ಸಾವಯವ ದಂಪತಿ

'ಸಾವಯವ ಕೃಷಿಯಿಂದ ನಮಗೆ ತುಂಬಾ ಅನುಕೂಲ ಆಯ್ತು. ಎಷ್ಟೋ ಖರ್ಚು ಉಳಿತಾಯ ಆದಂಗಾಯ್ತು. ಈ ಪದ್ಧತಿ ಅಳವಡಿಸಿಕೊಂಡ ಮೇಲೆ ಒಂಚೂರು ದುಡ್ಡು ನೋಡ್ತಾ ಇದ್ದೀವಿ...'
ಇದು ಮಧುಗಿರಿ ತಾಲೂಕು ಕಮ್ಮನಕೋಟೆಯ ನಾಗಭೂಷಣ್- ಸವಿತಾ ದಂಪತಿ ಮಾತು. ತರಕಾರಿಯನ್ನು ವಾಣಿಜ್ಯ ಬೆಳೆಯಾಗಿಸಿಕೊಂಡಿರುವ ಇವರಿಗೆ ಸಾವಯವ ಕೃಷಿ ತುಸು ನೆಮ್ಮದಿ ತಂದೆ. ಎರೆಹುಳು ಘಟಕ, ಬಯೋಡೈಜೆಸ್ಟರ್ ಘಟಕ, ಸಸ್ಯಜನ್ಯ ಕೀಟನಾಶಕ ಮುಂತಾದ ಸಾವಯವ ವಿಧಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಎರೆಗೊಬ್ಬರ ಮಣಿಗೆ ಫಲವತ್ತತೆ ಕೊಟ್ಟರೆ, ಬಯೋಡೈಜೆಸ್ಟರ್ ಬೆಳವಣಿಗೆಗೆ ಅಗತ್ಯ ಪೋಷಕಾಂಶ ಪೂರೈಸುತ್ತಿದೆ. ಸಸ್ಯಜನ್ಯ ಕೀಟನಾಶಕವು ಕೀಟ-ರೋಗ ನಿಯಂತ್ರಣಕ್ಕೆ ಸಹಕಾರಿಯಾಗಿದೆ.
ನಾಗಭೂಷಣ್ ಬೆಂಗಳೂರಿನಲ್ಲಿ ಖಾಸಗಿ ಕೆಲಸದಲ್ಲಿದ್ದವರು. ಮೂರು ವರ್ಷ ಹಿಂದೆ ಅನಿವಾರ್ಯವಾಗಿ ಊರಿಗೆ ವಾಪಸಾಗಿ ವ್ಯವಸಾಯಕ್ಕೆ ಕೈಹಾಕಿದರು. ಮೂರುವರೆ ಎಕರೆ ನೀರಾವರಿ ಹಾಗೂ ಏಳೂವರೆ ಎಕರೆ ಖುಷ್ಕಿ ಜಮೀನಿದೆ. ತೆಂಗಿನ ನಡುವೆ ಮಿಶ್ರ ಬೆಳೆಯಾಗಿ ತರಕಾರಿ ಬೆಳೆದುಕೊಳ್ಳುತ್ತಾರೆ. ಮುಖ್ಯ ತರಕಾರಿಗಳೆಂದರೆ ಮೆಣಸಿನಕಾಯಿ, ಟೊಮೆಟೋ, ಹುರುಳಿ, ಬದನೆ.
ಇಪ್ಪತ್ತು ಅಡಿ ಉದ್ದ, ಎಂಟು ಅಡಿ ಅಗಲ ಹಾಗೂ ಎರಡೂವರೆ ಅಡಿ ಎತ್ತರದ ಜೋಡಿ ಎರೆತೊಟ್ಟಿ ನಿರ್ಮಿಸಿಕೊಂಡಿದ್ದು, ಈಗಾಗಲೇ ಇಪ್ಪತ್ತು ಕ್ವಿಂಟಲ್ ಗೊಬ್ಬರ ಉತ್ಪಾದನೆಯಾಗಿದೆ. ಮೆಣಸಿನಕಾಯಿಗೆ ಸಂಪೂರ್ಣ ಅದನ್ನೇ ಹಾಕಿದ್ದಾರೆ. 2011ರಲ್ಲಿ ರಾಸಾಯನಿಕ ಗೊಬ್ಬರ ಬಳಸಿ ಮೆಣಸಿನಕಾಯಿ ಬೆಳೆದಿದ್ದಾಗ 25 ಸಾವಿರ ಆದಾಯ ಲಭ್ಯವಾಗಿತ್ತು. ಆದರೆ, 2012ರಲ್ಲಿ ಸಾವಯವ ವಿಧಾನದಿಂದ 40 ಸಾವಿರಕ್ಕೂ ಹೆಚ್ಚು ಆದಾಯ ಬಂದಿದೆ. ಅಷ್ಟೇ ಜಮೀನು, ಅದೇ ಬೀಜ, ಆದ್ರೆ ಇಳುವರಿ ಮಾತ್ರ ಜಾಸ್ತಿ! ಇದಕ್ಕೆ ಕಾರಣ ಎರೆಗೊಬ್ಬರ ಹಾಗೂ ಬಯೋಡೈಜೆಸ್ಟರ್ ಬಳಕೆ ಎಂಬುದು ನಾಗಭೂಷಣ್‌ರ ವಿವರಣೆ.
ಸಾವಯವ ಗೊಬ್ಬರದ ಬಳಕೆಯಿಂದ ಮೆಣಸಿನಗಿಡಗಳ ಆಯಸ್ಸು ಹೆಚ್ಚಾಗಿದೆ. ರಾಸಾಯನಿಕ ಬಳಸುವಾಗ ಏಳೆಂಟು ತಿಂಗಳಿಗೆಲ್ಲಾ ಗಿಡಗಳು ಬರಡಾಗುತ್ತಿದ್ದವು, ಆದರೆ, ಈ ವರ್ಷ 12 ತಿಂಗಳಾದರೂ ಗಿಡಗಳು ಹಸಿರಾಗಿದ್ದು ಕಾಯಿ ಬರುತ್ತಲೇ ಇದೆ. ಇಷ್ಟು ಮೆಣಸಿನಕಾಯಿ ಬೆಳೆಯಲು ಮುಂಚೆ ಆರು ಸಾವಿರ ಮೌಲ್ಯದ ರಸಗೊಬ್ಬರ ತರಬೇಕಿತ್ತು. ಈಗ ಅಷ್ಟೂ ಉಳಿತಾಯವಾದಂತಾಗಿದೆ. ಗಿಡಗಳ ಆಯಸ್ಸು ಹೆಚ್ಚಿದೆ. ಇಳುವರಿ ಹೆಚ್ಚಾಗಿದೆ, ಖರ್ಚು ಕಡಿಮೆಯಾಗಿದೆ, ಈ ಲಾಭಗಳ ಜೊತೆಗೆ ಆಗಿರುವ ಮತ್ತೊಂದು ಲಾಭ ನೀರಿನ ಉಳಿತಾಯ. ಸಾವಯವ ಗೊಬ್ಬರಗಳನ್ನು ಕೊಡುತ್ತಿರುವುದರಿಂದ ಮಣ್ಣಿನಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಚ್ಚಾಗಿದೆ. ಮುಂಚೆ ವಾರಕ್ಕೆ ಮೂರು ಸಲ ನೀರು ಹಾಯಿಸುತ್ತಿದ್ದರೆ ಈಗ ಒಂದು ಹದ ಸಾಕಾಗಿದೆ. ಅಂರ್ತಜಲ ಕುಸಿತ, ವಿದ್ಯುತ್ ಅಭಾವದ ಈ ದಿನಗಳಲ್ಲಿ ನೀರಿನ ಉಳಿತಾಯವಂತೂ ವರದಾನವೇ ಸೈ ಎಂಬುದು ಇವರ ಅಭಿಮತ.
ಇನ್ನು ಬಯೋಡೈಜೆಸ್ಟರ್ ಕಷಾಯವನ್ನು ನೀರಿನ ಜೊತೆ ಮಿಶ್ರ ಮಾಡಿ ಕೊಡುವುದರಿಂದ ಬೆಳವಣಿಗೆ ಉತ್ತಮವಾಗಿದೆ. ಕೀಟ-ರೋಗಗಳ ಹಾವಳಿಯೂ ಕಡಿಮೆಯಾಗುತ್ತಿದೆ. ತೊಟ್ಟಿಗೆ ಸಗಣಿ, ಸೊಪ್ಪು, ಗರಿ, ಕಾಂಗ್ರೆಸ್ ಗಿಡಗಳನ್ನು ತುಂಬಿ ಕೊಳವೆ ಬಾವಿಯ ಪೈಪ್‌ಅನ್ನು ನೇರವಾಗಿ ತೊಟ್ಟಿಗೆ ಸಂಪರ್ಕಗೊಳಿಸಿ ನೀರು ಹರಿಸಿದ್ದಾರೆ. ಸೊಪ್ಪು ಚೆನ್ನಾಗಿ ಕಳಿತ ನಂತರ ಕಷಾಯ ಬಳಸಲು ಪ್ರಾರಂಭಿಸಿದ್ದಾರೆ. ಕಳೆದ ವರ್ಷ ಟೊಮೆಟೋಗೆ ಬೂದಿರೋಗ ಬಂದಾಗ ಮಜ್ಜಿಗೆಯನ್ನು ಒಂದು ಮಣ್ಣಿನ ಮಡಕೆಯಲ್ಲಿ ನೆನೆಹಾಕಿ ನಾಲ್ಕು ದಿವಸ ಬಿಟ್ಟರು. ಹುಳಿ ಬಂದ ನಂತರ ನೀರನ್ನು ಮಿಶ್ರ ಮಾಡಿ ಸ್ಪ್ರೇ ಮಾಡಿದರು. ರೋಗ ಹತೋಟಿಗೆ ಬಂತು. ಬದನೆಗೆ ಕಾಯಿ ಕೊರೆಯುವ ಹುಳುಬಾಧೆ ಕಾಣಿಸಿಕೊಂಡಾಗ ತಲಾ ಅರ್ಧ ಕೆಜಿ ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿಯನ್ನು ಚೆನ್ನಾಗಿ ಕುಟ್ಟಿ ಪೇಸ್ಟ್ ಮಾಡಿಕೊಂಡು ಒಂದು ಮಡಕೆಗೆ ಹಾಕಿ ಒಂದು ಲೀಟರ್‌ನಷ್ಟು ನೀರು ಹಾಕಿದರು. ಒಂದು ರಾತ್ರಿ ಕೊಳೆ ಹಾಕಿ ಬೆಳಗ್ಗೆ ಸೋಸಿಕೊಂಡು ಅದಕ್ಕೆ ಸ್ವಲ್ಪ ಬಟ್ಟೆಸೋಪಿನ ನೀರನ್ನು ಮಿಶ್ರ ಮಾಡಿ 20 ಲೀಟರ್ ನೀರು ಬೆರೆಸಿ ಎರಡು- ಮೂರು ಸಲ ಸಿಂಪಡಿಸಿದರು. ರೋಗ ಹತೋಟಿಯಾಯಿತು.
ತರಕಾರಿಗಳನ್ನು ಹತ್ತಿರದ ಸಂತೆಗಳಿಗೆ ಹೋಗಿ ಸ್ವತಃ ಮಾರಾಟ ಮಾಡುವುದು ಪದ್ಧತಿ. ಪತ್ನಿ ಸವಿತಾ ಕೃಷಿಯಲ್ಲಿ ಪತಿಯ ಹೆಗಲಿಗೆ ಸಾಥ್ ನೀಡುತ್ತಿದ್ದು ನಾಗಭೂಷಣ್‌ರು ವ್ಯಾಪಾರ- ವ್ಯವಹಾರಗಳಿಗೆಂದು ಹೊರಗೆ ಹೋದಾಗ ಬೇಸಾಯದ ಸಂಪೂರ್ಣ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ.
'ಮೊದ್ಲಿಗಿಂತ ಈಗ ಸ್ವಲ್ಪ ದುಡ್ಡು ಉಳೀತಾ ಇದೆ, ಅಂಗ್ಡಿಯಿಂದ ಗೊಬ್ರ-ಪಬ್ರ ತರಂಗಿಲ್ಲ, ಔಷಧಿ ಹೊಡೆಯಂಗಿಲ್ಲ, ತರಕಾರಿ ಕ್ವಾಲಿಟಿನೂ ಚೆನ್ನಾಗಿದೆ' ಎನ್ನುತ್ತಾರೆ ಸವಿತಾ.
ಇವರು ಸಾವಯವ ಗ್ರಾಮ ಸ್ಥಳ ಯೋಜನೆಯ ಸಕ್ರಿಯ ಸದಸ್ಯರಾಗಿದ್ದು, ಅದರಿಂದ ದೊರೆತ ಸೌಲಭ್ಯ ಹಾಗೂ ಮಾರ್ಗದರ್ಶನವನ್ನು ಶ್ರದ್ಧೆಯಿಂದ ಬಳಸಿಕೊಂಡಿದ್ದಾರೆ. ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಸಾಮಾಜಿಕ ಬದಲಾವಣೆ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಇವರ ಬದ್ಧತೆ ಕಂಡು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ.
- ಮಲ್ಲಿಕಾರ್ಜುನ ಹೊಸಪಾಳ್ಯ
krushikaimara@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


