ರೇಷ್ಮಾ ಚರಿಷ್ಮಾ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿ ಗ್ರಾಮದ ರೈತ ಎಚ್.ಜಿ. ಗೋಪಾಲಗೌಡರಿಗೆ...

25 ವರ್ಷದ ಹಿಂದಿನ ಮಾತು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿ ಎಂಬ ಗ್ರಾಮದ ರೈತ ಎಚ್.ಜಿ. ಗೋಪಾಲಗೌಡರಿಗೆ ತುತ್ತು ಅನ್ನಕ್ಕೂ ಗತಿಯಿಲ್ಲದ ಪರಿಸ್ಥಿತಿ. ಜೀವನ ಸಾಗಿಸೋದೇ ಕಷ್ಟವಾಗಿತ್ತು. ಬಡತನವೇ ಅವರ ಮನೆಯಲ್ಲಿ ರಾಜ್ಯ'ಭಾರ' ಮಾಡುತ್ತಿತ್ತು. ಆದರೆ ಹೇಗಾದರೂ ಮಾಡಿ ಬದುಕು ಕಟ್ಟಿಕೊಳ್ಳಬೇಕೆಂಬ ತುಡಿತ ಮಾತ್ರ ಬತ್ತಿರಲಿಲ್ಲ. ಆಗ ಅವರು ಕೈ ಹಾಕಿದ್ದೇ ರೇಷ್ಮೆ ಬೇಸಾಯಕ್ಕೆ.
ಇರುವುದು ನಾಲ್ಕು ಎಕರೆ ಜಮೀನು. ಈ ಭಾಗದಲ್ಲಿ ವಾರ್ಷಿಕ ಮಳೆ ಪ್ರಮಾಣವೂ ತೀರಾ ಕಮ್ಮಿ. ಇದರಿಂದ ಸಹಜವಾಗಿ ಬೆಳೆಯೂ ಸರಿಯಾಗಿ ಬರುತ್ತಿರಲಿಲ್ಲ. 'ನಾನು ಯಾಕೆ ರೇಷ್ಮೆ ಬೆಳೀಬಾರದು' ಎಂದು ಆಲೋಚಿಸಿ ಕಾರ್ಯರೂಪಕ್ಕಿಳಿಸಿದರು. ಅದರಲ್ಲಿ ಇತರ ರೈತರಿಗಿಂತ ವಿಭಿನ್ನ ಮಾರ್ಗ ಅನುಸರಿಸಿದರು. ಹೀಗಾಗಿ ಭರ್ಜರಿ ಯಶಸ್ಸು ಕಂಡರು. ಈಗ ಅವರು ರಾಜ್ಯದ ಪ್ರಗತಿಪರ ರೇಷ್ಮೆ ಬೆಳೆಗಾರ, ಕೃಷಿಕರ ಮಾರ್ಗದರ್ಶಕ. 'ಕೃಷಿ ರತ್ನ', 'ಕೃಷಿ ಪಂಡಿತ' ಸೇರಿದಂತೆ ಹಲವು ಪ್ರಶಸ್ತಿಗಳ ಸರದಾರ. ಅಷ್ಟೇ ಅಲ್ಲ, ಬಡತನವನ್ನು ಬಡಿದೋಡಿಸಿ ಬದುಕು ಕಟ್ಟಿಕೊಂಡ ಸಾಧಕರೆನಿಸಿಕೊಂಡರು.
ಸಾಧನೆಯ ಪಥ...
ಗೋಪಾಲಗೌಡರು ಕಲಿತದ್ದು ಎಸ್ಸೆಸ್ಸೆಲ್ಸಿ. ಕೃಷಿಯಲ್ಲೇ ಸಾಧನೆ ಮಾಡಬೇಕೆಂಬ ಹಂಬಲ. ಆರಂಭದಲ್ಲಿ ಸಾಕಷ್ಟು ಪರಿಶ್ರಮಪಟ್ಟರು. ಗುರಿ ಮಾತ್ರ ಸ್ಪಷ್ಟವಿತ್ತು. ಇರುವ ನಾಲ್ಕು ಜಮೀನಿಗಾಗಿ ಬೋರ್‌ವೆಲ್ ಹಾಕಿಸಿದರು. ಅದು ಕೇವಲ 2 ಎಕರೆ ಭೂಮಿಗೆ ಸಾಕಾಗುತ್ತಿತ್ತು. ಅದಕ್ಕಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರು. ಬಳಿಕ ರೇಷ್ಮೆ ಸಾಕಣೆಗೆ ತಮ್ಮನ್ನು ಅರ್ಪಿಸಿಕೊಂಡರು. ಪೂರಾ ಸಾವಯವ ಮಾರ್ಗ ಅನುಸರಿಸಿದರು. ಹೊಸಹೊಸ ತಂತ್ರಜ್ಞಾನ ಅಳವಡಿಸಿಕೊಂಡರು. ಮೆಲ್ಲನೆ ರೇಷ್ಮೆ ಕೈಹಿಡಿಯತೊಡಗಿತು. ನಿಧಾನವಾಗಿ ಮತ್ತಷ್ಟು ಜಮೀನು ಕೊಂಡುಕೊಂಡರು. ರೇಷ್ಮೆ ಜತೆಗೆ ರಾಗಿ, ಜೋಳ, ಮೆಕ್ಕೆಜೋಳ ಬೆಳೆದರು. ಅಲ್ಲದೆ, ಕುರಿ, ಜೇನು ಸಾಗಾಣಿಕೆ ಶುರು ಹಚ್ಚಿಕೊಂಡರು. ನೋಡುನೋಡುತ್ತಲೇ ಗೋಪಾಲಗೌಡರು ಸಾಧನೆ ಶಿಖರ ಏರಿ ಬಿಟ್ಟರು!
ಅರಸಿ ಬಂದಳು ಲಕ್ಷ್ಮೀ
ಜಮೀನಿಗೆ ರೇಷ್ಮೆ, ಕುರಿ ತ್ಯಾಜ್ಯವನ್ನೆ ಗೊಬ್ಬರವಾಗಿ ಬಳಸುತ್ತಾರೆ. ವಾರ್ಷಿಕ ಏನಿಲ್ಲವೆಂದರೂ ಕನಿಷ್ಠ 11 ರೇಷ್ಮೆ ಬೆಳೆ ತೆಗೆಯುತ್ತಾರೆ. ಸದ್ಯ 16 ಎಕರೆ ಜಮೀನಿಗೆ ಅವರು ಒಡೆಯ! ಆ ಪೈಕಿ 11 ಎಕರೆಯಲ್ಲಿ ರೇಷ್ಮೆ ಬೇಸಾಯ. ಅದರಿಂದ ತಿಂಗಳಿಗೆ 800ರಿಂದ 1000 ಕೆಜಿ ಇಳುವರಿ ಪಡೆಯುತ್ತಾರೆ. ಮಾರುಕಟ್ಟೆಯಲ್ಲಿ ಕೆಜಿ ರೇಷ್ಮೆಗೆ 325 ಇದೆ. ಹೀಗಾಗಿ ತಿಂಗಳಿಗೆ ಲಕ್ಷಗಟ್ಟಲೇ ಆದಾಯ.
ಹುಡುಕಿ ಬಂದವು ಪ್ರಶಸ್ತಿಗಳು
ಗೋಪಾಲಗೌಡರನ್ನು ಹುಡುಕಿಕೊಂಡು ಹಲವಾರು ಪ್ರಶಸ್ತಿಗಳು ಬಂದಿವೆ. ಆ ಪೈಕಿ ರಾಜ್ಯ ಸರ್ಕಾರದಿಂದ ಕೃಷಿ, ಕೃಷಿ ರತ್ನ ಮತ್ತು ಕೃಷಿ ಪಂಡಿತ ಪ್ರಶಸ್ತಿ ನೀಡಲಾಗಿದೆ. ಅಲ್ಲದೆ, ಹಲವಾರು ಸಂಘ, ಸಂಸ್ಥೆಗಳೂ ಪ್ರಶಸ್ತಿ ನೀಡಿ ಗೌರವಿಸಿವೆ. ಕೃಷಿಗೆ ಸಂಬಂಧಿಸಿದ ಹಲವಾರು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಜನಸಾಗರ
ಇನ್ನು ಗೋಪಾಲಗೌಡರ ಸಾಧನೆ ಚಿಕ್ಕಬಳ್ಳಾಪುರ ಜಿಲ್ಲೆ ದಾಟಿ ಇಡೀ ರಾಜ್ಯವನ್ನೆ ಪಸರಿಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೊಪ್ಪಳ, ಬಿಜಾಪುರ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಹಿಂಡು- ಹಿಂಡಾಗಿ ರೈತರು ಬಂದು ಅವರ ಜಮೀನನ್ನು ಸಂದರ್ಶಿಸುತ್ತಾರೆ. ಕೃಷಿ ಇಲಾಖಾಧಿಕಾರಿಗಳೂ ಇವರ ಸಾಧನೆ ನೋಡಿ ಬೆರಗುಗೊಂಡಿದ್ದಾರೆ. ಶೈಕ್ಷಣಿಕ ಪ್ರವಾಸಕ್ಕಾಗಿ ಶಾಲಾ ಮಕ್ಕಳು ಗೋಪಾಲಗೌಡರ ಜಮೀನಿಗೆ ಧಾಂಗುಡಿ ಇಡುತ್ತಿದ್ದಾರೆ. ಅವರ ಸಂಪರ್ಕಕ್ಕಾಗಿ 9448138397.
ಆವಿಷ್ಕಾರದ ಹರಿಕಾರ
ಗೋಪಾಲಗೌಡರು ಸದಾ ಕ್ರಿಯಾಶೀಲರು. ಕೃಷಿಯಲ್ಲಿ ಹಲವು ಶೋಧಗಳನ್ನು ಮಾಡಿದ್ದಾರೆ. ಆ ಪೈಕಿ ರೇಷ್ಮೆಗೆ ಕಾಡುವ ಹೂಜಿ ಹುಳು ಬಾಧೆಗೆ ಮದ್ದು ಕಂಡು ಹಿಡಿದಿದ್ದಾರೆ. ಅದುವೇ ರ್ಯಾಟ್ ಗಮ್. ಅದನ್ನು ಪಿವಿಸಿ ಪೈಪ್‌ನಲ್ಲಿ ಹಾಕಿ ಕಿಟಕಿ ಬಳಿ ಇಟ್ಟರೆ ಹೂಜಿ ನೊಣ ಬಾಧೆಯಿಂದ ಮುಕ್ತಿ ಪಡೆಯಬಹುದು. ಅದೇ ರೀತಿ ರೇಷ್ಮೆಗೆ ಬಳಕೆಯಾಗುವ ಸುಧಾರಿತ ಚಂದ್ರಂಕಿ ಕಂಡುಹಿಡಿದಿದ್ದಾರೆ. ಇದರಿಂದ ಶೇ. 30 ರಷ್ಟು ಆಳುಗಳ ಉಳಿತಾಯವಾಗುತ್ತದೆ. ಇವೆರಡು ಆವಿಷ್ಕಾರಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಕೂಡ ಲಭಿಸಿದೆ.
ರೈತಕೂಟ
ಕೃಷಿಯಲ್ಲಿ ಸಾಧನೆ ಮಾಡಬೇಕೆನ್ನುವವರಿಗೆ ಮಾರ್ಗದರ್ಶನ ನೀಡುತ್ತಾರೆ. ಅದಕ್ಕಾಗಿ ರೈತಕೂಟವೊಂದನ್ನು ಸ್ಥಾಪಿಸಿ ಅದರ ಮೂಲಕ ಹಲವಾರು ರೈತರ ಉಪಯೋಗಕ್ಕಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಲ್ಲದೆ, ಇವರು ಸ್ಥಾಪಿಸಿದ ರೈತಕೂಟವು ರಾಜ್ಯದಲ್ಲಿಯೇ ಉತ್ತಮ ಕೂಟವೆಂದು ಹೆಸರು ಗಳಿಸಿದೆ. ಇದು ಅವರ ಕಾರ್ಯವೈಖರಿಗೆ ಸಾಕ್ಷಿ.
- ಮಹೇಶ್ ಅರಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


