಂಟೆ ಜಾಗದಲ್ಲಿ ನೆಪಿಯಾರ್ ಜಾತಿಯ ಹುಲ್ಲನ್ನು ಬೆಳೆಯುತ್ತಾರೆ.
ಸಾವಯವ ವಿಧಾನ
4 ಹಸುಗಳಿವೆ. ಅವುಗಳಿಂದ ನಿತ್ಯ 60 ಲೀಟರ್ ಸಿಗುತ್ತದೆ. ಅದರಿಂದ ತಿಂಗಳಿಗೆ ನಿವ್ವಳ ರು. 25 ಸಾವಿರ ಆದಾಯ ಗಳಿಸುತ್ತಾರೆ. 200 ಗಿರಿರಾಜ ಕೋಳಿಗಳಿವೆ. 4 ರ್ಯಾಂಬುಲೆಟ್ ಕುರಿಗಳು, ಹೊಂಡ ನಿರ್ಮಿಸಿ ಅದರಲ್ಲಿ 400 ಮೀನುಗಳನ್ನು ಬಿಟ್ಟಿದ್ದಾರೆ. ಎರೆಹುಳು ಗೊಬ್ಬರ ತಯಾರಿಸುತ್ತಾರೆ. ಗೋಬರ್ ಗ್ಯಾಸ್ ಘಟಕವೂ ಇದೆ. ಶೇ.90ರಷ್ಟು ಸಾವಯವ ವಿಧಾನ ಅನುಸರಿಸುತ್ತಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಸದಾನಂದ ಅವರನ್ನು ಸಂಪರ್ಕಿಸಲು ಮೊ. 9241602789 ಕರೆ ಮಾಡಬಹುದು.
ಪ್ರಶಸ್ತಿಗಳ ಸರದಾರ!
ಸದಾನಂದ ಅವರ ಸಾಧನೆ ರಾಜ್ಯವನ್ನೂ ದಾಟಿ ದೇಶದ ರಾಜಧಾನಿಯನ್ನು ಮುಟ್ಟಿದೆ. ಇತ್ತೀಚೆಗೆ ದೆಹಲಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಸದಾನಂದರ ಸಮಗ್ರ ಕೃಷಿ ಸಾಧನೆಗೆ 'ಬಾಬು ಜಗಜೀವನರಾಂ ಕಿಸಾನ್ ರಾಷ್ಟ್ರೀಯ ಪುರಸ್ಕಾರ' ನೀಡಿ ಗೌರವಿಸಿದರು. ಅಲ್ಲದೆ, ಹಾರ್ವೆಸ್ಟ್ ಆಫ್ ಹೋಪ್, ಐಸಿಎಆರ್ನಿಂದ ಪ್ರಗತಿಪರ ರೈತ, ಎಂ.ಎಸ್. ಸ್ವಾಮಿನಾಥನ್ ಫೌಂಡೇಷನ್ ರಾಷ್ಟ್ರೀಯ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇವರು ಬೆಂಗಳೂರಿನ ಜಿಕೆವಿಕೆಗೆ ಕೃಷಿ ಸಲಹೆಗಾರರೂ ಹೌದು.
40 ದೇಶಗಳ ಪ್ರತಿನಿಧಿಗಳು ಭೇಟಿ
ಸದಾನಂದರ ತೋಟಕ್ಕೆ 40ಕ್ಕೂ ಅಧಿಕ ದೇಶಗಳ ಜನರು ಇಲ್ಲಿವರೆಗೆ ಭೇಟಿ ನೀಡಿದ್ದಾರೆ. ಅವರಲ್ಲಿ ಹಲವರು ಕೃಷಿ ವಿಜ್ಞಾನಿಗಳು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ತೋಟಕ್ಕೆ ಭೇಟಿ ನೀಡಿ ಸದಾನಂದರ ಸಾಧನೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
- ಮಹೇಶ್ ಅರಳಿ
mahesharali85@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


